ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆಂತರಿಕ ಅಂಕ ತಕ್ಷಣ ಅಪ್‌ಲೋಡ್‌ ಮಾಡಬೇಕು

ಮಂಗಳವಾರ, ಮಾರ್ಚ್ 19, 2019
28 °C
ಶಾಲೆಗಳಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಚ್ಚರಿಕೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆಂತರಿಕ ಅಂಕ ತಕ್ಷಣ ಅಪ್‌ಲೋಡ್‌ ಮಾಡಬೇಕು

Published:
Updated:
Prajavani

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್‌ಲೈನ್‌ ಮೂಲಕ ಇನ್ನೂ ಭರ್ತಿ ಮಾಡದಿರುವ ಶಾಲೆಗಳು ತಕ್ಷಣವೇ ಭರ್ತಿ ಮಾಡಬೇಕು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಖಡಕ್‌ ಸೂಚನೆ ನೀಡಿದ್ದಾರೆ.

ಗುರುವಾರ ಸಂಜೆ ವೇಳೆಗೆ ರಾಜ್ಯದ ಸುಮಾರು 400 ಶಾಲೆಗಳು ಆಂತರಿಕ ಅಂಕಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿರಲಿಲ್ಲ. ಈ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯ 55, ಚಿಕ್ಕೋಡಿ 34, ಮೈಸೂರು 26, ಧಾರವಾಡ 22, ರಾಯಚೂರು ಜಿಲ್ಲೆಯ 21 ಶಾಲೆಗಳು ಸೇರಿವೆ.  ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ಎಲ್ಲ ಶಾಲೆಗಳೂ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲವಾದರೆ ಆಂತರಿಕ ಅಂಕ ಭರ್ತಿ ಮಾಡಲು ಇರುವ ಆನ್‌ಲೈನ್‌ ಡೇಟಾ ಎಂಟ್ರಿ ವಿಭಾಗ ಫ್ರೀಜ್‌ ಮಾಡಲಾಗುವುದು. ಶಾಲೆಗಳು ಫಲಿತಾಂಶ ಪಡೆಯದೇ ಇದ್ದರೆ ಮಂಡಳಿ ಹೊಣೆಯಲ್ಲ ಎಂದೂ ಎಚ್ಚರಿಕೆ ನೀಡಿದ್ದಾರೆ.

ಆಂತರಿಕ ಅಂಕಗಳಲ್ಲಿ ಎರಡು ವಿಭಾಗಗಳಿದ್ದು (ಎ ಮತ್ತು ಬಿ), ಅವುಗಳನ್ನು ಕಡ್ಡಾಯವಾಗಿ ತುಂಬಲೇ ಬೇಕು. ಡಿಡಿಪಿಐ ಮತ್ತು ಬಿಇಒ ಮಟ್ಟದಲ್ಲಿ ಡ್ಯಾಷ್‌ಬೋರ್ಡ್‌ ಇದ್ದು ಶಾಲೆಗಳು ಭರ್ತಿ ಮಾಡಿವೆಯೋ ಇಲ್ಲವೋ ಎಂಬುದನ್ನು ಜಿಲ್ಲಾ ಮತ್ತು ಬ್ಲಾಕ್‌ ಮಟ್ಟದ ಅಧಿಕಾರಿಗಳು ಪರಿಶೀಲಿಸಿ, ಶಾಲೆಗಳಿಗೆ ಸೂಚಿಸಿ ತಕ್ಷಣವೇ ಭರ್ತಿ ಮಾಡಿಸಬೇಕು ಎಂದೂ ಸುಮಂಗಲಾ ಹೇಳಿದ್ದಾರೆ.

‘ಒಟ್ಟು 14,447 ಶಾಲೆಗಳಲ್ಲಿ ಆಂತರಿಕ ಅಂಕವನ್ನು ಭರ್ತಿ ಮಾಡುವ ಕೆಲಸವನ್ನು 14047 ಶಾಲೆಗಳು ಈಗಾಗಲೇ ಆರಂಭಿಸಿವೆ. 400 ಶಾಲೆಗಳು ಇನ್ನೂ ಆರಂಭಿಸಿರಲಿಲ್ಲ.  ಚುರುಕು ಮುಟ್ಟಿಸಿದ ಬಳಿಕ ಸಾಕಷ್ಟು ಶಾಲೆಗಳು ಭರ್ತಿ ಮಾಡುವ ಕಾರ್ಯದಲ್ಲಿ ಆರಂಭಿಸಿವೆ. ಡ್ಯಾಷ್‌ಬೋರ್ಡ್‌ ಮೂಲಕ ಇದರ ಮೇಲೆ ಗಮನ ಇಟ್ಟಿದ್ದೇನೆ’ ಎಂದು ಸುಮಂಗಲಾ ‘ಪ್ರಜಾವಾಣಿ’ಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !