ಮತದಾರರ ಸೆಳೆಯಲು ನಾನಾ ಕಸರತ್ತು

ಬುಧವಾರ, ಏಪ್ರಿಲ್ 24, 2019
32 °C
ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಪಣ: ಜನರಲ್ಲಿ ಜಾಗೃತಿ ಯತ್ನ

ಮತದಾರರ ಸೆಳೆಯಲು ನಾನಾ ಕಸರತ್ತು

Published:
Updated:

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್‌ ಸಮಿತಿಯು ಪಣ ತೊಟ್ಟಿದೆ. ನಾನಾ ಬಗೆಯ ಪ್ರಚಾರಗಳ ಮೂಲಕ ಜನಸಾಮಾನ್ಯರನ್ನು ಜಾಗೃತಿಗೊಳಿಸಲು ಯತ್ನಿಸುತ್ತಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ರಾಮನಗರ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನದಲ್ಲಿ ಇತ್ತು. ಆದರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಶೇಕಡವಾರು ಮತದಾನ ಪ್ರಮಾಣವು ತೃಪ್ತಿಕರ ಮಟ್ಟದಲ್ಲಿ ಇಲ್ಲ. ಅದರಲ್ಲಿಯೂ ನಗರ ವ್ಯಾಪ್ತಿಯಲ್ಲಿ ಈ ಪ್ರಮಾಣವು ಇನ್ನಷ್ಟು ಕಡಿಮೆ ಇದೆ. ಹೀಗಾಗಿ ಜಿಲ್ಲಾ ಮತದಾರ ಜಾಗೃತಿ ಸಮಿತಿಯು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಜೊತೆಗೆ ವಿವಿಧ ಬಗೆಯ ಪ್ರಚಾರ ಹಮ್ಮಿಕೊಳ್ಳುತ್ತಿದೆ.

ಸ್ವೀಪ್ ಸಮಿತಿಯ ವತಿಯಿಂದ ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ಮುದ್ರಿಸಲಾಗಿದ್ದು. ಇವುಗಳನ್ನು ಅಲ್ಲಲ್ಲಿ ಹಂಚಲಾಗುತ್ತಿದೆ. ನಿರಾಶ್ರಿತರು, ಅನಾಥರು, ವಲಸಿಗ ಕಾರ್ಮಿಕರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜನನಿಬಿಡ ಪ್ರದೇಶಗಳಾದ ರೇಷ್ಮೆ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಬಸ್‌ ನಿಲ್ದಾಣ ಮೊದಲಾದ ಕಡೆಗಳಲ್ಲೂ ಕರಪತ್ರಗಳನ್ನು ಹಂಚಲಾಗುತ್ತಿದೆ. ಜಿಲ್ಲೆಯಲ್ಲಿನ ಕಾಲೇಜುಗಳಿಗೆ ತೆರಳಿ ಯುವಜನರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಕೋರಲಾಗುತ್ತಿದೆ.

ಮುಂಜಾನೆ ಮೈಕ್‌ ಅಬ್ಬರ

ನಗರಸಭೆಯಿಂದ ಪ್ರತಿ ಮುಂಜಾನೆ ಆಟೊಗಳ ಮೂಲಕ ಮನೆಮನೆಗೆ ತೆರಳಿ ಕಸವನ್ನು ಸಂಗ್ರಹಿಸಲಾಗುತ್ತಿದೆ. ಈ ಆಟೊಗಳಿಗೆ ಮೈಕ್‌ಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಮತದಾನದ ಜಾಗೃತಿಯ ಧ್ವನಿಸುರಳಿಗಳನ್ನು ಅಳವಡಿಸಲಾಗಿದೆ. ಮತದಾನವು ಅತ್ಯಂತ ಪವಿತ್ರ ಕರ್ತವ್ಯವಾಗಿದ್ದು, ದೇಶದ ಒಳಿತಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪ್ರೇರೇಪಿಸಲಾಗುತ್ತಿದೆ.

ಮತದಾರರ ಪ್ರಮಾಣ ಹೆಚ್ಚಳ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಐದು ವರ್ಷ ವ್ಯಾಪ್ತಿಯಲ್ಲಿ ಸಾಕಷ್ಟು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿಯೇ 16,328 ಮತದಾರರು ಹೆಚ್ಚಿದ್ದಾರೆ.

ಯುವ ಮತದಾರರ ಪುಳಕ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವರ್ಷ 18–19 ವಯಸ್ಸಿನ 14,030 ಯುವಜನರು ಪಟ್ಟಿಗೆ ಹೊಸತಾಗಿ ಸೇರ್ಪಡೆಗೊಂಡಿದ್ದಾರೆ. ಈ ಎಲ್ಲರೂ ಮೊದಲ ಮತದಾನದ ಪುಳಕದಲ್ಲಿದ್ದಾರೆ. ಹೀಗಾಗಿ ಕಾಲೇಜುಗಳಲ್ಲಿಯೂ ಹೆಚ್ಚು ಮತದಾನ ಜಾಗೃತಿ ಕಾರ್ಯ ಕ್ರಮಗಳು ನಡೆದಿವೆ.

ಮೂರು ದಶಕದ ಹಿಂದೆಯೇ ದಾಖಲೆ

ಕನಕಪುರ/ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇ 72.16ರಷ್ಟು ಮತದಾನವಾಗಿರುವುದು ಈವರೆಗಿನ ದಾಖಲೆ ಆಗಿದೆ. ಇದು ಆಗಿರುವುದು 1984ರಲ್ಲಿ. 2004, 2009ರಲ್ಲಿ ಮತದಾನದ ಪ್ರಮಾಣವು ತೀವ್ರ ಕುಸಿದಿತ್ತು. ಕಳೆದ ಚುನಾವಣೆಯಲ್ಲಿ ಇದು ಕೊಂಚ ಸುಧಾರಿಸಿದೆ. ಈ ಬಾರಿ ಕನಿಷ್ಠ ಶೇ 80–85ರಷ್ಟು ಮತದಾನ ಆಗುವಂತ ಮಾಡಲು ಸ್ವೀಪ್ ಸಮಿತಿ ಪಣ ತೊಟ್ಟಿದೆ.

ನಿರಾಶಾದಾಯಕ ಸ್ಪಂದನೆ

ಮತದಾನ ಜಾಗೃತಿಯಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಸಲುವಾಗಿ ಸ್ವೀಪ್ ಸಮಿತಿಯು ಸೋಷಿಯಲ್‌ ಮೀಡಿಯಾ ಬಳಕೆದಾರರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಅದಕ್ಕೆ ಜನರಿಂದ ನಿರಾಶಾದಾಯಕ ಸ್ಪಂದನೆ ವ್ಯಕ್ತವಾಗಿದೆ.

ಮತದಾನದ ಮಹತ್ವವನ್ನು ಸಾರುವ ಕಿರುಚಿತ್ರಗಳು ಹಾಗೂ ಶೀರ್ಷಿಕೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಲಾಗಿತ್ತು. ಅದಕ್ಕಾಗಿ ನಗದು ಬಹುಮಾನವನ್ನೂ ಇಡಲಾಗಿತ್ತು. ಆದರೆ ಈವರೆಗೂ ಯಾರೊಬ್ಬರೂ ಈ ಸ್ಪರ್ಧೆಗೆ ವಿಡಿಯೊ, ಬರಹಗಳನ್ನು ಕಳುಹಿಸಿಲ್ಲ. ಹೀಗಾಗಿ ಇದರ ಕಡೆಯ ದಿನಾಂಕವನ್ನು ಇದೇ 26ವರೆಗೆ ವಿಸ್ತರಿಸಲಾಗಿದೆ. ನೈತಿಕ ಮತದಾನವನ್ನು ಬೆಂಬಲಿಸುವ 3–4 ನಾಲ್ಕು ನಿಮಿಷದ ವೀಡಿಯೊಗಳನ್ನು ಆಸಕ್ತರು ಜಿಲ್ಲಾಡಳಿತದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !