ಚಿನ್ನ ಕದ್ದು ತಮಿಳುನಾಡಿನಲ್ಲಿ ಮಾರಾಟ

7

ಚಿನ್ನ ಕದ್ದು ತಮಿಳುನಾಡಿನಲ್ಲಿ ಮಾರಾಟ

Published:
Updated:

ಬೆಂಗಳೂರು: ಮನೆಗಳ ಬೀಗ ಮುರಿದು ನಗ–ನಾಣ್ಯ ದೋಚುತ್ತಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಬೇಗೂರು ಪೊಲೀಸರು, ₹17 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಬೊಮ್ಮನಹಳ್ಳಿಯ ಶಿವರಸನ್ ಅಲಿಯಾಸ್ ಶಿವ, ಮೈಲಸಂದ್ರದ ಬೋರೇಗೌಡ, ಗಾರ್ವೇಬಾವಿಪಾಳ್ಯದ ಪ್ರತಾಪ್ ಹಾಗೂ ಬೇಗೂರಿನ ಜಗದೀಶ್ ಅಲಿಯಾಸ್ ಜಕ್ಕ ಬಂಧಿತರು. ಮಧ್ಯಾಹ್ನ ಪ್ರತಿಷ್ಠಿತ ರಸ್ತೆಗಳಲ್ಲಿ ಸಂಚರಿಸಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಇವರು, ರಾತ್ರಿ ವೇಳೆ ಆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ನಗರದ ಹತ್ತು ಮನೆಗಳಲ್ಲಿ ಕಳ್ಳತನ ಮಾಡಿರುವ ಈ ಗ್ಯಾಂಗ್ , 1.5 ಕೆ.ಜಿಗೂ ಹೆಚ್ಚು ಚಿನ್ನವನ್ನು ತಮಿಳುನಾಡಿನ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿದೆ. ಅದನ್ನೆಲ್ಲ ಜಪ್ತಿ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಶಿವರಸನ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಎನ್‌ಫೀಲ್ಡ್ ಬೈಕ್‌ಗಳ್ಳರು: ದುಬಾರಿ ಮೌಲ್ಯದ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಮಂಡ್ಯದ ಕೀರ್ತಿ ಹಾಗೂ ಎಲೆಕ್ಟ್ರಾನಿಕ್‌ಸಿಟಿಯ ಇಮ್ರಾನ್ ಎಂಬುವರೂ ಬೇಗೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರಿಂದ 11 ರಾಯಲ್‌ ಎನ್‌ಫೀಲ್ಡ್, 2 ಪಲ್ಸರ್ ಹಾಗೂ ಮೂರು ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ.

ವಾಹನಗಳ ಡೀಲರ್ ಆಗಿದ್ದ ಕೀರ್ತಿಗೆ ಒಂದೂವರೆ ವರ್ಷದ ಹಿಂದೆ ಇಮ್ರಾನ್‌ ಜತೆ ಸ್ನೇಹವಾಗಿತ್ತು. ಬಳಿಕ ಇಬ್ಬರೂ ಸೇರಿ ಹಣದಾಸೆಗೆ ಬೈಕ್‌ಗಳನ್ನು ಕಳವು ಮಾಡಲು ಪ್ರಾರಂಭಿಸಿದರು. ರಾತ್ರಿವೇಳೆ ನಗರ ಸುತ್ತುತ್ತಿದ್ದ ಇವರು, ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕದಿಯುತ್ತಿದ್ದರು. ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಅವುಗಳನ್ನು ಮಾರುತ್ತಿದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !