ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಎಫ್‌ ಗೈರು: ಸಭೆ ಮುಂದೂಡಿಕೆ

ರಾಜ್ಯ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಸಭೆ
Last Updated 26 ಮೇ 2018, 13:45 IST
ಅಕ್ಷರ ಗಾತ್ರ

ಮಡಿಕೇರಿ: ಆನೆ ಹಾಗೂ ಮಾನವ ಸಂಘರ್ಷ ತಡೆಯಲು ಶುಕ್ರವಾರ ಅರಣ್ಯ ಭವನದಲ್ಲಿ ಕರೆದಿದ್ದ ಸಭೆಗೆ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಗೈರಾದ ಹಿನ್ನೆಲೆಯಲ್ಲಿ ಮೇ 28ಕ್ಕೆ ಸಭೆ ಮುಂದೂಡಲಾಯಿತು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಮತ್ತು ಜಿಲ್ಲಾ ರೈತರು, ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಆಶ್ರಯದಲ್ಲಿ ಸಭೆ ಕರೆಯಲಾಗಿತ್ತು.

ಸಭೆಯನ್ನು ಬೆಳಿಗ್ಗೆ 11ಕ್ಕೆ ನಿಗದಿಪಡಿಸಲಾಗಿತ್ತು. 12ಕ್ಕೆ ಮಡಿಕೇರಿ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ ಆರಂಭವಾಯಿತು. ವಿರಾಜಪೇಟೆ ಡಿಎಫ್‌ಒ ಮರಿಯಾ ಕ್ರಿಸ್ತರಾಜ್ ಮಧ್ಯಾಹ್ನ 1ರ ಸುಮಾರಿಗೆ ಸಭೆಗೆ ಆಗಮಿಸಿದರು. ಆದರೂ, ಸಿಸಿಎಫ್‌ ಸಭೆಗೆ ಆಗಮಿಸಲಿಲ್ಲ. ಸಭೆಯಲ್ಲಿದ್ದ ರೈತ ಮುಖಂಡರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ‘ಅಧಿಕಾರಿ ವರ್ತನೆ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ’ ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡ ಭರತ್ ಪ್ರತಿಕ್ರಿಯಿಸಿ, ‘ಸಿಸಿಎಫ್‌ರ ವರ್ತನೆ ಸರಿಯಲ್ಲ. ಪದೇ ಪದೇ ಸಭೆಗೆ ಗೈರಾಗುತ್ತಿದ್ದಾರೆ’ ಎಂದು ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸಹ ಸಿಸಿಎಫ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಮನವಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಅರಣ್ಯ ಇಲಾಖೆಯಾಗಲಿ, ಕೊಡಗು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಲೀ ಮನವಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ರೈತರು ಹಾಗೂ ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ, ಹಿರಿಯ ಅಧಿಕಾರಿಯೇ ಗೈರಾದರೆ ಯಾರ ಬಳಿ ನಮ್ಮ ಸಮಸ್ಯೆಯನ್ನು ಹೇಳುವುದು’ ಎಂದು ರೈತ ಮುಖಂಡರು ಅಸಮಾಧಾನ ಹೊರಹಾಕಿದರು. ಸಮಿತಿಯ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ‘ಹಿಂದೆ ಹಲವು ಬಾರಿ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಇಲಾಖೆಗೆ ಮನವಿ ಮಾಡಿದ್ದೇವೆ. ಅದರಲ್ಲಿ ಕೆಲವು ರಾಜ್ಯ ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕು. ಇನ್ನು ಕೆಲವು ಬೇಡಿಕೆಗಳಿಗೆ ಜಿಲ್ಲಾಮಟ್ಟದಲ್ಲಿಯೇ ಪರಿಹಾರ ಹುಡು ಕಲು ಸಾಧ್ಯವಿದೆ. ಜಿಲ್ಲಾ ಮಟ್ಟದ ಸಮಸ್ಯೆ ಗಳನ್ನು ಈಡೇರಿಸಲು ಸರ್ಕಾರದ ಒಪ್ಪಿಗೆಯ ಅಗತ್ಯವಿಲ್ಲ. ಆದರೂ ಅರಣ್ಯಾಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ’ ಎಂದರು.

‘ಅರಣ್ಯ ಸಂರಕ್ಷಣಾಧಿಕಾರಿ ಇದುವರೆಗೂ ಕರೆದ ಯಾವ ಸಭೆಗೂ ಹಾಜರಾಗಿಲ್ಲ. ನಾವು ಖಂಡಿಸುತ್ತೇವೆ. ಅವರ ವರ್ತನೆ ಬಗ್ಗೆ ಖುದ್ದು ಸರ್ಕಾರ ವನ್ನೇ ಭೇಟಿ ಮಾಡಿ ಅಹವಾಲು ಸಲ್ಲಿಸುತ್ತೇವೆ. ಇದುವರೆಗೂ ಆನೆ ಹಾವಳಿಯಿಂದ 41 ಸಾವು ಹಾಗೂ 103ಕ್ಕೂ ಹೆಚ್ಚು ಮಂದಿ ಅಂಗವಿಕಲತೆಗೆ ಒಳಗಾಗಿದ್ದಾರೆ. ಆದರೂ ಅಧಿಕಾರಿಗಳು ಸ್ಥಳಕ್ಕೆ ಯಾಕೆ ಭೇಟಿ ನೀಡುವುದಿಲ್ಲ’ ಎಂದು ಸಂಕೇತ್ ಪೂವಯ್ಯ ಪ್ರಶ್ನಿಸಿದರು.

ಕಾರ್ಯಾಚರಣೆ ನಡೆಯಲಿ: ‘ಸಿದ್ದಾಪುರ ಭಾಗದಲ್ಲಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಬೇಡ. ಅವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವ ಕಾರ್ಯಾಚರಣೆ ನಡೆಯಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಯೋಜನೆ ರೂಪಿಸಬೇಕು’ ಎಂದು ಕಾಡ್ಯಮಾಡ ಮನು ಸೋಮಯ್ಯ ಒತ್ತಾಯಿಸಿದರು.

ಸಮಿತಿಯ ಸಂಚಾಲಕ ಮಂಡೇ ಪಂಡ ಪ್ರವೀಣ್ ಬೋಪಯ್ಯ, ಚಂಗಪ್ಪ, ಮಹದೇವ್, ಮಾಚಯ್ಯ, ಸತೀಶ್, ರಾಯ್, ಹರೀಶ್, ಗಪ್ಪಣ್ಣ ಹಾಜರಿದ್ದರು.

ಕಾಫಿ ತೋಟದಲ್ಲಿ 15 ಕಾಡಾನೆ!

‘ಸಿದ್ದಾಪುರ, ಮಾಲ್ದಾರೆ, ವಾಲ್ನೂರು, ಮೊದೂರು ಗ್ರಾಮದಲ್ಲಿ ಕಾಫಿ ತೋಟದಲ್ಲಿ 15 ಕಾಡಾನೆಗಳು ಬೀಡುಬಿಟ್ಟಿವೆ. ಅವುಗಳನ್ನು ಸೆರೆ ಹಿಡಿದು, ಕಾಡಿಗೆ ಬಿಡಬೇಕು’ ಎಂದು ರೈತರು, ಕಾರ್ಮಿಕರು ಮನವಿ ಸಲ್ಲಿಸಿದರು.

**
ಆನೆ ಹಾವಳಿ ತಪ್ಪಿಸಲು ವೈಜ್ಞಾನಿಕ ತಂತ್ರಜ್ಞಾನ ಬಳಕೆ ಮಾಡುವ ಅಗತ್ಯವಿದೆ. ಅರಣ್ಯ ಇಲಾಖೆ ಮಾತ್ರ ಇನ್ನೂ ಹಳೆ ವಿಧಾನವನ್ನೇ ಅನುಸರಿಸುತ್ತಿದೆ
ಸಂಕೇತ್‌ ಪೂವಯ್ಯ, ಜಿಲ್ಲಾ ಅಧ್ಯಕ್ಷ, ಜೆಡಿಎಸ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT