ಮಂಗಳವಾರ, ನವೆಂಬರ್ 19, 2019
22 °C
ಸಿಬಿಐ ದಾಖಲಿಸಿರುವ ಪ್ರಕರಣ

ಎಸ್‌.ಎನ್‌. ಕೃಷ್ಣಯ್ಯ ಶೆಟ್ಟಿ ವಿರುದ್ಧದ ₹ 3.53 ಕೋಟಿ ವಂಚನೆ ಆರೋಪ

Published:
Updated:
Prajavani

ಬೆಂಗಳೂರು: ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ತಿರುಪತಿ ಲಡ್ಡು ಮತ್ತು ಗಂಗಾಜಲ ಹಂಚುತ್ತಾ ಪ್ರಚಾರದ ಮುಂಚೂಣಿಯಲ್ಲಿರುತ್ತಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ವಿರುದ್ಧದ ₹ 3.53 ಕೋಟಿ ಬ್ಯಾಂಕ್‌ ಸಾಲದ ವಂಚನೆ ಪ್ರಕರಣ ಈಗ ಸದ್ದು ಮಾಡುತ್ತಿದೆ.

‘ಈ ಪ್ರಕರಣದಲ್ಲಿ ನನ್ನನ್ನು ದೋಷಾರೋಪ ಪಟ್ಟಿಯಿಂದ ಕೈಬಿಡಬೇಕು’ ಎಂದು ಕೋರಿ ಕೃಷ್ಣಯ್ಯ ಶೆಟ್ಟಿ ಸಲ್ಲಿಸಿರುವ ಕ್ರಿಮಿನಲ್‌ ಪುನರಾವಲೋಕನ ಅರ್ಜಿ ಮಂಗಳವಾರ (ಸೆ.17) ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

‘ಮೆಸರ್ಸ್‌ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌’ ಮಾಲೀಕತ್ವ ಹೊಂದಿದ್ದ ಕೃಷ್ಣಯ್ಯ ಶೆಟ್ಟಿ ನಾಲ್ಕು ವರ್ಷಗಳ ಅವಧಿಯಲ್ಲಿ ಲೇಔಟ್‌ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಪಡೆದಿದ್ದ ಸಾಲ ₹ 7 ಕೋಟಿಗೂ ಹೆಚ್ಚಿದ್ದು, ಇದರಲ್ಲಿ ಅವರು ₹ 3.53 ಕೋಟಿ ಸಾಲವನ್ನು ಇನ್ನೂ ತೀರಿಸಿಲ್ಲ’ ಎಂಬುದು ಸಿಬಿಐ ಆಕ್ಷೇಪ.

ಪ್ರಕರಣವೇನು?: ‘ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್‌ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇಔಟ್‌ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ’ ಎಂಬುದು ಸಿಬಿಐ ಆರೋಪ.

‘ಲೇಔಟ್‌ ನಿರ್ಮಾಣಕ್ಕೆ ಇವರು ಬಯಪಾದಿಂದ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಯೋಜನಾ ಮಂಜೂರಾತಿ ಪಡೆದಿಲ್ಲ. ಬೆಸ್ಕಾಂ ಮತ್ತು ಜಲಮಂಡಳಿಯಿಂದ ನಿರಾಕ್ಷೇಪಣ ಪತ್ರವನ್ನೂ ಪಡೆದಿಲ್ಲ. ಅಂಯೆಯೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಭಿವೃದ್ಧಿ ಶುಲ್ಕವನ್ನೂ ಪಾವತಿ ಮಾಡಿರುವುದಿಲ್ಲ’ ಎಂದು ಸಿಬಿಐ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

‘ಅಭಿವೃದ್ಧಿ ಶುಲ್ಕಕ್ಕೆ ಸಂಬಂಧಿಸಿದ ದಾಖಲೆಗಳು ಖೊಟ್ಟಿ ಎಂದು ಗೊತ್ತಿದ್ದೂ ಕೃಷ್ಣಯ್ಯ ಶೆಟ್ಟಿ ಅವರು, ಸೆಲ್ಫ್‌ ಚೆಕ್‌ಗಳಿಗೆ ಮತ್ತು ಇತರ ಚೆಕ್‌ಗಳಿಗೆ ಶ್ರೀ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿರುತ್ತಾರೆ’ ಎಂದು ವಿವರಿಸಲಾಗಿದೆ.

ಬ್ಯಾಂಕ್‌ನಿಂದ ಸಾಲ ಪಡೆಯಲು ಸಾಲಗಾರರು, ಬ್ಯಾಂಕ್‌ ಮತ್ತು ಯೋಜನೆ ನಿರ್ಮಾಣಗಾರರ ಮಧ್ಯದ ತ್ರಿಪಕ್ಷೀಯ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುವ ಕೃಷ್ಣಯ್ಯ ಶೆಟ್ಟಿ, ಈ ಪ್ರಕರಣದಲ್ಲಿ ಎರಡನೇ ಆರೋಪಿ. ಎಂ.ಟಿ.ವಿ ರೆಡ್ಡಿ ಮೊದಲ ಆರೋಪಿ.

2013ರಲ್ಲಿ ತಿರಸ್ಕೃತಗೊಂಡಿದ್ದ ಮನವಿ

‘ಈ ಪ್ರಕರಣದಲ್ಲಿ ನನ್ನ ತಪ್ಪಿಲ್ಲ. ಆದ್ದರಿಂದ ನನ್ನನ್ನು ಕೈಬಿಡಬೇಕು’ ಎಂದು ಕೋರಿದ್ದ ಕೃಷ್ಣಯ್ಯ ಶೆಟ್ಟಿ ಅವರ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯ 2013ರ ಡಿಸೆಂಬರ್‌ ಮೊದಲ ವಾರದಲ್ಲಿ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಅವರು 2104ರ ಫೆಬ್ರುವರಿ 12ರಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ದಾಖಲಿಸಿರುವ ಈ ಪ್ರಕರಣದಲ್ಲಿ ಕೃಷ್ಣಯ್ಯ ಶೆಟ್ಟಿ ವಿರುದ್ಧ ದೋಷಾರೋಪ ಪಟ್ಟಿ ಹೊರಿಸಲಾಗಿದೆ. 

ಪ್ರತಿಕ್ರಿಯಿಸಿ (+)