ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರೊಬ್ಬರ ಮಗ, ಮಾಜಿ ಸಚಿವ ಜೈಲಿಗೆ ಹೋಗಿ ಬಂದರು...

Last Updated 29 ಡಿಸೆಂಬರ್ 2018, 20:47 IST
ಅಕ್ಷರ ಗಾತ್ರ

ಬೆಂಗಳೂರು: 2018ರಲ್ಲಿ ನಗರದ ಶಾಸಕರೊಬ್ಬರ ಮಗ ಹಾಗೂ ಮಾಜಿ ಸಚಿವ ಜೈಲಿಗೆ ಹೋಗಿ ಬಂದರು, ಲೋಕಾಯುಕ್ತರಿಗೂ ಕಚೇರಿಯಲ್ಲೇ ಚಾಕುವಿನಿಂದ ಇರಿಯಲಾಯಿತು. ಅದರ ಜೊತೆಗೆ, ಪತ್ರಕರ್ತೆ ಗೌರಿ ಲಂಕೇಶ್‌ ಹಂತಕರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದರು.

ಜನವರಿ: ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದರಪಾಳ್ಯದ ಎನ್‌.ಡಿ.ಸೆಪಲ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ದುರಸ್ತಿ ವೇಳೆ ಸ್ವಚ್ಛತಾ ಮೇಲ್ವಿಚಾರಕ ನಾರಾಯಣಸ್ವಾಮಿ (35), ಕಾರ್ಮಿಕರಾದ ಎಚ್‌. ಶ್ರೀನಿವಾಸ್‌ (58) ಹಾಗೂ ಮಾದೇಗೌಡ (42)‌ ಮೃತಪಟ್ಟರು.

ಫೆಬ್ರುವರಿ: ಯು.ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಶಾಂತಿನಗರ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಸಹಚರರು ಜೈಲು ಸೇರಿದರು.

*ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ ನಡೆಯಿತು. ಈ ಪ್ರಕರಣದಲ್ಲಿ ಆರೊಪಿ ತೇಜ್‌ರಾಜ್ ಶರ್ಮಾನನ್ನು ಪೊಲೀಸರು ಬಂಧಿಸಿದರು.

ಸೆಪ್ಟೆಂಬರ್: ದೇಹದಾರ್ಢ್ಯ ಸ್ಪರ್ಧೆ ವೇಳೆ ಜಿಮ್ ತರಬೇತುದಾರ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದ ಆರೋಪದಡಿ ನಟ ದುನಿಯಾ ವಿಜಯ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದರು.

ಅಕ್ಟೋಬರ್: ನಟ ಅರ್ಜುನ್‌ ಸರ್ಜಾ ವಿರುದ್ಧಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌, ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ನವೆಂಬರ್: ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಆ್ಯಂಬಿಡೆಂಟ್ ಕಂಪನಿ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದರು.

* ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಕಿಂಗ್‌ಪಿನ್ ಶಿವಕುಮಾರಯ್ಯ ಹಾಗೂ ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದರು.

* ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್‌ನ ಮನೆಯಲ್ಲಿ ವೈದ್ಯ ಗೋವಿಂದಪ್ರಕಾಶ್‌ (45) ಎಂಬಾತ, ತನ್ನ ತಾಯಿ ಮೂಕಾಂಬಿಕಾ (75) ಹಾಗೂ ತಂಗಿ ಶ್ಯಾಮಲಾ (40) ಅವರಿಗೆ ಓವರ್‌ಡೋಸ್‌ ನೀಡಿ ಕೊಂದ.

ಸದ್ದು ಮಾಡಿದ ಸಿಐಡಿ

ಮಾರ್ಚ್: ವಿಜಯಪುರದಲ್ಲಿ 9ನೇ ತರಗತಿ ಓದುತ್ತಿದ್ದ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇಬ್ಬರು ಬಾಲಕರು ಸೇರಿದಂತೆ ಮೂವರನ್ನು ಸಿಐಡಿ ಬಂಧಿಸಿತು. ಶಾಲೆಗೆ ಹೋಗುತ್ತಿದ್ದ ಆಕೆಯನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮನೆಯೊಂದಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದಿದ್ದರು.

