2 ಲಕ್ಷ ಅರ್ಜಿ; 6 ರೈತರಿಗೆ ‘ಸಮ್ಮಾನ್‌’ ನಿಧಿ

ಮಂಗಳವಾರ, ಮಾರ್ಚ್ 19, 2019
28 °C
ಒಬ್ಬರ ಖಾತೆಗೆ ಕೇವಲ ₹950– ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

2 ಲಕ್ಷ ಅರ್ಜಿ; 6 ರೈತರಿಗೆ ‘ಸಮ್ಮಾನ್‌’ ನಿಧಿ

Published:
Updated:
Prajavani

ಬೆಂಗಳೂರು: ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೂ ಕೇವಲ 6 ಜನರಿಗೆ ಮಾತ್ರ ನಿಧಿ ಸಿಕ್ಕಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಬೆಂಗಳೂರು ನಗರ ಬಹುಮಹಡಿ ವಿನ್ಯಾಸದ 1 ಲಕ್ಷ ಮನೆಗಳ ನಿರ್ಮಾಣ’ ವಸತಿ ಯೋಜನೆಯ ಭೂಮಿಪೂಜೆ ಸಮಾರಂಭದಲ್ಲಿ ಅವರು ಈ ಮಾತು ಹೇಳಿದರು.

‘ಕಿಸಾನ್‌ ಸಮ್ಮಾನ್‌ ನಿಧಿಗೆ ₹75 ಸಾವಿರ ಕೋಟಿ ಮೀಸಲಿಟ್ಟಿದ್ದಾರಂತೆ. ಅದರಲ್ಲಿ ಫಲಾನುಭವಿಯಾಗಲು ರಾಜ್ಯ ಸರ್ಕಾರ ರೈತರ ಮಾಹಿತಿಯನ್ನೆ ನೀಡುತ್ತಿಲ್ಲ ಎಂದು ಕೇಂದ್ರದವರು ಹೇಳಿಕೊಂಡು ತಿರುಗುತ್ತಿದ್ದಾರೆ. ಇದು ಶುದ್ಧ ಸುಳ್ಳು’ ಎಂದು ಹರಿಹಾಯ್ದರು.

‘ಈ ಯೋಜನೆಯ ಸೌಲಭ್ಯಕ್ಕಾಗಿ ರಾಜ್ಯದಲ್ಲಿ 8,54,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿನ 2,08,000 ಅರ್ಜಿಗಳ ಮಾಹಿತಿಯನ್ನು ಯೋಜನೆಯ ತಂತ್ರಾಂಶಕ್ಕೆ ಬುಧವಾರ ಬೆಳಿಗ್ಗೆ ಹೊತ್ತಿಗೆ(ಮಾರ್ಚ್ 7) ಅಪ್‌ಲೋಡ್‌ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ಅದರಲ್ಲಿ ಕೇವಲ 17 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿಯೂ 6 ರೈತರ ಖಾತೆಗೆ ಮಾತ್ರ ಹಣ ಜಮಾ ಮಾಡಿದೆ. ಅದರಲ್ಲಿ ಒಬ್ಬರ ಖಾತೆಗೆ ₹950 ಬಂದಿದೆ’ ಎಂದು ಕುಟುಕಿದರು.

‘ಮೊನ್ನೆ ಕಲಬುರ್ಗಿಗೆ ಬಂದಿದ್ದ ಮೋದಿ, ನಮ್ಮ ರಾಜ್ಯ ಸರ್ಕಾರ ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಮೋಸ ಮಾಡಿದೆ ಎಂದು, ಇನ್ನು ಹಲವು ಲಘುವಾದ ಮಾತುಗಳನ್ನಾಡಿದ್ದಾರೆ. ನಾವು 9 ತಿಂಗಳಿನಲ್ಲಿ ₹11,000 ಕೋಟಿಗಳನ್ನು ರೈತರ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿದ್ದೇವೆ. ಇದರಿಂದ 14 ಲಕ್ಷ ರೈತರಿಗೆ ಅನುಕೂಲವಾಗಿದೆ’ ಎಂದು ಸಾರಿದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ(ನರೇಗಾ) ಯೋಜನೆಯಡಿ ₹ 2,000 ಕೋಟಿ ಅನುದಾನ ರಾಜ್ಯಕ್ಕೆ ಬರಬೇಕಿದೆ. ರಾಜ್ಯವೇ ₹900 ಕೋಟಿಯಿಂದ ನರೇಗಾದ ದಿನಗೂಲಿಗಳನ್ನು ವಿತರಿಸುತ್ತಿದೆ. ಇಂತಹ ವಿಷಯಗಳನ್ನು ಬಿಟ್ಟು, ಮೋದಿ ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ಸುಳ್ಳು ಹೇಳಿಕೊಂಡೆ ನಾಲ್ಕುವರೇ ವರ್ಷ ದೇಶ ಆಳಿದ್ದಾರೆ’ ಎಂದು ಹರಿಹಾಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !