21ಕ್ಕೆ ಕಾಗದರಹಿತ ಬ್ಯಾಂಕಿಂಗ್‌ ಸೇವೆ ಆರಂಭ

7

21ಕ್ಕೆ ಕಾಗದರಹಿತ ಬ್ಯಾಂಕಿಂಗ್‌ ಸೇವೆ ಆರಂಭ

Published:
Updated:

ಕೋಲಾರ: ‘ಡಿಜಿಟಲ್ ಇಂಡಿಯಾದ ಮುಂದುವರಿದ ಭಾಗವಾಗಿ ದೇಶದಾದ್ಯಂತ ಅಂಚೆ ಕಚೇರಿಗಳಲ್ಲಿ ಕಾಗದರಹಿತ ಇಂಡಿಯಾ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕಿಂಗ್‌ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಆ.21ರಂದು ಚಾಲನೆ ನೀಡುತ್ತಾರೆ’ ಎಂದು ಅಂಚೆ ಇಲಾಖೆ ಸೂಪರಿಂಟೆಂಡೆಂಟ್ ಎಲ್‌.ಮಂಜುನಾಥ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬ್ಯಾಂಕಿಂಗ್‌ ಸೌಲಭ್ಯ ವಂಚಿತ ಪ್ರತಿ ಪ್ರಜೆಗೂ ಬ್ಯಾಂಕ್‌ ಸೇವೆ ಕಲ್ಪಿಸುವುದು ಈ ಯೋಜನೆಯ ಮೂಲ ಉದ್ದೇಶ. ಸಂಸದ ಕೆ.ಎಚ್‌.ಮುನಿಯಪ್ಪ ನಗರದ ಹಾಲಿಸ್ಟರ್‌ ಸಮುದಾಯ ಭವನದಲ್ಲಿ 21ರಂದು ಮಧ್ಯಾಹ್ನ 2.30ಕ್ಕೆ ಈ ಸೇವೆ ಉದ್ಘಾಟಿಸುತ್ತಾರೆ. ಶಾಸಕ ಕೆ.ಶ್ರೀನಿವಾಸಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ಹೇಳಿದರು.

‘ಈ ಸೇವೆ ಮೂಲಕ ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಬಹುದು. ನೆಫ್ಟ್, ಆರ್‌ಟಿಜಿಎಸ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮುಂತಾದ ಆನ್‌ಲೈನ್ ಸೇವೆಗಳನ್ನು ಇದು ಒಳಗೊಂಡಿರುತ್ತದೆ. ಸರ್ಕಾರಿ ಯೋಜನೆಗಳಡಿ ಬರುವ ಎಲ್ಲಾ ಹಣಕಾಸು ಸೌಲಭ್ಯಗಳನ್ನು ಖಾತೆಗೆ ನೇರ ವರ್ಗಾವಣೆ ಮಾಡುವ ವ್ಯವಸ್ಥೆ ಇರುತ್ತದೆ’ ಎಂದು ವಿವರಿಸಿದರು.

‘ಗ್ರಾಮೀಣ ಜನರಿಗೆ ಅಂಚೆ ವ್ಯವಹಾರ ಸುಲಭವಾಗಲಿದ್ದು, ಹಣ ಪಾವತಿಸದೆ ಕಿರಾಣಿ ಅಂಗಡಿ ಸೇರಿದಂತೆ ಯಾವುದೇ ಅಂಗಡಿಗಳಲ್ಲಿ ಇಲಾಖೆಯಿಂದ ನೀಡಿದ ಕಾರ್ಡ್‌ ಬಳಸಿ ವಸ್ತುಗಳನ್ನು ಖರೀದಿಸಬಹುದು. ಖಾತೆ ತೆರೆಯಲು ಮೊಬೈಲ್ ಮತ್ತು ಆಧಾರ್‌ ಸಂಖ್ಯೆ ಸಲ್ಲಿಸಬೇಕು. ಅಂಚೆ ಕಚೇರಿಗಳಲ್ಲಿ ಮಾತ್ರ ಕಾರ್ಡ್‌ ಬಳಿಸಿ ನಗದು ಪಡೆಯಬಹುದು. ಕಾರ್ಡ್‌ ಸ್ಕ್ಯಾನ್‌ ಮಾಡಿ ಗ್ರಾಹಕರ ಬೆರಳಚ್ಚು ಮಾದರಿ ನೀಡಿದರೆ ಖಾತೆ ವಿವರ ಲಭ್ಯವಾಗಿ ಅದರಿಂದ ಹಣ ವರ್ಗಾಯಿಸಬಹುದು’ ಎಂದು ಮಾಹಿತಿ ನೀಡಿದರು.

650 ಶಾಖೆಗಳು: ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕ್‌ ಸೇವೆಯ 650 ಶಾಖೆಗಳು ಆ.21ರಂದು ಕಾರ್ಯಾರಂಭ ಮಾಡಲಿವೆ. ಅದೇ ದಿನ 3,250 ಉಪ ಶಾಖೆಗಳು ಆರಂಭವಾಗುತ್ತವೆ. 650 ಶಾಖೆಗಳಿಗೆ ದೇಶದ 1.55 ಲಕ್ಷ ಅಂಚೆ ಕಚೇರಿಗಳ ಬೃಹತ್ ಜಾಲವನ್ನು ಡಿ.31ರೊಳಗೆ ಸಂಪರ್ಕಿಸಲಾಗುತ್ತದೆ. ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯ ಕಲ್ಪಿಸಲು 3 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕರ ದೊಡ್ಡ ಪಡೆಯೇ ಸಜ್ಜಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !