ಬೆದರಿಸಿ ಚೆಕ್‌ಗೆ ಸಹಿ ಪಡೆದ ಆರೋಪ:ಇಬ್ಬರು ಇನ್‌ಸ್ಪೆಕ್ಟರ್‌ಗಳ ವಿರುದ್ಧ ಎಫ್‌ಐಆರ್

7

ಬೆದರಿಸಿ ಚೆಕ್‌ಗೆ ಸಹಿ ಪಡೆದ ಆರೋಪ:ಇಬ್ಬರು ಇನ್‌ಸ್ಪೆಕ್ಟರ್‌ಗಳ ವಿರುದ್ಧ ಎಫ್‌ಐಆರ್

Published:
Updated:

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್ 7ನೇ ಹಂತದಲ್ಲಿರುವ ‘ಪೆಂಟನ್ ಕನ್ಸಲ್ಟಿಂಗ್’ ಕಂಪನಿ ಮಾಲೀಕನಿಗೆ ಬೆದರಿಸಿ ₹ 62 ಲಕ್ಷ ಮೊತ್ತದ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡ ಆರೋಪದ ಮೇಲೆ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತಮಗೆ ವಂಚನೆ ಆಗಿರುವ ಬಗ್ಗೆ ಕಂಪನಿ ಮಾಲೀಕ ಸುರೇಶ್ ಕೆ.ಮೆನನ್ ಅವರು 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಚ್‌ಎಸ್‌ಆರ್ ಲೇಔಟ್ ‍ಪೊಲೀಸರಿಗೆ ಸೂಚಿಸಿದ್ದರು.

‘ಎಸಿಬಿ ಇನ್‌ಸ್ಪೆಕ್ಟರ್ ಚಂದ್ರಪ್ಪ, ಎಚ್‌ಎಸ್‌ಆರ್ ಲೇಔಟ್ ಠಾಣೆಯ ಇನ್‌ಸ್ಪೆಕ್ಟರ್ ನಾಗರಾಜ್, ಹೊಸಪಾಳ್ಯದ ಅರಾಕಲ್ ಕೇಶವನ್ ರಮೇಶ್ ಹಾಗೂ ಅವರ ಪತ್ನಿ ಸ್ವರ್ಣ ಎಂಬುವರ ವಿರುದ್ಧ ಫೆ.4ರಂದು ಪ್ರಕರಣ ದಾಖಲಾಗಿದೆ. ಮಡಿವಾಳ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಸುರೇಶ್ ದೂರಿದ್ದೇನು: ‘ಹಲವು ವರ್ಷಗಳಿಂದ ಕನ್ಸಲ್ಟೆನ್ಸಿ ಕಂಪನಿ ನಡೆಸುತ್ತಿದ್ದೇನೆ. ಆಸ್ಟ್ರೇಲಿಯಾ, ಕೆನಡಾ ಹಾಗೂ ಇತರೆ ದೇಶಗಳಲ್ಲಿ ಕಂಪನಿ ತೆರೆಯುವವರಿಗೆ ಹಾಗೂ ಅಲ್ಲೇ ಶಾಶ್ವತವಾಗಿ ನೆಲೆಸಲು ಇಚ್ಛಿಸುವವರಿಗೆ ಸಲಹೆಗಳನ್ನು ಕೊಡುತ್ತೇನೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸುರಕ್ಷಿತವಾಗಿ ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ.’

‘2018ರ ಸೆ.1ರಂದು ಕಂಪನಿ ಕಚೇರಿಗೆ ಬಂದಿದ್ದ ಅರಾಕಲ್–ಸ್ವರ್ಣ ದಂಪತಿ, ಆಸ್ಟ್ರೇಲಿಯಾದಲ್ಲಿ ಉದ್ಯಮ ಸ್ಥಾಪಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಬ್ರಿಸ್ಬೇನ್‌ನಲ್ಲಿ ಕಂಪನಿ ಪ್ರಾರಂಭಿಸಲು ಜಾಗ ಖರೀದಿಗಾಗಿ ₹ 62 ಲಕ್ಷ ಮೊತ್ತದ ಚೆಕ್‌ಗಳನ್ನು ಕೊಟ್ಟಿದ್ದರು. ಆ ನಂತರ ಅಲ್ಲಿದ್ದ ನನ್ನ ನೌಕರರನ್ನು ಸಂಪರ್ಕಿಸಿ, ದಂಪತಿ ಹೆಸರಿನಲ್ಲಿ ಕಂಪನಿ ಪ್ರಾರಂಭಿಸುವ ಕೆಲಸ ಶುರು ಮಾಡಿದ್ದೆ.’

‘ಆಸ್ಟ್ರೇಲಿಯಾದಲ್ಲಿ ಉದ್ಯಮ ಸ್ಥಾಪಿಸಬೇಕೆಂದರೆ 2 ಲಕ್ಷ ಆಸ್ಟೇಲಿಯಾ ಡಾಲರ್ ಅಗತ್ಯವಾಗಿ ಬ್ಯಾಂಕ್ ಖಾತೆಯಲ್ಲಿ ಇರಬೇಕು. 14 ವರ್ಷ ಇಂಗ್ಲಿಷ್ ಭಾಷೆಯಲ್ಲೇ ವಿದ್ಯಾಭ್ಯಾಸ ಮಾಡಿರಬೇಕು. ಈ ಯಾವ ನಿಯಮಗಳನ್ನೂ ದಂಪತಿ ಪಾಲಿಸಿಲ್ಲ ಎಂಬುದು ಆನಂತರ ಗೊತ್ತಾಯಿತು. ಅಲ್ಲದೆ, ಸ್ವರ್ಣ ಅವರು ತಾವು ಪೆರಿಯಾರ್ ವಿಶ್ವವಿದ್ಯಾಲಯದಲ್ಲಿ ‘ಹೋಟೆಲ್ ಮ್ಯಾನೇಜ್‌ಮೆಂಟ್’ ಕೋರ್ಸ್ ಪದವಿ ಪಡೆದಿರುವುದಾಗಿ ಸುಳ್ಳು ದಾಖಲೆಗಳನ್ನು ಕೊಟ್ಟಿದ್ದ ಸಂಗತಿಯೂ ಗಮನಕ್ಕೆ ಬಂತು.’

‘ಕೆಲ ದಿನಗಳ ನಂತರ ದಂಪತಿ ಹಣ ವಾಪಸ್ ಕೊಡುವಂತೆ ಕೇಳಿದರು. ಈವರೆಗೆ ಆಗಿರುವ ಖರ್ಚು ಮುರಿದು ಉಳಿದ ಹಣ ಮರಳಿಸುವುದಾಗಿ ಹೇಳಿದ್ದೆ. ಅದಕ್ಕೆ ಒಪ್ಪದ ಅವರು, ಇನ್‌ಸ್ಪೆಕ್ಟರ್‌ಗಳ ಮೂಲಕ ಬೆದರಿಕೆ ಹಾಕಿಸಿದರು. ಅವರು ನನ್ನನ್ನು ಠಾಣೆಗೆ ಕರೆಸಿಕೊಂಡು ₹ 62 ಲಕ್ಷ ಮೊತ್ತಕ್ಕೆ ಚೆಕ್‌ಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡರು’ ಎಂದು ಸುರೇಶ್ ದೂರಿನಲ್ಲಿ ವಿವರಿಸಿದ್ದಾರೆ.

ರಮೇಶ್ ಹೇಳೋದೇನು?

‘ಹಣ ‌ಕೈಸೇರಿದ ಬಳಿಕ ಸುರೇಶ್ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ನಾವು ಮೋಸ ಹೋಗುತ್ತಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ಹಣ ಹಿಂಪಡೆಯಲು ನಿರ್ಧರಿಸಿದೆವು. ಅವರು ಹಣ ಕೊಡಲು ಒಪ್ಪದಿದ್ದಾಗ 2018ರ ಡಿ.26ರಂದು ಸುರೇಶ್ ಹಾಗೂ ಅವರ ಪತ್ನಿ ರಾಣಿ ಜೋಷ್ ಮೆನನ್ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದೆವು. ದಂಪತಿಯನ್ನು ವಿಚಾರಣೆಗೆ ಕರೆಸಿದ್ದ ಇನ್‌ಸ್ಪೆಕ್ಟರ್, ಹಣ ವಾಪಸ್ ಕೊಡುವಂತೆ ಸೂಚಿಸಿದ್ದರು. ಆಗ ₹ 7 ಲಕ್ಷವನ್ನು ಕೊಟ್ಟಿದ್ದ ಸುರೇಶ್, ಉಳಿದಿದ್ದನ್ನು ಮರಳಿಸಲು ಕಾಲಾವಕಾಶ ಕೋರಿದ್ದರು. ಈಗ ಕೋರ್ಟ್‌ನಲ್ಲಿ ಸುಳ್ಳು ಮೊಕದ್ದಮೆ ಹೂಡಿದ್ದಾರೆ’ ಎಂದು ರಮೇಶ್ ಆರೋಪಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !