ಮಂಗಳವಾರ, ಡಿಸೆಂಬರ್ 10, 2019
26 °C
ಭೂಗಳ್ಳರ ವಿರುದ್ಧ ಸಿಸಿಬಿ ಕಾರ್ಯಾಚರಣೆ * ದಂಧೆಗೆ ರೌಡಿ ಲಕ್ಷ್ಮಣನ ತೋಳುಬಲ

‘ಮಿರ್ಲೆ’ ಮನೆಯಲ್ಲಿ ₹500 ಕೋಟಿ ವ್ಯವಹಾರದ ದಾಖಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ, ಚಂದ್ರಾಲೇಔಟ್ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ ಮಿರ್ಲೆ ವರದರಾಜು ಮನೆ ಮೇಲೆ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಸಿಸಿಬಿ ‍ಪೊಲೀಸರು, ₹500 ಕೋಟಿಗೂ ಅಧಿಕ ಮೌಲ್ಯದ ಭೂವ್ಯವಹಾರದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ವರದರಾಜು, ಕುಟುಂಬ ಸದಸ್ಯರ ಜತೆ ಕೆಂಗೇರಿ ಉಪನಗರದಲ್ಲಿ ನೆಲೆಸಿದ್ದಾನೆ. ಈತನ ವಿರುದ್ಧ ಇತ್ತೀಚೆಗೆ ಇಬ್ಬರು ಮಹಿಳೆಯರು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರಿಗೆ ದೂರು ಕೊಟ್ಟಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಲೋಕ್, ಆರೋಪಿ ವಿರುದ್ಧ ಕ್ರಮಕ್ಕೆ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿ ವರದರಾಜುನನ್ನು ಬಂಧಿಸಿದ ಪೊಲೀಸರು, ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಸಹಚರ ನಾಗರಾಜ್ ಅಲಿಯಾಸ್ ಡಿಪೊ ಎಂಬಾತನನ್ನೂ ವಶಕ್ಕೆ ಪಡೆದಿದೆ.

ಅಷ್ಟೊಂದು ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ವರದರಾಜುನನ್ನು ವಿಚಾರಿಸಿದಾಗ, ‘ನನ್ನ ಹೆಸರಿನಲ್ಲಿ ಮೂರು ಎಕರೆ ಜಮೀನು ಇದೆ. ಹಲವರಿಗೆ ಒಪ್ಪಂದದ ಮೇಲೆ ಸಾಲ ಕೊಟ್ಟಿದ್ದೇನೆ. ಶ್ರೀರಂಗಪಟ್ಟಣದಲ್ಲಿ ಬೆಲ್ಲದ ಕಾರ್ಖಾನೆಯನ್ನೂ ನಡೆಸುತ್ತಿದ್ದೇನೆ. ಇವೆಲ್ಲ ಅವೇ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು’ ಎಂದು ಹೇಳಿದ. ಆದರೆ, ಎಲ್ಲ ಕಾಗದ ಪತ್ರಗಳನ್ನೂ ಪರಿಶೀಲಿಸಿದಾಗ ನೂರಾರು ಎಕರೆ ಜಮೀನಿನ, ನಿವೇಶನಗಳ ಹಾಗೂ ಫ್ಲ್ಯಾಟ್‌ಗಳಿಗೆ ಸಂಬಂಧಿಸಿದ ದಾಖಲೆಗಳು ಅವಾಗಿದ್ದವು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಲೋಕ್‌, ‘ರೌಡಿ ಲಕ್ಷ್ಮಣನ ತೋಳುಬಲದಿಂದ ವರದರಾಜು ಭೂಕಬಳಿಕೆ ಮಾಡುತ್ತಿದ್ದ. ಇತ್ತೀಚೆಗೆ ತನ್ನದಲ್ಲದ ಜಾಗಕ್ಕೆ ಜೆಸಿಬಿ ನುಗ್ಗಿಸಿ ಒಂದು ಮನೆಯನ್ನು ಕೆಡವಿಸಿದ್ದ. ಈತನ ದಬ್ಬಾಳಿಕೆ ವಿರುದ್ಧ ಸಾಕಷ್ಟು ದೂರುಗಳು ಬಂದಿದ್ದವು’ ಎಂದು ಹೇಳಿದರು.

‘ವರದರಾಜು ವಿರುದ್ಧ ಈವರೆಗೆ 27 ಎಫ್‌ಐಆರ್‌ಗಳು ದಾಖಲಾಗಿವೆ. ನ್ಯಾಯಾಲಯದಲ್ಲೂ 80ಕ್ಕೂ ಹೆಚ್ಚು ವ್ಯಾಜ್ಯ
ಗಳಿವೆ. ಹೀಗಿದ್ದರೂ, ಆತನ ವಿರುದ್ಧ ರೌಡಿಪಟ್ಟಿ ತೆರೆಯದಿರುವುದು ಆಶ್ಚರ್ಯ. ವರದರಾಜುನನ್ನು ರೌಡಿಪಟ್ಟಿಗೆ ಸೇರಿಸುವಂತೆ ಕಮಿಷನರ್‌ಗೆ ತಕ್ಷಣ ಮನವಿ ಮಾಡಲಾಗುವುದು’ ಎಂದರು.

ನಕಲೆ ದಾಖಲೆಯಲ್ಲಿ ನಿಸ್ಸೀಮ: ನಕಲಿ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮನಾದ ವರದರಾಜು, ಅವುಗಳನ್ನೇ ಇಟ್ಟುಕೊಂಡು ಕಾನೂನು ಹೋರಾಟ ನಡೆಸುತ್ತಾನೆ. ಜಮೀನು ಕೊಡಲು ನಿರಾಕರಿಸಿದವರಿಗೆ ರೌಡಿಗಳ ಮೂಲಕ ಬೆದರಿಕೆ ಹಾಕಿಸುತ್ತಾನೆ. ‘ಪೊಲೀಸರಿಗೆ ದೂರು ಕೊಟ್ಟರೆ, ಮನೆಗೇ ಜೆಸಿಬಿ ನುಗ್ಗಿಸುತ್ತೇನೆ’ ಎಂದು ಬೆದರಿಸಿ ಭೂಮಿ ಕಬಳಿಸುತ್ತಾನೆ.

ಈತನಿಂದ ಸಂಕಷ್ಟಕ್ಕೆ ಸಿಲುಕಿದವರ ಪಟ್ಟಿಯಲ್ಲಿ ಗೃಹ ನಿರ್ಮಾಣ ಸೊಸೈಟಿಗಳೂ ಸೇರಿವೆ. ನಾಗರಬಾವಿಯ ವಿನಾಯಕ ಗೃಹನಿರ್ಮಾಣ ಸಂಘ, ರಾಜರಾಜೇಶ್ವರಿ ನಗರದ ರೆಂಕು–ಬಿಎಚ್‌ಇಎಲ್ ಗೃಹ ನಿರ್ಮಾಣ ಸಂಘ, ಜ್ಞಾನಭಾರತಿಯ ಕಲ್ಯಾಣ್ ಹೌಸಿಂಗ್ ಸೊಸೈಟಿ, ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿಗಳು ವರದರಾಜು ವಿರುದ್ಧ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕಾರ್ಪೊರೇಟರ್ ಬರಲೇ ಇಲ್ಲ: ಬ್ಯಾಡರಹಳ್ಳಿಯಲ್ಲಿ ಗೃಹ ನಿರ್ಮಾಣ ಸೊಸೈಟಿಯೊಂದು ನಿವೇಶನ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿತ್ತು. ಈ ವಿರುದ್ಧ ಜನ ಠಾಣೆಗಳ ಮೆಟ್ಟಿಲೇರಿದ್ದರು. ಆಗ ರೌಡಿ ಲಕ್ಷ್ಮಣ, ಸಮಸ್ಯೆಯನ್ನು ತಾನೇ ಬಗೆಹರಿಸುವುದಾಗಿ ಸೊಸೈಟಿ ಕಡೆಯಿಂದ ₹25 ಲಕ್ಷ ಪಡೆದು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿದ್ದ. ಆದರೂ, ಸಮಸ್ಯೆ ಬಗೆಹರಿದಿರಲಿಲ್ಲ ಎಂದು ಪೊಲೀಸರು ಹೇಳಿದರು.

ಸೊಸೈಟಿಯಿಂದ ವಂಚನೆಗೆ ಒಳಗಾದವರು ಹಾಗೂ ಮಹಿಳಾ ಕಾರ್ಪೊರೇಟರ್‌ ಒಬ್ಬರು ಸಿಸಿಬಿ ಕಚೇರಿಗೆ ಬಂದು ಅಳಲು ತೋಡಿಕೊಂಡಿದ್ದರು. ಆಗ, ಲಿಖಿತ ದೂರು ಕೊಡುವಂತೆ ಹೇಳಿದೆವು. ಹಾಗೆ ಹೇಳಿದ ಕೂಡಲೇ ಕಚೇರಿಯಿಂದ ಹೊರಟು ಹೋದವರೂ, ಇನ್ನೂ ದೂರು ಕೊಡಲು ಬಂದಿಲ್ಲ. ಹೀಗಾದರೆ ಭೂಗಳ್ಳರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಹೇಗೆ ಎಂದು ಪೊಲೀಸರು ಪ್ರಶ್ನಿಸಿದರು.

ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚನೆ

ವರದರಾಜು ವಿರುದ್ಧ ಈ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು, ‘ವರದರಾಜು ತಲೆಮರೆಸಿಕೊಂಡಿದ್ದಾನೆ’ ಎಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೆಂಗೇರಿ ಉಪನಗರದಲ್ಲೇ ಇದ್ದುಕೊಂಡು ರಾಜಾರೋಷವಾಗಿ ದಂಧೆ ನಡೆಸುತ್ತಿದ್ದರೂ, ಪೊಲೀಸರು ಆತನನ್ನು ಬಂಧಿಸದೆ ಆರೋಪಪಟ್ಟಿ ಸಲ್ಲಿಸಿದ್ದು ಸರಿಯಲ್ಲ. ಈ ವಿಚಾರವನ್ನು ಮರುಪರಿಶೀಲಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಡಿಸಿಪಿಗೆ ಪತ್ರ ಬರೆಯುತ್ತೇವೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

ಮನೆಯೋ? ಸಬ್ ರಿಜಿಸ್ಟ್ರಾರ್ ಕಚೇರಿಯೋ?

‘ವರದುರಾಜು ಮನೆಯಲ್ಲಿದ್ದ ದಾಖಲೆಗಳನ್ನು ನೋಡಿ ನಮಗೇ ಶಾಕ್ ಆಯಿತು. ಎರಡು ಅಲ್ಮೆರಾಗಳ ತುಂಬ ಭೂವ್ಯವಹಾರದ ಕಾಗದ ಪತ್ರಗಳನ್ನೇ ಜೋಡಿಸಿಟ್ಟಿದ್ದ. ನಾವು ಮನೆ ಮೇಲೆ ದಾಳಿ ನಡೆಸಿದ್ದೇವೋ, ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದೇವೋ ಎಂಬಂತೆ ಭಾಸವಾಗುತ್ತಿತ್ತು’ ಎಂದು ಅಧಿಕಾರಿಗಳು ಹೇಳಿದರು.


ಮನೆಯಲ್ಲಿ ಪತ್ತೆಯಾದ ದಾಖಲೆಗಳು

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು