ಅಧ್ಯಾತ್ಮದಿಂದ ಬದುಕು ಪ್ರಸನ್ನ: ಅಭಿನವ ಶಾಂತಲಿಂಗ ಶಿವಾಚಾರ್ಯ

7

ಅಧ್ಯಾತ್ಮದಿಂದ ಬದುಕು ಪ್ರಸನ್ನ: ಅಭಿನವ ಶಾಂತಲಿಂಗ ಶಿವಾಚಾರ್ಯ

Published:
Updated:
Deccan Herald

ಧಾರವಾಡ: ‘ಅಧ್ಯಾತ್ಮ ಚಿಂತನೆಯಿಂದ ಅಂತರಂಗ, ಬಹಿರಂಗಗಳ ದ್ವಂದ್ವ ನಿವಾರಣೆಯಾಗಿ, ಬದುಕಿಗೆ ನಿತ್ಯ ಪ್ರಸನ್ನತೆ ಪ್ರಾಪ್ತವಾಗುತ್ತದೆ’ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಸ್ವಾಮೀಜಿ ಅಭಿನವ ಶಾಂತಲಿಂಗ ಶಿವಾಚಾರ್ಯ ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಜರುಗಿದ ಗುಡ್ಡಾಪೂರ ದಾನಮ್ಮತಾಯಿ ಪುರಾಣ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹುಟ್ಟಿನೊಂದಿಗೆ ಸಾವು ಹಿಂಬಾಲಿಸಿದೆ ಎಂಬ ಪರಮಸತ್ಯದ ಅರಿವಿನಿಂದ ಮನುಷ್ಯ ದೂರ ಸರಿಯಬಾರದು. ಸಾಧು, ಸನ್ಯಾಸಿ, ಯೋಗಿ, ತ್ಯಾಗಿ, ಭೋಗಿ ಯಾರೇ ಇದ್ದರೂ ಸಾವು ನಿಶ್ಚಿತ. ಹಾಗಾಗಿ ಸಾವು ಕೂಡಾ ಸನಾತನ. ಇದನ್ನು ಮರೆತು ಮಾನವ ಸ್ವಾರ್ಥದ ಬೆನ್ನು ಹತ್ತಿದ್ದಾನೆ. ಈ ವ್ಯಾಮೋಹದ ತುಡಿತಗಳಿಂದ ಹೊರಬಂದು ಸಾಕ್ಷಾತ್ಕಾರ ಸಂಪಾದನೆಗೆ ಪ್ರಯತ್ನಿಸುವ ಅಗತ್ಯವಿದೆ’ ಎಂದರು.

ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ‘ಎಲ್ಲೆಡೆ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ ಬದುಕಿನ ವಿದ್ಯಮಾನಗಳು ಜನ ವಿರೋಧಿಯಾಗಿ ಬಲಿಯುತ್ತಿವೆ. ನಾಟಕೀಯ ಜೀವನ ವಿಧಾನದಲ್ಲಿ ಸತ್ಯ ಮರೆಮಾಚಿ ಮೌಲ್ಯಗಳೆಲ್ಲ ನೆಲಕ್ಕಚ್ಚುತ್ತಿವೆ. ಈ ನಿಟ್ಟಿನಲ್ಲಿ ಅಧ್ಯಾತ್ಮದ ಅನುಸಂಧಾನವು ಮುಕ್ತ ಭಾವಸಂಪನ್ನತೆಯನ್ನು ಕರುಣಿಸುತ್ತದೆ’ ಎಂದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಸ್ವಾಮೀಜಿ ಶಾಂತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಇದಕ್ಕೂ ಮುನ್ನ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.

ಶಿವಪ್ಪಣ್ಣ ಕುಸುಗಲ್‌, ಬಸಯ್ಯ ಗುಡಿ, ಎಂ.ಸಿ.ಹುಲ್ಲೂರ, ವಿ.ಬಿ.ಕೆಂಚನಗೌಡರ, ಬಸವರಾಜ ಕೊಳ್ಳಿ, ಶಿವಪ್ಪ ಹೂಲಿ, ಅಪ್ಪಣ್ಣ ದೇಶಪಾಂಡೆ, ಚಂಬಣ್ಣ ಉಂಡೋಡಿ, ಈರಣ್ಣ ಕುಸುಗಲ್ಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !