ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಹಗರಣ: 115 ಅಧಿಕಾರಿಗಳ ಸ್ಥಾನಪಲ್ಲಟ

Last Updated 16 ಏಪ್ರಿಲ್ 2019, 18:16 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2019ರ ಜನವರಿ 25ರಂದು ಗೆಜೆಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಂತೆ 140 ಅಧಿಕಾರಿಗಳ ಸ್ಥಾನಪಲ್ಲಟಕ್ಕೆ ಸಂಬಂಧಿಸಿದ ಆದೇಶವನ್ನು ರಾಜ್ಯ ಸರ್ಕಾರ ಕಡೆಗೂ ಮಂಗಳವಾರ ಹೈಕೋರ್ಟ್‌ಗೆ ಸಲ್ಲಿಸಿತು.

ಈ ಕುರಿತಂತೆ ಎಸ್. ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಅವರು, ಈ ಕುರಿತ ವಿವರಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.

‘140 ಅಧಿಕಾರಿಗಳಲ್ಲಿ ಕೆಲವರು ರಾಜೀನಾಮೆ ಸಲ್ಲಿಸಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ನಿವೃತ್ತಿ ಆಗಿದ್ದಾರೆ. ಹೀಗಾಗಿ, ಒಟ್ಟು 115 ಅಧಿಕಾರಿಗಳ ಸ್ಥಾನಪಲ್ಲಟದ ಆದೇಶ ಪ್ರಕಟಿಸಲಾಗಿದೆ’ ಎಂದರು.

‘ಸ್ಥಾನಪಲ್ಲಟಕ್ಕೆ ಒಳಗಾದ ಅಧಿಕಾರಿಗಳಲ್ಲಿ ಕೆಲವರು ಚುನಾವಣಾ ಕರ್ತವ್ಯದ ಮೇಲಿದ್ದಾರೆ. ಹೀಗಾಗಿ ಅವರಿಗೆ ಹುದ್ದೆ ತೋರಿಸಲು ಆಗಿಲ್ಲ. ಹೀಗಾಗಿ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಬೇಕು’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕೋರ್ಟ್‌ ತೀರ್ಪಿನ ಪಾಲನೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ’ ಎಂದಿತು.

ಆದಾಗ್ಯೂ, ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಉಂಟಾಗಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಆದೇಶಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸುವುಂತೆ ಸೂಚಿಸಿ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಿತು.

ಗರಂ: ಸ್ಥಾನ ಪಲ್ಲಟಕ್ಕೆ ಒಳಗಾಗುವ ಪಟ್ಟಿಯಲ್ಲಿನ ಅಧಿಕಾರಿಗಳು ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ ಎಂದು ಉದಯ ಹೊಳ್ಳ ಪ್ರಸ್ತಾಪ ಮಾಡಿದ್ದಕ್ಕೆ ನ್ಯಾಯಪೀಠ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಸಿಎಟಿ ತಡೆ ಆದೇಶ

ಸ್ಥಾನಪಲ್ಲಟಕ್ಕೆ ಒಳಗಾಗುವ ಪಟ್ಟಿಯಲ್ಲಿದ್ದ ಆರು ಐಎಎಸ್ ಅಧಿಕಾರಿಗಳು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ.

ಕವಿತಾ ಎಸ್. ಮಣ್ಣಿಕೇರಿ, ಕರಿಗೌಡ, ಜಿ.ಸಿ.ವೃಷಭೇಂದ್ರ ಮೂರ್ತಿ, ಶಿವಾನಂದ ಕಾಪಸಿ, ಎಚ್.ಬಸವ ರಾಜೇಂದ್ರ ಮತ್ತು ಎಚ್.ಎಸ್.ಗೋಪಾಲಕೃಷ್ಣ ಸಿಎಟಿ ಮೆಟ್ಟಿಲೇರಿ ತಡೆಯಾಜ್ಞೆ ತಂದಿರುವ ಅಧಿಕಾರಿಗಳು.

ಸ್ಥಾನಪಲ್ಲಟದ ವಿವರ

*‘ಎ’ ವೃಂದದಲ್ಲಿರುವ 25 ಅಧಿಕಾರಿಗಳು ಅದೇ ವೃಂದದಲ್ಲಿ ಬೇರೆಸ್ಥಾನಗಳಿಗೆ ವರ್ಗ

* 17 ಅಧಿಕಾರಿಗಳು 'ಎ' ವೃಂದದದಿಂದ ‘ಬಿ' ವೃಂದಕ್ಕೆ ಹಿಂಬಡ್ತಿ

*17 ಅಧಿಕಾರಿಗಳು 'ಬಿ' ವೃಂದದದಿಂದ 'ಎ' ವೃಂದಕ್ಕೆ ಮುಂಬಡ್ತಿ

*81 ಅಧಿಕಾರಿಗಳು 'ಬಿ' ವೃಂದದಲ್ಲಿಯೇ ಬೇರೆ ಹುದ್ದೆಗಳಿಗೆ ವರ್ಗ

*28 ಅಧಿಕಾರಿಗಳು ಹುದ್ದೆ ಕಳೆದುಕೊಳ್ಳುವ ಭೀತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT