ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ ಬೇಡವೇ ಬೇಡ: ನಗರದ ನಿವಾಸಿಗಳು, ತಜ್ಞರ ಒತ್ತಾಯ

Last Updated 17 ನವೆಂಬರ್ 2018, 19:17 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರವು ನಗರದಲ್ಲಿ ನಿರ್ಮಿಸಲು ಯೋಜಿಸಿರುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಮೇಲ್ಸೇತುವೆಗಳ ಕಾಮಗಾರಿ ಆರಂಭಿಸುವ ಮುನ್ನ, ಅದರಿಂದಾಗುವ ಪರಿಸರದ ಮತ್ತು ಆರ್ಥಿಕ ನಷ್ಟವನ್ನು ಲೆಕ್ಕ ಮಾಡಬೇಕು’ ಎಂಬ ಒತ್ತಾಯ ನಗರದ ಹಲವು ನಿವಾಸಿಗಳು ಮತ್ತು ತಜ್ಞರಿಂದ ಕೇಳಿಬಂತು.

‘ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದಮಾತ್ರಕ್ಕೆ ಮೇಲ್ಸೇತುವೆಗಳನ್ನು ನಿರ್ಮಿಸಲು ನಗರ ಯೋಜನಾ ಕಾಯ್ದೆ (ಕೆಟಿಪಿಸಿ)–1961ರಲ್ಲಿ ಅವಕಾಶವಿಲ್ಲ. ಅದರಲ್ಲಿ ವಸತಿ ಮತ್ತು ವಾಣಿಜ್ಯಕ್ಕೆ ಜಮೀನನ್ನು ಹೇಗೆ ಬಳಸಬೇಕು ಎಂಬುದನ್ನು ಮಾತ್ರ ಉಲ್ಲೇಖಿಸಲಾಗಿದೆ. ಆದರೆ, ಈಗ ಅಧಿಕಾರಿಗಳು ಉದ್ಯಮಿಗಳ ರೀತಿ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಯೋಜನೆಗಳು ಸಿದ್ಧಗೊಳ್ಳುತ್ತಿವೆ’ ಎಂದುಗುಬ್ಬಿ ಲ್ಯಾಬ್ಸ್‌ ಸಂಸ್ಥೆಯ ಸಂಶೋಧಕ ಎಚ್‌.ಎಸ್‌.ಸುಧೀರ್‌ ಅಭಿಪ್ರಾಯಪಟ್ಟರು.

‘ಖಾಸಗಿ ವಾಹನಗಳು ಹೆಚ್ಚುತ್ತಿವೆ ಎಂದು ಸೇತುವೆಗಳನ್ನು ಕಟ್ಟಬಾರದು. ಜನರನ್ನು ಸಾರ್ವಜನಿಕ ಸಾರಿಗೆಯಡೆಗೆ ಕರೆತರಬೇಕು. ಅದಕ್ಕಾಗಿ ವಾಹನಗಳ ನೋಂದಣಿ ಮೇಲೆ ಕಡಿವಾಣ ಹಾಕಬೇಕು’ ಎಂದರು.

ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸುಗಮ ಸಂಚಾರಕ್ಕೆ ಮೇಲ್ಸೇತುವೆಗಳೇ ಪರ್ಯಾಯಗಳಲ್ಲ’ ಕುರಿತ ಸಂವಾದ ಈ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸಿತ್ತು.

ನಗರ ಯೋಜನೆ ತಜ್ಞೆ ರಾಧಾ ಚಂಚನಿ, ‘ಬೆಂಗಳೂರು ಅಭಿವೃದ್ಧಿಗೆಂದು 9 ವರ್ಷಗಳಲ್ಲಿ 80,000 ಮರಗಳು ಬಲಿಯಾಗಿವೆ. ಇದರಿಂದ ಗಣನೀಯವಾಗಿ ಮಾಲಿನ್ಯ ಹೆಚ್ಚಿದೆ. ಆರೋಗ್ಯ ಹದಗೆಡುತ್ತಿದೆ. ಈಗಐದು ಕಾರಿಡಾರ್‌ಗಳಲ್ಲಿ ₹ 33,600 ಕೋಟಿ ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ಯೋಜಿಸಿದೆ. ಇದರಿಂದ ನಗರವಾಸಿಗಳ ಆರೋಗ್ಯ ಮತ್ತು ಪರಿಸರಕ್ಕೆ ಮತ್ತಷ್ಟು ಅಪಾಯ ಕಾದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸೇತುವೆಗಳ ನಿರ್ಮಾಣಕ್ಕೆ ಇಂತಿಷ್ಟು ಜಾಗ ಬೇಕು. ಇಂತಿಷ್ಟು ಮರಗಳನ್ನು ತೆರವು ಮಾಡಬೇಕಾದಿತು ಎಂದು ಸಮೀಕ್ಷೆ ನಡೆದಿದೆ. ಆದರೆ, ಆ ನಿರ್ಮಾಣಕ್ಕೆ ಬೇಕಾದ ಕಲ್ಲು, ಮರಳು, ಸಿಮೆಂಟ್‌ ಎಲ್ಲಿಂದ ಬರುತ್ತದೆ. ಅವುಗಳು ಉತ್ಪಾದನೆಯಾಗುವಆಯಾ ಪರಿಸರದ ಮೇಲಾಗುವ ಪರಿಣಾಮಗಳನ್ನು ಯಾರೂ ಲೆಕ್ಕ ಹಾಕುವುದಿಲ್ಲ’ ಎಂದು ಹೇಳಿದರು.

‘ಕೇಂದ್ರದ ಪರಿಸರ ಸಂರಕ್ಷಣಾ ಕಾಯ್ದೆ, ರಾಜ್ಯ ಮರ ಸಂರಕ್ಷಣಾ ಕಾಯ್ದೆ, ಹಸಿರು ನ್ಯಾಯ ಮಂಡಳಿಯ ಆದೇಶಗಳ ಪ್ರಕಾರ ಈ ಮೇಲ್ಸೇತುವೆಗಳನ್ನು ನಗರದಲ್ಲಿ ನಿರ್ಮಿಸಲು ಅವಕಾಶವೇ ಇಲ್ಲ. ಆದರೂ ಸರ್ಕಾರ ರಾಜ್ಯ ಮಟ್ಟದ ಸಂಸ್ಥೆಗಳಿಂದ ಅನುಮತಿ ಪಡೆದು, ಮುಂದುವರೆಯುತ್ತಿದೆ’ ಎಂದು ವೇದಿಕೆಯ ಸಂಚಾಲಕ ವಿನಯ್‌ ಕೆ.ಶ್ರೀನಿವಾಸ ದೂರಿದರು.

‘ಪ್ರತಿದಿನ ಅಂದಾಜು 50 ಲಕ್ಷ ಜನ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ. ಈ ಸಾರಿಗೆಯಲ್ಲಿ ಮಿನಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಪ್ರಯಾಣ ದರ ಇಳಿಸಬೇಕು. ಸೇತುವೆಗಳ ನಿರ್ಮಾಣಕ್ಕೆ ಬಳಸುತ್ತಿರುವ ಸಾವಿರಾರು ಕೋಟಿಗಳನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಿಯೋಗಿಸಬೇಕು’ ಎಂದು ಒತ್ತಾಯಿಸಿದರು.

ಮುಖ್ಯಾಂಶಗಳು

* ಜನರನ್ನು ಸಾರ್ವಜನಿಕ ಸಾರಿಗೆಯಡೆಗೆಕರೆತರಬೇಕು

* ವಾಹನಗಳ ನೋಂದಣಿ ಮೇಲೆ ಕಡಿವಾಣ ಹಾಕಬೇಕು

* ಬಿಎಂಟಿಸಿಯಲ್ಲಿ ಮಿನಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT