ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ನೌಕರರ ಮುಷ್ಕರ; ಗ್ರಾಹಕರ ಪರದಾಟ

Last Updated 22 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ರಾಯಚೂರು: ಬ್ಯಾಂಕ್ ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬುಧವಾರ ಇಲ್ಲಿ ಬ್ಯಾಂಕ್ ಕಾರ್ಮಿಕ ಒಕ್ಕೂಟಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕೆಲಸದಿಂದ ದೂರ ಉಳಿದು ಮುಷ್ಕರ ನಡೆಸಿದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊರ ಗುತ್ತಿಗೆ ಪದ್ಧತಿ ಜಾರಿ ಬೇಡ, ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ಬ್ಯಾಂಕ್‌ಗಳ ವಿಲೀನ ಮಾಡಬಾರದು, ಖಂಡೇಲ್‌ವಾಲಾ ಸಮಿತಿ ಶಿಫಾರಸು ಜಾರಿಗೊಳಿಸಬಾರದು ಎಂದು ಒತ್ತಾಯಿಸಲಾಯಿತು.

ನಗರದಲ್ಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಬ್ಯಾಂಕ್‌ಗಳು ಸಂಪೂರ್ಣ ಬಂದ್ ಆಗಿದ್ದವು. ಸಾಮಾನ್ಯ ಗ್ರಾಹಕರು, ವ್ಯಾಪಾರಸ್ಥರು ತೊಂದರೆ ಪಡುವಂತಾಯಿತು.

ಇಲ್ಲಿನ ಗಾಂಧಿ ಚೌಕ್ ವೃತ್ತದ ಹತ್ತಿರ ಇರುವ ಕಾರ್ಪೊರೇಷನ್ ಬ್ಯಾಂಕ್ ಎದುರು ಸಮಾವೇಶಗೊಂಡ ವಿವಿಧ ಬ್ಯಾಂಕ್‌ಗಳ ನೌಕರರು ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬ್ಯಾಂಕ್ ಕಾರ್ಮಿಕ ಸಂಯುಕ್ತ ವೇದಿಕೆ ಕೇಂದ್ರ ಸಂಘಟನೆ ಕರೆಯ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದರು.

ಬ್ಯಾಂಕ್ ಕ್ಷೇತ್ರಕ್ಕೆ ಮಾರಕವಾದ ನೀತಿಗಳನ್ನು ಕೈ ಬಿಡಬೇಕು. ಸೇವೆಗೆ ರಾಜೀನಾಮೆ ಸಲ್ಲಿಸಿದವರಿಗೂ ಪಿಂಚಣಿ ಸೌಲಭ್ಯ ದೊರಕಿಸಬೇಕು. ಪಿಂಚಣಿ ಯೋಜನೆಯಲ್ಲಿ ಸುಧಾರಿತ ಕ್ರಮ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಆರ್‌ಡಿಸಿಸಿ ಬ್ಯಾಂಕ್ ನೌಕರರು, ಜೀವ ವಿಮಾ ನೌಕರರ ಸಂಘಟನೆಗಳು ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಜೀವ ವಿಮಾ ನೌಕರರ ಸಂಘಟನೆ ಪ್ರಧಾನ ಕಾರ್ಯದರ್ಶಿ ರವಿ ಮಾತನಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ರಾಷ್ಟ್ರೀಕೃತ ಬ್ಯಾಂಕ್ ನೌಕರರ ಸಂಘಟನೆ ಮುಖಂಡರಾದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಸುರೇಶ ವೈದ್ಯ,  ಕೆನರಾ ಬ್ಯಾಂಕ್‌ನ ರಾಘವೇಂದ್ರ ಕೋನಾಪುರ, ಪಾರ್ಥಸಾರಥಿ ಕನಕವೀಡು, ಹರೀಶ ಕೊಪ್ಪರ ಹಾಗೂ ಇತರರು ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT