ಸೋಮವಾರ, ಅಕ್ಟೋಬರ್ 14, 2019
22 °C
ರಾಯಲ್ ಮೀನಾಕ್ಷಿ ಮಾಲ್‌ಗೆ ಲಾಭ: ಬೊಮ್ಮನಹಳ್ಳಿ ವಲಯದಲ್ಲಿ ಪ್ರಮಾದಗಳ ಸರಮಾಲೆ

ಬಿಬಿಎಂಪಿಗೆ ₹11 ಕೋಟಿ ನಷ್ಟ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು ಹಾಗೂ ಆರೋಗ್ಯ ಅಧಿಕಾರಿಗಳ ಕಚೇರಿ ಎಸಗಿದ ಪ್ರಮಾದದಿಂದಾಗಿ ₹11 ಕೋಟಿಯಷ್ಟು ಆದಾಯ ನಷ್ಟವಾಗಿದೆ ಎಂದು ಭಾರತೀಯ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಪ‍ಂಚಾಯತ್‌ ರಾಜ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ವಾರ್ಷಿಕ ತಾಂತ್ರಿಕ ಪರಿಶೀಲನೆ ಕುರಿತ ಸಿಎಜಿ ವರದಿಯನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು  ಆಸ್ತಿ ತೆರಿಗೆ ದರವನ್ನು ತಪ್ಪಾಗಿ ನಿರ್ಧರಿಸಿದ್ದರಿಂದಾಗಿ ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್‌ಗೆ ಅನುಕೂಲವಾಯಿತು. ಇದರಿಂದಾಗಿ ಬಿಬಿಎಂಪಿಗೆ ₹6.72 ಕೋಟಿ ಆದಾಯ ನಷ್ಟವಾಯಿತು.

ಬಿಬಿಎಂಪಿಯು ಆಸ್ತಿ ತೆರಿಗೆಯನ್ನು ನಿರ್ಧಾರ ಮಾಡಲು ವಿವಿಧ ಪ್ರದೇಶ ಹಾಗೂ ರಸ್ತೆಗಳನ್ನು ವಲಯಗಳಾಗಿ ವರ್ಗೀಕರಿಸಿ ಅಲ್ಲಿ ಖಾಲಿ ಇರುವ ನಿವೇಶನ ಹಾಗೂ ಕಟ್ಟಡಗಳ ಬಳಕೆಯ ಸ್ವರೂಪಕ್ಕೆ ಬೇರೆ ಬೇರೆ ರೀತಿಯ ದರಗಳನ್ನು ನಿಗದಿ ಮಾಡಿದೆ. ಇದರನ್ವಯವೇ ದರವನ್ನು ನಿರ್ಧರಣೆ ಮಾಡಬೇಕಾಗಿತ್ತು. ಬೊಮ್ಮನಹಳ್ಳಿ ವಲಯದ ಅರಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿನ ರಾಯಲ್‌ ಮೀನಾಕ್ಷಿ ಮಾಲ್‌ ಪ್ರಕರಣದಲ್ಲಿ ಆಸ್ತಿ ತೆರಿಗೆ ನಿರ್ಧರಣೆ ನಿಯಮಗಳಿಗೆ ಅನುಗುಣವಾಗಿಲಿಲ್ಲ. 81,885 ಚದರಡಿಗಳ ಪ್ರದೇಶಕ್ಕೆ ಚದರಡಿಗೆ ₹6ರಂತೆ ತಪ್ಪಾಗಿ ನಿರ್ಧರಣೆ ಮಾಡಲಾಗಿತ್ತು. ಇದರಿಂದಾಗಿ ನಷ್ಟ ಸಂಭವಿಸಿತು ಎಂದು ಸಿಎಜಿ ವರದಿ ಉಲ್ಲೇಖಿಸಿದೆ.

ಯಾವುದೇ ವರ್ಷದ ಅಕ್ಟೋಬರ್ 1ನಂತರ ಕಟ್ಟಡವನ್ನು ಪೂರ್ಣಗೊಳಿಸಿದ್ದರೆ ವರ್ಷದ ಎರಡನೆಯ ಅವಧಿಗೆ ಆಸ್ತಿ ತೆರಿಗೆ ಹಾಗೂ 1ಕ್ಕೆ ಮೊದಲು ಪೂರ್ಣಗೊಳಿಸಿದ್ದರೆ ಆಸ್ತಿ ತೆರಿಗೆಯನ್ನು ಪೂರ್ಣವರ್ಷಕ್ಕೆ ಪಾವತಿಸಿಕೊಳ್ಳಬೇಕು ಎಂಬುದು ನಿಯಮ. ಮೀನಾಕ್ಷಿ ಮಾಲ್‌ಗೆ 2010ರಲ್ಲಿ ಸಿ ವಲಯದ ಅನುಭೋಗ ಪತ್ರ ನೀಡಿದ್ದಾರೆ. ಅದರ ಅನುಸಾರ 6,67,630 ಚದರಡಿಗಳಷ್ಟಿದೆ. ಈ ಪೈಕಿ ಐದರಿಂದ ಏಳು ಮಹಡಿಗಳಲ್ಲಿ ಏಳು ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳಿವೆ. ಪಾರ್ಕಿಂಗ್‌ ಕೂಡ ಇದೆ.

2010ರ ಡಿಸೆಂಬರ್‌ನಲ್ಲಿ ಅನುಭೋಗ ಪ್ರಮಾಣ ಪತ್ರ ನೀಡಿದ್ದರಿಂದಾಗಿ 2010–11ರ ಎರಡನೆಯ ಅರ್ಧ ಅವಧಿಗೆ ನಿರ್ಮಿತ ಕಟ್ಟಡದ ಮೇಲೆ ₹1.17 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಾಗಿತ್ತು. ಆದರೆ, ತೆರಿಗೆದಾರರು ಪೂರ್ಣವರ್ಷದ ಲೆಕ್ಕದಲ್ಲಿ ಭೂಮಿಗೆ ಮಾತ್ರ ₹68 ಸಾವಿರ ಆಸ್ತಿ ತೆರಿಗೆ ಪಾವತಿಸಿದ್ದರು. ಇದನ್ನು ಪರಿಶೀಲಿಸಿದ ಜಂಟಿ ಆಯುಕ್ತರು ₹88 ಸಾವಿರಕ್ಕೆ ಪರಿಷ್ಕರಿಸಿದರು. ಇದರಿಂದಾಗಿ ₹1.16 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸದೇ ಇರಲು ಅವಕಾಶ ನೀಡಿದ ಪ್ರಮಾದ ನಡೆಯಿತು.

ಕೇಂದ್ರೀಕೃತ ವಾತಾನುಕೂಲ ಅಥವಾ ಮಲ್ಟಿಫ್ಲೆಕ್ಸ್‌ ಪ್ರದೇಶಗಳಲ್ಲಿನ ಚದರಡಿಗೆ ವಾತಾನುಕೂಲ ಪ್ರದೇಶಕ್ಕೆ ₹20 ಹಾಗೂ ಮಲ್ಟಿಫ್ಲೆಕ್ಸ್‌ಗೆ ₹12 ರಂತೆ ದರ ನಿಗದಿಮಾಡಬೇಕು. ಆದರೆ,79153 ಚದರಡಿ ವ್ಯಾಪ್ತಿ ಮಲ್ಟಿಪ್ಲೆಕ್ಸ್‌  ಹಾಗೂ 2732 ವಾತಾನಕೂಲ ಪ್ರದೇಶಕ್ಕೆ ಚದರಡಿಗೆ ₹6ರಂತೆ  ಜಂಟಿ ಆಯುಕ್ತರು ದರ ನಿಗದಿ ಮಾಡಿದರು. ಕಡಿಮೆ ದರದಲ್ಲಿ ನಿಗದಿ ಮಾಡಿದ್ದರಿಂದಾಗಿ 2011ರಿಂದ 2018ರ ಅವಧಿಯಲ್ಲಿ ₹5.56 ಕೋಟಿ ಆದಾಯ ನಷ್ಟವಾಯಿತು ಎಂದು ವರದಿ ವಿವರಿಸಿದೆ.

2682 ಡಿ.ಡಿಗಳೇ ಇಲ್ಲದೇ ವಂಚನೆ!

ವಾಸ್ತವವಾಗಿ ಡಿಮ್ಯಾಂಡ್ ಡ್ರಾಫ್ಟ್‌(ಡಿ.ಡಿ) ಇರದೇ ಇದ್ದರೂ ಅದು ಇದೆ ಎಂದು ಸುಳ್ಳು ತೋರಿಸಿ ಹಣ ದುರುಪಯೋಗ ಹಾಗೂ ಆದಾಯ ನಷ್ಟ ಮಾಡಿದ ಪ್ರಕರಣ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಸಿಎಜಿ ವರದಿ ಹೇಳಿದೆ.

ವಾಣಿಜ್ಯ ಪರವಾನಗಿಗಳನ್ನು ನೀಡುವಲ್ಲಿ ವಂಚನೆ, ಆನ್‌ಲೈನ್‌ ಪರವಾನಗಿ ನೀಡುವಾಗ ಡಿ.ಡಿ ಸಂಖ್ಯೆಯನ್ನೇ ಬದಲಿಸಿರುವುದರಿಂದಾಗಿ ₹3.75 ಕೋಟಿ ನಷ್ಟ ಹಾಗೂ ₹22.44 ಲಕ್ಷ ಮೊತ್ತದ 354 ಚೆಕ್‌ ಅಥವಾ ಡಿ.ಡಿಗಳನ್ನು ಜಮೆ ಮಾಡದೇ ಮೋಸ ಎಸಗಲಾಗಿದೆ ಎಂದು ವರದಿ ವಿವರಿಸಿದೆ.

ಬೊಮ್ಮನಹಳ್ಳಿಯ ಆರೋಗ್ಯಾಧಿಕಾರಿ ಕಚೇರಿಯಲ್ಲಿ 2014ರಿಂದ 2018ರ ಅವಧಿಯಲ್ಲಿ 10,598 ಪರವಾನಗಿಗಳನ್ನು ನೀಡಿ, ₹13.03 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, 525  ವಾಣಿಜ್ಯ ಪರವಾನಗಿಗಳಲ್ಲಿ ಡಿ.ಡಿ ಸಂಖ್ಯೆಯನ್ನು ಖಾಲಿ ಬಿಡಲಾಗಿತ್ತು.  ಇದನ್ನು ಪರಿಶೀಲಿಸಿದಾಗ ಒಂದೇ ಡಿ.ಡಿ ಸಂಖ್ಯೆಯನ್ನು ಎರಡು ಅಥವಾ ಹೆಚ್ಚುಬಾರಿ ನಮೂದಿಸಿ(ಕೆಲವು ಬಾರಿ 45 ಬಾರಿ ನಮೂದಿಸಿ) 881 ಪರವಾನಗಿಗಳನ್ನು ನೀಡಿರುವುದು ಪತ್ತೆಯಾಗಿದೆ. ಈ ಪೈಕಿ 270 ಪರವಾನಗಿಗಳಿಗೆ ಸಂಬಂಧಿಸಿದ ₹39.72 ಲಕ್ಷ ಮೊತ್ತ ಪತ್ತೆಯಾಯಿತು. ಆದರೆ, 611 ಪರವಾನಗಿಗಳಿಗೆ ಸಂಬಂಧಿಸಿದ ₹58.45 ಲಕ್ಷ ಪತ್ತೆಯಾಗಲಿಲ್ಲ.

ಪುನರಾವರ್ತಿಸದೇ ಇದ್ದ 2071 ಡಿ.ಡಿಗಳಿಗೆ ಸಂಬಂಧಿಸಿದ 3.17 ಕೋಟಿ ಹಣ ಬ್ಯಾಂಕ್‌ಗಳಿಂದ ಪತ್ತೆಯಾಗಲೇ ಇಲ್ಲ. ಇದನ್ನು ದೃಢೀಕರಿಸಲು ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಯಿತು. 451 ಡಿ.ಡಿಗಳನ್ನು ತಾವು ನೀಡಿಲ್ಲ ಎಂದು ಕೆ.ಆರ್. ಪುರದ ಕೆನರಾಬ್ಯಾಂಕ್ ಹಾಗೂ ಪದ್ಮನಾಭನಗರದ ಎಸ್‌ಬಿಐ ಶಾಖೆಗಳು ತಿಳಿಸಿದವು. ಹೀಗೆ 10,073 ಪ್ರಕರಣಗಳಲ್ಲಿ ಪರಿಶೀಲಿಸಿದಾಗ ₹3.75 ಕೋಟಿ ಮೊತ್ತದ 2,682 ಡಿ.ಡಿಗಳು ಬ್ಯಾಂಕ್ ಖಾತೆಗಳಲ್ಲಿ ಪತ್ತೆಯೇ ಆಗಲಿಲ್ಲ. ವಾಣಿಜ್ಯ ಪರವಾನಗಿ ನೀಡಲು ಕಾಲ್ಪನಿಕ ಡಿ.ಡಿ. ಸಂಖ್ಯೆಗಳನ್ನು ನಮೂದಿಸಿರುವುದು ಬೆಳಕಿಗೆ ಬಂದಿದೆ. ಹಣ ದುರುಪಯೋಗ ಆಗಿರುವ ಸಂಶಯ ಇದರ ಹಿಂದೆ ಇದ್ದು, ಬೊಕ್ಕಸಕ್ಕೆ ₹3.75 ಕೋಟಿ ಆದಾಯವೂ ನಷ್ಟವಾಯಿತು ಎಂದು ವರದಿ ಹೇಳಿದೆ.

Post Comments (+)