ಬುಧವಾರ, ಆಗಸ್ಟ್ 21, 2019
22 °C
ಇನ್ನೂ ನಿಲ್ಲದ ಕುಸಿತ: ಕೆಲವು ತಿಂಗಳವರೆಗೆ ವಾಹನ ಸಂಚಾರ ಬಂದ್‌ ಸಾಧ್ಯತೆ

ಚಾರ್ಮಾಡಿ ಘಾಟಿ: 60 ಕಡೆ ಭೂಕುಸಿತ

Published:
Updated:
Prajavani

ಚಾರ್ಮಾಡಿ (ಬೆಳ್ತಂಗಡಿ): ಕರಾವಳಿಯನ್ನು ಚಿಕ್ಕಮಗಳೂರು, ಹಾಸನ, ಬೆಂಗಳೂರು ಸೇರಿದಂತೆ ಘಟ್ಟ ಪ್ರದೇಶದ ಜೊತೆ ಬೆಸೆಯುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಹೆದ್ದಾರಿ 234ರ 25 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಮಳೆಯ ಅಬ್ಬರಕ್ಕೆ 60 ಕಡೆ ಭೂಕುಸಿತ ಸಂಭವಿಸಿದೆ.

ಸುಮಾರು 40 ಕಡೆಗಳಲ್ಲಿ ಸಾಮಾನ್ಯ ಪ್ರಮಾಣದ ಭೂಕುಸಿತ ಸಂಭವಿಸಿದೆ. ಮಣ್ಣು, ಕಲ್ಲು, ಮರಗಳು ರಸ್ತೆಯ ಮೇಲೆ ಉರುಳಿಬಿದ್ದಿವೆ. 20 ಸ್ಥಳಗಳಲ್ಲಿ ಭಾರಿ ‍ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಕೆಲವೆಡೆ ಹೆದ್ದಾರಿಯ ಭಾಗವೇ ಪ್ರಪಾತಕ್ಕೆ ಜಾರಿದೆ.

ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಮಂಗಳೂರು ವೃತ್ತದ ವ್ಯಾಪ್ತಿಗೆ ಬರುವ 10ನೇ ತಿರುವಿನವರೆಗೂ ದೊಡ್ಡ ಪ್ರಮಾಣದ ಭೂಕುಸಿತದ ಸಂಖ್ಯೆ ಕಡಿಮೆ ಇದೆ. ಆದರೆ, ಚಿಕ್ಕಮಗಳೂರು ವೃತ್ತದ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.

ಅರ್ಧ ರಸ್ತೆ ಪ್ರಪಾತಕ್ಕೆ: 11ನೇ ತಿರುವಿನ ಬಳಿ ಕಡಿದಾದ ಮಾರ್ಗದಲ್ಲೇ ಬೃಹದಾಕಾರದ ಬಂಡೆಯೊಂದು ಉರುಳಿದ ರಭಸಕ್ಕೆ ರಸ್ತೆಯ ಅರ್ಧಭಾಗ ಪ್ರಪಾತಕ್ಕೆ ಉರುಳಿಬಿದ್ದಿದೆ. ನೂರು ಅಡಿಗೂ ಹೆಚ್ಚು ಎತ್ತರದಿಂದ ಬಂಡೆ ಬಂದು ಅಪ್ಪಳಿಸಿದ್ದರಿಂದ ಕಣಿವೆಯ ಭಾಗದಲ್ಲಿ ಹತ್ತಾರು ಅಡಿಗಳಷ್ಟು ಆಳದ ಕಂದಕ ಸೃಷ್ಟಿಯಾಗಿದೆ.

ಮೇಲಿನಿಂದ ಉರುಳಿಬಂದ ಕಲ್ಲುಗಳು ಚರಂಡಿಯನ್ನೇ ಮುಚ್ಚಿಹಾಕಿವೆ. ಇದರಿಂದಾಗಿ ಜಲಪಾತದ ರೀತಿ ಬೀಳುತ್ತಿರುವ ನೀರು ರಸ್ತೆಯ ಮೇಲೆ ಹರಿದು ಭೂಕುಸಿತದಿಂದ ಉಂಟಾಗಿರುವ ಕಂದಕದಲ್ಲಿ ಹರಿಯುತ್ತಿದೆ. ಇದು ರಸ್ತೆ ಮತ್ತಷ್ಟು ಕುಸಿಯುವ ಭೀತಿಯನ್ನು ತಂದೊಡ್ಡಿದೆ.

ಚರಂಡಿಯನ್ನು ಮುಚ್ಚಿರುವ ಕಲ್ಲುಗಳನ್ನು ಬೃಹತ್‌ ಗಾತ್ರದ ಹಿಟಾಚಿಗಳ ನೆರವಿನಿಂದ ತೆರವು ಮಾಡುತ್ತಿದ್ದುದು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂತು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಮುಖ್ಯ ಎಂಜಿನಿಯರ್‌ ಗಣೇಶ್‌ ನೇತೃತ್ವದಲ್ಲಿ ಅಧಿಕಾರಿಗಳು ಚಾರ್ಮಾಡಿ ಮಾರ್ಗದಲ್ಲಿ ಭೂಕುಸಿತದಿಂದ ಆಗಿರುವ ಹಾನಿ ಕುರಿತು ಪರಿಶೀಲಿಸುತ್ತಿದ್ದರು.

60 ಸ್ಥಳಗಳಲ್ಲಿ ಕುಸಿತ: ಕಾಮಗಾರಿ ಪರಿಶೀಲನೆ ನಡುವೆಯೇ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಣೇಶ್‌ ಅವರು, ‘ಚಾರ್ಮಾಡಿ ಘಾಟಿಯಲ್ಲಿ 60ಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಆಗಿರುವ ಹಾನಿ ಕುರಿತು ಪರಿಶೀಲನೆ ನಡೆಯುತ್ತಿದೆ. ಜೊತೆಯಲ್ಲೇ ತೆರವು ಕಾರ್ಯಾಚರಣೆಯೂ ನಡೆಯುತ್ತಿದೆ. ಹಾನಿಯ ಅಂದಾಜು ವರದಿ ಲಭ್ಯವಾದ ತಕ್ಷಣ ದುರಸ್ತಿ ಕಾಮಗಾರಿ ಕುರಿತು ನಿರ್ಧರಿಸಲಾಗುವುದು’ ಎಂದರು.

ಚಾರ್ಮಾಡಿ ಗ್ರಾಮದ ಕಡೆಯಿಂದ ಮಂಗಳೂರು ವೃತ್ತದ ವ್ಯಾಪ್ತಿಯ ಗಡಿಯವರೆಗಿನ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಮುಗರೋಡಿ ಕನ್‌ಸ್ಟ್ರಕ್ಷನ್‌ ಕಂಪನಿಯ ಹಲವು ಹಿಟಾಚಿ, ಜೆಸಿಬಿ ಯಂತ್ರಗಳು, ಟಿಪ್ಪರ್‌ಗಳೊಂದಿಗೆ ಹತ್ತಾರು ಕಾರ್ಮಿಕರು ರಸ್ತೆಯ ಮೇಲೆ ಬಿದ್ದ ಕಲ್ಲು, ಮಣ್ಣು, ಮರಗಳನ್ನು ತೆರವು ಮಾಡುತ್ತಿದ್ದಾರೆ.

ಮತ್ತೆ ಕುಸಿಯುವ ಭೀತಿ: ಹಲವು ಕಡೆಗಳಲ್ಲಿ ಭೂಕುಸಿತದಿಂದ ಆಳೆತ್ತರದ ಕಂದಕಗಳು ಸೃಷ್ಟಿಯಾಗಿವೆ. ಕೆಲವೆಡೆ ಗುಡ್ಡದ ಭಾಗದಲ್ಲಿ ಮಣ್ಣು ಸಡಿಲಗೊಂಡಿದೆ. ಮಳೆ ಹೆಚ್ಚಾದರೆ ಬಂಡೆಗಳು, ಮರಗಳು ರಸ್ತೆಯ ಮೇಲೆ ಉರುಳಿ ಬೀಳುವ ಸ್ಥಿತಿ ಇದೆ.

ಕಾಮಗಾರಿಗೆ ಪ್ರವಾಸಿಗರ ಕಾಟ

ಚಾರ್ಮಾಡಿ ಘಾಟಿಯಲ್ಲಿ ಎರಡೂ ಕಡೆಗಳಿಂದ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಘಾಟಿಯ ನಡುವಿನ ಹಳ್ಳಿಗಳ ನಿವಾಸಿಗಳೆಂದು ತನಿಖಾ ಠಾಣೆಗಳಲ್ಲಿ ಸುಳ್ಳು ಹೇಳಿ ಒಳಕ್ಕೆ ಬರುತ್ತಿರುವ ಪ್ರವಾಸಿಗರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ಕೆಲವರು ಕಾಮಗಾರಿ ಸ್ಥಳದಲ್ಲಿ ಹಿಟಾಚಿ ಯಂತ್ರದ ಕೆಲಸದ ನಡುವೆಯೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಇದ್ದುದು ಮಂಗಳವಾರ ಕಂಡುಬಂತು.

Post Comments (+)