ಆಗಸ್ಟ್: ಎಸ್‌ಐಟಿ ಪೊಲೀಸರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸುತ್ತಿದ್ದಂತೆಯೇ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆಯೂ ಚುರುಕಾಯಿತು. ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಹಾಗೂ ಅಮಿತ್ ಬದ್ದಿ (ಗೌರಿ ಹತ್ಯೆ ಪ್ರಕರಣದ ಆರೋಪಿಗಳು) ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಪ್ರಾರಂಭಿಸಿದರು.

ಸೆಪ್ಟೆಂಬರ್: ಕೈಗೆಟಕುವ ಬೆಲೆಯಲ್ಲಿ ನಿವೇಶನ ಹಾಗೂ ಫ್ಲ್ಯಾಟ್‌ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ₹ 650 ಕೋಟಿ ಸಂಗ್ರಹಿಸಿ ವಂಚಿಸಿದ್ದ ‘ಡ್ರೀಮ್ಸ್–ಜಿಕೆ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥಾಪಕ ಸಚಿನ್ ನಾಯಕ್ ಸೇರಿದಂತೆ 10 ಮಂದಿ ವಿರುದ್ಧ ಸಿಐಡಿ 16 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು.

ನವೆಂಬರ್: ದೆಹಲಿ, ಪಂಜಾಬ್ ಹಾಗೂ ಸಿಐಡಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕುಖ್ಯಾತ ‘ಮಾನವ ಸಾಗಣೆ’ ಜಾಲವೊಂದನ್ನು ಪತ್ತೆ ಹಚ್ಚಿದರು. ಕೆಲಸ ಕೊಡಿಸುವುದಾಗಿ ನಂಬಿಸಿ ವಿವಿಧ ರಾಜ್ಯಗಳ ಯುವಕರನ್ನು ಬೆಂಗಳೂರಿಗೆ ಕರೆತರುತ್ತಿದ್ದ ಈ ಗ್ಯಾಂಗ್, ಅವರಿಗೆ ಚಿತ್ರಹಿಂಸೆ ಕೊಟ್ಟು ಕುಟುಂಬ ಸದಸ್ಯರಿಂದ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿತ್ತು.

ಸ್ನೇಹಿತನ ಬರ್ತ್‌ಡೇಗೆ ಹೊರಟು ಮೃತಪಟ್ಟರು

ಬೆಂಗಳೂರು: ಪಾನಮತ್ತರಾಗಿದ್ದ ಮಣಿಪಾಲ್‌ ಆಸ್ಪತ್ರೆ ವೈದ್ಯನ ಕಾರಿಗೆ ಬಲಿಯಾದ ಬಾಲಕ. ಓಲಾ ಕ್ಯಾಬ್‌ ಗುದ್ದಿದ್ದರಿಂದಾಗಿ ಪ್ರಾಣ ಬಿಟ್ಟ ಫುಟ್‌ಬಾಲ್‌ ಆಟಗಾರ್ತಿ ಎನ್‌.ಡಿ. ತೇಜಸ್ವಿನಿ. ಸ್ನೇಹಿತರ ಹುಟ್ಟುಹಬ್ಬವನ್ನು ನಂದಿಬೆಟ್ಟದಲ್ಲಿ ಆಚರಿಸಲು ವ್ಯಾನ್‌ನಲ್ಲಿ ಹೊರಟಿದ್ದ ವೇಳೆಯಲ್ಲೇ ಅಪಘಾತವಾಗಿ ಮೃತಪಟ್ಟ ನಾಲ್ವರು ಸ್ನೇಹಿತರು.

2018ರಲ್ಲಿ ಸಂಭವಿಸಿದ ಪ್ರಮುಖ ಅಪಘಾತಗಳಿವು.

ಜನವರಿ: ಮೈಸೂರು ರಸ್ತೆಯ ದುಬಾಸಿಪಾಳ್ಯ ಜಂಕ್ಷನ್‌ನಲ್ಲಿ ಮೆಟ್ರೊ ಪಿಲ್ಲರ್‌ಗೆ ಟ್ರಕ್ ಡಿಕ್ಕಿ ಹೊಡೆದಿದ್ದರಿಂದಾಗಿ, ಅದರ ಚಾಲಕ ಶಿವಯ್ಯ (28) ಮೃತಪಟ್ಟರು.

ಏಪ್ರಿಲ್: ನಾಯಂಡಹಳ್ಳಿ ಹೊರವರ್ತುಲ ರಸ್ತೆಯ ಮೇಲ್ಸೇತುವೆಯಲ್ಲಿ ಓಲಾ ಕ್ಯಾಬ್‌ ಗುದ್ದಿದ್ದರಿಂದಾಗಿ ಕರ್ನಾಟಕದ ಫುಟ್‌ಬಾಲ್‌ ಆಟಗಾರ್ತಿ ಎನ್‌.ಡಿ. ತೇಜಸ್ವಿನಿ (22) ಮೃತಪಟ್ಟರು.

ಮೇ: ಬಿಇಎಲ್‌ ವೃತ್ತ ಬಳಿಯ ದೇವಿನಗರ ಕ್ರಾಸ್‌ನಲ್ಲಿ ನಿಂತಿದ್ದ ಲಾರಿಗೆ ಕಾರು ಗುದ್ದಿದ್ದರಿಂದ, ಕಾರಿನಲ್ಲಿದ್ದ ಬಂಗಾರಪೇಟೆಯ ವಜಾಗೊಂಡಿದ್ದ ತಹಶೀಲ್ದಾರ್‌ ಎಲ್.ಸತ್ಯಪ್ರಕಾಶ್ (43) (ಅವರ ಮೇಲೆ ಎಸಿಬಿ ದಾಳಿ ಆಗಿತ್ತು) ಮೃತಪಟ್ಟರು.

ಆಗಸ್ಟ್: ಮಣಿಪಾಲ್‌ ಆಸ್ಪತ್ರೆ ಕ್ಯಾನ್ಸರ್‌ ತಜ್ಞ ಡಾ. ಎ. ರವಿತೇಜ್‌ (30) ಅವರು ಪಾನಮತ್ತರಾಗಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಗುದ್ದಿದ್ದರಿಂದಾಗಿ ದೊಮ್ಮಲೂರು ಲೇಔಟ್ ನಿವಾಸಿಯಾದ ಕೆವಿನ್‌ (17) ಮೃತಪಟ್ಟಿದ್ದ. ಹಳೇ ಏರ್‌ಪೋರ್ಟ್‌ ರಸ್ತೆಯಲ್ಲಿ ನಡೆದಿದ್ದ ಘಟನೆ ಸಂಬಂಧ ಪೊಲೀಸರು, ರವಿತೇಜ್‌ನನ್ನು ಬಂಧಿಸಿದ್ದರು.

ಡಿಸೆಂಬರ್: ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಪಾಳ್ಯದ ಗೇಟ್ ಬಳಿ ಮಾರುತಿ ಒಮ್ನಿ ವ್ಯಾನ್‌ಗೆ ಇನೋವಾ ಕಾರು ಗುದ್ದಿದ್ದರಿಂದಾಗಿ, ವ್ಯಾನ್‌ನಲ್ಲಿದ್ದ ಸುಂದರ್ (24), ವೆಂಕಟೇಶ್ (25), ಸತೀಶ್ (23) ಹಾಗೂ ವಿಕಾಸ್ (22) ಮೃತಪಟ್ಟರು. ಆರ್‌.ಟಿ.ನಗರ ಸಮೀಪದ ಚೋಳನಾಯಕನಪಾಳ್ಯದ ನಿವಾಸಿಗಳಾಗಿದ್ದ ಅವರು, ಸ್ನೇಹಿತನ ಹುಟ್ಟುಹಬ್ಬವನ್ನು ನಂದಿಬೆಟ್ಟದಲ್ಲಿ ಆಚರಿಸಲು ಹೊರಟಿದ್ದರು.

* ಮೈಸೂರು ರಸ್ತೆಯಲ್ಲಿ ಬಿಎಂಟಿಸಿ ಬಸ್ಸೊಂದು ಫುಟ್‌ಫಾತ್‌ಗೆ ನುಗ್ಗಿ ಪಾದಚಾರಿಗಳ ಮೇಲೆಯೇ ಹರಿದು ಹೋಗಿದ್ದರಿಂದ, ತೀವ್ರ ಗಾಯಗೊಂಡ ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿಗಳಾದ ಯದು ಕುಮಾರ್ (18) ಹಾಗೂ ಚಂದ್ರಕಾಂತ್ (17) ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT