ನಗರದಲ್ಲಿ 1,450 ಮಂದಿಗೆ ಕುಷ್ಠರೋಗ: ಬಿಬಿಎಂಪಿ ಸಮೀಕ್ಷೆ

7
ಅಡೆತಡೆಗಳ ನಡುವೆಯೂ ರೋಗಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಬಿಬಿಎಂಪಿ

ನಗರದಲ್ಲಿ 1,450 ಮಂದಿಗೆ ಕುಷ್ಠರೋಗ: ಬಿಬಿಎಂಪಿ ಸಮೀಕ್ಷೆ

Published:
Updated:

ಬೆಂಗಳೂರು: ನಮಗ್ಯಾಕೆ ರೋಗ ಬರುತ್ತದೆ? ರೋಗ ಬಂದರೆ ನಾವೇ ಚಿಕಿತ್ಸೆ ಪಡೆಯುತ್ತೇವೆ, ನಿಮಗೆ ಅದೆಲ್ಲ ಏಕೆ? ಕುಷ್ಠ ರೋಗಿಗಳನ್ನು ಪತ್ತೆ ಹಚ್ಚುವ ಸಲುವಾಗಿ ನಡೆದ ಅಭಿಯಾನದ ವೇಳೆ ಮನೆ ಮನೆಗೆ ಭೇಟಿ ನೀಡಿದ ಬಿಬಿಎಂಪಿಯ ಆರೋಗ್ಯ ಕಾರ್ಯಕರ್ತರಿಗೆ ಸಿಕ್ಕ ಪ್ರತಿಕ್ರಿಯೆಗಳಿವು.

ಜನರ ಅಸಹಕಾರದ ನಡುವೆಯೂ ಈ ಅಭಿಯಾನದ ವೇಳೆ ನಗರದಲ್ಲಿ ಒಟ್ಟು 1,450 ಕುಷ್ಠರೋಗಿಗಳನ್ನು ಪತ್ತೆಹಚ್ಚುವಲ್ಲಿ ಬಿಬಿಎಂಪಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್‌ 22ರಿಂದ ನವೆಂಬರ್‌ 4ರವರೆಗೆ ನಡೆದ ಈ ಅಭಿಯಾನದಲ್ಲಿ ಕಾರ್ಯಕರ್ತರು 8.7 ಲಕ್ಷ ಮನೆಗಳಿಗೆ ಭೇಟಿ ನೀಡಿದ್ದರು. ಒಬ್ಬ ಪುರುಷ, ಒಬ್ಬ ಮಹಿಳಾ ಕಾರ್ಯಕರ್ತರು ಪ್ರತಿದಿನ 25 ಮನೆಗಳಿಗೆ ಹೋಗಿ ಸಮೀಕ್ಷೆ ನಡೆಸಿದ್ದರು.

‘ಈ ಆಂದೋಲನಕ್ಕೂ ಮೊದಲು ನಗರದಲ್ಲಿ 225 ರೋಗಿಗಳಿಗೆ ಮಾತ್ರ ಕುಷ್ಠರೋಗ ಇರುವ ಬಗ್ಗೆ ನಮಗೆ ಮಾಹಿತಿ ಇತ್ತು. ಅವರು ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ಈ ಸಮೀಕ್ಷೆಯಿಂದ ಹೊಸ ರೋಗಿಗಳು ಬೆಳಕಿಗೆ ಬಂದಿದ್ದಾರೆ. ಇವರಿಗೆ ಚಿಕಿತ್ಸೆ ಕೊಡಿಸಿ ಈ ರೋಗವನ್ನು ನಿರ್ಮೂಲ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದನ್ನು ಈಡೇರಿಸಲು ನಾವು ಶಕ್ತಿಮೀರಿ ಕೆಲಸ ಮಾಡಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್‌ ಹೇಳಿದರು.

‘ರೋಗಿಗಳು ಇರುವ ಸೂಕ್ಷ್ಮ ಪ್ರದೇಶಗಳನ್ನು (ಕೊಳಚೆ ಪ್ರದೇಶಗಳು ಸೇರಿದಂತೆ) ಗುರುತಿಸಿ ಪತ್ತೆ ಹಚ್ಚುವ ಕಾರ್ಯ ಆರಂಭಿಸಲಾಯಿತು. 8 ಸಾವಿರ ಕಾರ್ಯಕರ್ತರು ಇದಕ್ಕಾಗಿ ಕೆಲಸ ಮಾಡಿದರು. ಅವರಿಗೆ ಸಾಕಷ್ಟು ಸವಾಲುಗಳು ಎದುರಾದವು. ಆದರೂ ಛಲ ಬಿಡದೆ ಕೆಲಸ ಮಾಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ನಗರ ನಿವಾಸಿಗಳ ಅಸಹಕಾರ

ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರ ವಾಸಿಗಳು, ಕಾರ್ಯಕರ್ತರನ್ನು ಅನುಮಾನದಿಂದ ನೋಡುವುದು ಸಹಜವಾಗಿತ್ತು. ಪ್ರಶ್ನೆಗಳ ಸುರಿ‌ಮಳೆಯನ್ನೇ ನಾವು ಎದುರಿಸಬೇಕಾಗಿತ್ತು. ಅಷ್ಟೇ ಅಲ್ಲ, ‘ಬೇರೆ ಬೇರೆ ಸೋಗಿನಲ್ಲಿ ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಿದೆ. ನಿಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದೂ ಕೆಲವರು ಹೇಳಿದರು. ಗುರುತಿನ ಚೀಟಿ ತೋರಿಸಿದರೂ ನಂಬಲಿಲ್ಲ’ ಎನ್ನುತ್ತಾರೆ ಅಭಿಯಾನದಲ್ಲಿ ಭಾಗವಹಿಸಿದ್ದ ಆರೋಗ್ಯ ಕಾರ್ಯಕರ್ತರು.

ಬೆಂಗಳೂರು ದಕ್ಷಿಣ ಭಾಗದ ಕೆಲವು ಶ್ರೀಮಂತರ ಮನೆಗಳಂತೂ ಕಾರ್ಯಕರ್ತರಿಗೆ ಸವಾಲಾಗಿ ಪರಿಣಮಿಸಿದ್ದವು. ಅಲ್ಲಿ ಕಾರ್ಯಕರ್ತರನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ಅಷ್ಟೇ ಅಲ್ಲ ಕೆಲವರು ಗಲಾಟೆಯನ್ನೂ ಮಾಡಿದರು ಎಂದು ಡಾ. ವೆಂಕಟೇಶ್‌ ವಿವರಿಸಿದರು.

‘ಇನ್ನೂ ಕೆಲವು ಮನೆಗಳಿಗೆ ಕಾರ್ಯಕರ್ತರು ಭೇಟಿ ನೀಡಲು ಸಾಧ್ಯವಾಗಿಲ್ಲ. ಕೆಲವು ಮನೆಗಳಿಗೆ ಬೀಗ ಹಾಕಲಾಗಿತ್ತು. ಕಾರ್ಯಕರ್ತರು ನಾಲ್ಕೈದು ಬಾರಿ ಭೇಟಿ ನೀಡಿದರೂ ಈ ಮನೆಗಳಲ್ಲಿ ವಾಸವಿರುವ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅಂತಹ ಮನೆಗಳನ್ನು ತಲುಪುವುದು ನಮ್ಮ ಮುಂದಿನ ಗುರಿ’ ಎಂದು ಅವರು ಹೇಳಿದರು.

ಸಮೀಕ್ಷೆ ಹೇಗೆ?

‘ಕುಟುಂಬದಲ್ಲಿ ಯಾರಿಗಾದರೂ ಗಂಭೀರ ಆರೋಗ್ಯ ಸಮಸ್ಯೆಗಳು ಇವೆಯೇ, ದೇಹದಲ್ಲಿ ಮಚ್ಚೆ ಇದೆಯೇ, ಮಚ್ಚೆಯನ್ನು ಮುಟ್ಟಿದಾಗ ಸ್ಪರ್ಶ ಜ್ಞಾನ ಇಲ್ಲದ ಅನುಭವ ಆಗಿದೆಯೇ... ಎಂಬಿತ್ಯಾದಿ ಪ್ರಶ್ನೆಗಳನ್ನು ನಗರದ ನಿವಾಸಿಗಳಲ್ಲಿ ಕೇಳಲಾಯಿತು. ಅವರ ಉತ್ತರ ಆಧರಿಸಿ ಹೆಚ್ಚಿನ ತಪಾಸಣೆ ನಡೆಸಲಾಯಿತು. ಅನುಮಾನ ಬಂದಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು’ ಎಂದು ಡಾ. ವೆಂಕಟೇಶ್‌ ಹೇಳಿದರು.

ಪ್ರಶ್ನೆಯನ್ನೇ ಕೇಳದೆ ಮರಳಿದರು!

ನಗರದ ಕೆಲವು ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರು ಸರಿಯಾಗಿ ಮಾಹಿತಿ ಸಂಗ್ರಹಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

‘ನಮ್ಮ ಮನೆಗೆ ಬಂದಿದ್ದ ಕಾರ್ಯಕರ್ತೆಯೊಬ್ಬರು ‘ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ’ ಎಂಬ ಮಾಹಿತಿಯನ್ನಷ್ಟೇ ಕೇಳಿದರು. ಅನುಮಾನ ಬಂದು ನೀವು ಯಾರು ಎಂದು ವಿಚಾರಿಸಿದೆ. ಕುಷ್ಠರೋಗ ಪತ್ತೆ ಅಭಿಯಾನ ನಡೆಸುತ್ತಿರುವ ಕಾರ್ಯಕರ್ತರು ಎಂದು ಉತ್ತರಿಸಿದರು. ಆದರೆ, ಅವರು ನಮ್ಮ ಬಳಿ ರೋಗಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನೂ ಕೇಳಲಿಲ್ಲ. ದೇಹದಲ್ಲಿ ಮಚ್ಚೆ ಇದೆಯೇ ಎಂದು ತಪಾಸಣೆಯನ್ನೂ ಮಾಡಲಿಲ್ಲ’ ಎಂದು ಸುಬ್ರಹ್ಮಣ್ಯನಗರದ ನಿವಾಸಿ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಎಷ್ಟು ಮನೆಗಳಿಗೆ ಭೇಟಿ?

ಬೆಂಗಳೂರು ಪೂರ್ವ;1,93,806

ಬೆಂಗಳೂರು ದಕ್ಷಿಣ;2,90,205

ಬೆಂಗಳೂರು ಪಶ್ಚಿಮ;3,89,468

ಒಟ್ಟು;8,73,479

ಅಂಕಿಅಂಶ

27.75 ಲಕ್ಷ - ಸಮೀಕ್ಷೆ ವೇಳೆ ಮಾಹಿತಿ ನೀಡಿದವರು

225 - ಆಂದೋಲನಕ್ಕೂ ಮೊದಲು ನಗರದಲ್ಲಿ ಇದ್ದ ಕುಷ್ಠರೋಗಿಗಳು

8,000 - ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು

ಪತ್ತೆಯಾದ ರೋಗಿಗಳು

ಪೂರ್ವ; 862

ಪಶ್ಚಿಮ; 296

ದಕ್ಷಿಣ; 292

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !