ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಸೇರಿಸಲು ಮನವಿ

ಮಂಗಳವಾರ, ಏಪ್ರಿಲ್ 23, 2019
31 °C
ಕೆಜಿಎಫ್‌ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಮನವಿ

ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಸೇರಿಸಲು ಮನವಿ

Published:
Updated:
Prajavani

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಸಾಲಮನ್ನಾ, ಬಡ್ಡಿ ಮನ್ನಾ, ಶೇ 3 ಬಡ್ಡಿದರದಲ್ಲಿ ಸಾಲ ಸೌಲಭ್ಯ, ಕಾಫಿ–ಕಾಳುಮೆಣಸಿಗೆ ಬೆಂಬಲ ಬೆಲೆ ನಿಗದಿ, ಕೋಮಾರ್ಕ್‌ ಸಂಸ್ಥೆ ಪುನಶ್ಚೇತನ ಮೊದಲಾದ ಅಂಶಗಳನ್ನು ಪಕ್ಷಗಳು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌ ಇಲ್ಲಿ ಸೋಮವಾರ ಮನವಿ ಮಾಡಿದರು.

ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಾಫಿ, ಕಾಳುಮೆಣಸು ಪ್ರಮುಖ ಬೆಳೆಗಳಾಗಿವೆ. ಉತ್ಪಾದನಾ ವೆಚ್ಚ ಹೆಚ್ಚಳ, ದರಕುಸಿತ, ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಕಾರಣಗಳಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬೆಳೆಗಾರರು ಹಿತಕಾಯುವ ನಿಟ್ಟಿನಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರಿಸುವಂತೆ ಪಕ್ಷಗಳ ಅಧ್ಯಕ್ಷರಿಗೆ ಕೋರುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‌ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾಫಿ ಬೆಳೆಗಾರರ 2018 ಡಿ.31ರವರೆಗೆ ಬಾಕಿ ಇರುವ ಸಾಲ, ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ವಾಣಿಜ್ಯ, ಸಹಕಾರಿ ಬ್ಯಾಂಕುಗಳಲ್ಲಿ ಶೇ 3ಬಡ್ಡಿದರದಲ್ಲಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಸ್ವಂತ ಹಿಡುವಳಿದಾರರಿಗೆ ಸಾಲ ನೀಡಬೇಕು. ಕಾಫಿ ಉದ್ಯಮಕ್ಕೆ ಸಂಬಂಧಿಸಿದ ‘7ಬಿ’ (ಕೇಂದ್ರೀಯ ಮಂಡಳಿ ನೇರ ತೆರಿಗೆ) ರದ್ದುಪಡಿಸಬೇಕು. ಡಾ.ಸ್ವಾಮಿನಾಥನ್ ವರದಿ ಆಧರಿಸಿ ಕಾಫಿ ಮತ್ತು ಕಾಳುಮೆಣಸಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಬಿಳಿಕಾಂಡಕೊರಕ ಕೀಟ ನಿಯಂತ್ರಣಕ್ಕೆ ಔಷಧಿ ಸಂಶೋಧನೆಗೆ ಭಾರತೀಯ ವಿಜ್ಞಾನ ಸಂಸ್ಥೆಗೆ ವಹಿಸಿರುವ ಯೋಜನೆಯನ್ನು ಮುಂದುವರಿಸಬೇಕು ಎಂಬುವು ಬೆಳೆಗಾರರ ಬೇಡಿಕೆಗಳಾಗಿದ್ದು, ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದರು.

ಬಹುರಾಜ್ಯ ಸಹಕಾರಿ ಸಂಸ್ಥೆ ‘ಕೋಮಾರ್ಕ್’ ಪುನಶ್ಚೇತನಕ್ಕಾಗಿ ಕ್ರಮ ಕೈಗೊಳ್ಳಬೇಕು. ಕಾಫಿ ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರಿ ನೀಡಬೇಕು. 12ನೇ ಪಂಚವಾರ್ಷಿಕ ಯೋಜನೆಯನ್ನು 2021ರವರೆಗೆ ಮುಂದುವರಿಸುವುದು. ಕಾಫಿ ಬೆಳೆಗಾರರಿಗೆ ಬಾಕಿ ಇರುವ ಸಹಾಯಧನವನ್ನು ಕಾಫಿ ಮಂಡಳಿ ಮೂಲಕ ಬಿಡುಗಡೆಗೊಳಿಸಬೇಕು,ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ರೂಪಿಸುವುದು, 12ನೇ ಪಂಚವಾರ್ಷಿಕ ಯೋಜನೆಯನ್ನು 2021ರವರೆಗೆ ಮುಂದುವರಿಸುವುದು. ಕಾಫಿ ಬೆಳೆಗಾರರಿಗೆ ಬಾಕಿ ಇರುವ ಸಹಾಯಧನವನ್ನು ಕಾಫಿ ಮಂಡಳಿ ಮೂಲಕ ಬಿಡುಗಡೆಗೊಳಿಸಬೇಕು ಎಂಬ ಅಂಶಗಳನ್ನು ಸೇರಿಸಬೇಕು ಎಂದು ಮನವಿ ಮಾಡಿದರು.

ಕೆಜಿಎಫ್‌ ಪ್ರಧಾನ ಕಾರ್ಯದರ್ಶಿ ಮುರಳೀಧರ ಎಸ್‌.ಬಕ್ಕರವಳ್ಳಿ, ವಿಜಯ್‌, ರೇವಣ್ಣಗೌಡ, ಬಿ.ಎಸ್‌.ಜೈರಾಮ್‌, ಎನ್‌.ಕೆ.ಪ್ರದೀಪ್‌, ಲಿಂಗಪ್ಪಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !