ಕಲಿಕೆ ಜೀವನ ಪರ್ಯಂತ ಮುಂದುವರಿಯಲಿ: ನಿರ್ಮಲಾನಂದನಾಥ ಸ್ವಾಮಿಜಿ

7
ಎಸ್‌ಜೆಸಿಐಟಿಯಲ್ಲಿ ಬಿಇ ಮತ್ತು ಪಾಲಿಟೆಕ್ನಿಕ್ ಮೊದಲ ವರ್ಷದ ತರಗತಿಗಳ ಉದ್ಘಾಟನೆ ಕಾರ್ಯಕ್ರಮ

ಕಲಿಕೆ ಜೀವನ ಪರ್ಯಂತ ಮುಂದುವರಿಯಲಿ: ನಿರ್ಮಲಾನಂದನಾಥ ಸ್ವಾಮಿಜಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕಲಿಕೆ ಕಾಲೇಜು, ತರಗತಿಗಳಿಗೆ ಮಾತ್ರ ಸೀಮಿತಗೊಳ್ಳದೆ. ಜೀವನ ಪರ್ಯಂತ ಮುಂದುವರಿಯಬೇಕು. ಕಲಿಕೆ ನಿಂತ ದಿನ ನೀವು ಬದುಕಿದ್ದೂ ಪ್ರಯೋಜನವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಾಯುವವರೆಗೂ ಕಲಿಯುತ್ತಲೇ ಇರಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜಿ ಹೇಳಿದರು.

ನಗರ ಹೊರವಲಯದ ಶ್ರೀ ಜಗದ್ಗುರು ಚಂದ್ರಶೇಖರ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಬಿಇ ಮತ್ತು ಪಾಲಿಟೆಕ್ನಿಕ್ ಮೊದಲ ವರ್ಷದ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೋಷಕರು ನಿಮ್ಮನ್ನು ಸುಮ್ಮನೆ ಕಾಲೇಜಿಗೆ ಕಳುಹಿಸಿಲ್ಲ. ಅವರ ಕನಸು ಸಾಕಾರಗೊಳಿಸಲು ಇಲ್ಲಿಗೆ ಕಳುಹಿಸಿದ್ದಾರೆ. ಅದು ನನಸಾಗಬೇಕಾದೆ ನಿಮ್ಮಲ್ಲಿ ಶ್ರಮ, ಶ್ರದ್ಧೆ, ಶಿಸ್ತು ಇರಬೇಕು. ಪಾಲಿಟೆಕ್ನಿಕ್‌ನ ಪ್ರತಿಯೊಂದು ವಿಭಾಗದಲ್ಲಿ ಮೊದಲ ಸ್ಥಾನ ಗಳಿಸುವವರಿಗೆ ನಮ್ಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಮಾಡುತ್ತೇವೆ’ ಎಂದು ತಿಳಿಸಿದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಓದಿ ಗಳಿಸಿಕೊಳ್ಳುವ ಜ್ಞಾನದ ಜತೆಗೆ ದೇಶದ ಬೆಳವಣಿಗೆ ಬಗ್ಗೆ ಕಲ್ಪನೆ ಇರಬೇಕು. ಇವತ್ತು ಉತ್ತಮ ಉದ್ಯೋಗಾವಕಾಶಗಳಿವೆ. ಆದರೆ ಎಲ್ಲರಿಗೂ ಕೆಲಸ ಸಿಗುವುದಿಲ್ಲ. ಉತ್ತಮ ಕೌಶಲ ತೋರುವವರಿಗೆ ಮಾತ್ರ ಕೆಲಸ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲ ಕಲಿಯಲು ಆದ್ಯತೆ ನೀಡಬೇಕು’ ಎಂದರು.

‘ನಾನು ಇಷ್ಟು ಬೆಳೆದದ್ದು ನನ್ನ ತಾಯಿಯಿಂದ. ನಾನು ನಾಲ್ಕನೇ ತರಗತಿಯಲ್ಲಿ ಇರುವಾಗಲೇ ಆಕೆ ನನಗೆ ಭಗವದ್ಗಿತೆ ಸೇರಿದಂತೆ ಅನೇಕ ಉಪಯುಕ್ತ ಪುಸ್ತಕಗಳನ್ನು ಓದಲು ಪ್ರೇರೇಪಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಲೂ ನಸುಕಿನ 4.30ಕ್ಕೆ ಎದ್ದು ಬಂದು ನಾನು ಓದುತ್ತೇನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಓದುವ ಪ್ರವೃತ್ತಿ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಅದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಚಿಕ್ಕಬಳ್ಳಾಪುರ ವಿಭಾಗದ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂ ರೆಡ್ಡಿ ಮಾತನಾಡಿ, ‘ತರಗತಿ ಒಳಗೆ ಕಲಿತದ್ದು ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅರ್ಹತೆ ತಂದುಕೊಡುತ್ತದೆ ವಿನಾ ಕೆಲಸ ಕೊಡುವುದಿಲ್ಲ. ಕೆಲಸ ಸಿಗಬೇಕಾದರೆ ಶಿಕ್ಷಣ ಮುಗಿದ ನಂತರ ತರಗತಿಯಲ್ಲಿ ಕಲಿತ ವಿದ್ಯೆಯನ್ನು ಬೇರೆ ಬೇರೆ ಕೋರ್ಸ್‌ಗಳ ಮೂಲಕ ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಕರನ್ನು ನೆಚ್ಚಿಕೊಂಡರೆ ಸಾಲದು. ಕಾಲೇಜಿನಿಂದ ಆಚೆ ಇರುವ ಸಮಯದಲ್ಲಿ ವಿವಿಧ ಕೋರ್ಸ್‌ಗಳ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.

ಪಾಲಿಟೆಕ್ನಿಕ್‌ನ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿ ಮತ್ತು ಬಿ.ಇ ಪದವಿಯ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಉದ್ಯಮಿ ಜನಾರ್ಧನ್, ಎಸ್‌ಜೆಸಿಐಟಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಮುನಿಕೆಂಚೇಗೌಡ, ಎಸ್‌ಜೆಸಿಐಟಿ ಪ್ರಾಂಶುಪಾಲ ಕೆ.ಎಂ.ರವಿಕುಮಾರ್, ಪಾಲಿಟೆಕ್ನಿಕ್ ಪ್ರಾಂಶುಪಾಲ ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !