ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಘಟಕ ಸ್ಥಗಿತ: ಜನರ ಪರದಾಟ

ನಿರ್ವಹಣೆ ಮಾಡದ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರ ಆಗ್ರಹ
Last Updated 26 ಮಾರ್ಚ್ 2019, 9:49 IST
ಅಕ್ಷರ ಗಾತ್ರ

ಶಕ್ತಿನಗರ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಶಕ್ತಿನಗರ, ದೇವಸೂಗೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ದೇವಸೂಗೂರು ಗ್ರಾಮದಲ್ಲಿ ಎಸ್‌ಸಿ ಓಣಿ, ಒಂದನೇ ಕ್ರಾಸ್‌ ಮತ್ತು ಜನತಾ ಕಾಲೊನಿ ಸೇರಿ ಒಟ್ಟು ಮೂರು ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳು ಕಾರ್ಯ ನಿರ್ವಹಿಸುತ್ತಿಲ್ಲ. ದುರಸ್ತಿ ಮಾಡುವವರೇ ಇಲ್ಲದೆ ಹಾಳಾಗಿವೆ.

ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಆರೋಗ್ಯವನ್ನು ಕಾಪಾಡುವ ಸರ್ಕಾರದ ಯೋಜನೆ ಕುಂಟುತ್ತಾ ಸಾಗುತ್ತಿದೆ.
ಕೆಲವೆಡೆ ಘಟಕ ಸ್ಥಾಪನೆಯಾಗಿದ್ದರೂ ಜನರ ಉಪಯೊಗಕ್ಕೆ ಬಾರದಂತಾಗಿವೆ. ಜನತಾ ಕಾಲೊನಿಯಲ್ಲಿ ಘಟಕ
ಸ್ಥಾಪಿಸಿ ವರ್ಷವೇ ಕಳೆದಿದ್ದರೂ ಕಾರ್ಯಾರಂಭ ಮಾಡಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪ ಕರಣಗಳು ತುಕ್ಕು ಹಿಡಿಯುತ್ತಿವೆ.

ನಿತ್ಯ ಬೆಳಗಾದರೆ ಮಹಿಳೆಯರಿಗೆ ನೀರು ಎಲ್ಲಿಂದ ತರುವುದು, ಇವತ್ತು ಎಷ್ಟು ಕೊಡ ನೀರು ಸಿಗುತ್ತವೋ ಎನ್ನುವ ಚಿಂತೆ ಅವರಿಸಿದೆ. ನಿಯಮಾನುಸಾರ ಶುದ್ಧ ನೀರಿನ ಘಟಕ ಸ್ಥಾಪಿಸಲು ಅನುಮತಿ ಪಡೆದ ಏಜೆನ್ಸಿಗಳು 5 ವರ್ಷ ನಿರ್ವಹಣೆ ಮಾಡಬೇಕು. ಆದರೆ, ಯಾವ ಕಂಪನಿಯೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಮರ್ಪಕ ನಿರ್ವಹಣೆ ಮಾಡದ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಶರಣಪ್ಪ ಆಗ್ರಹಿಸಿದರು.

ಮತ್ತೊಂದೆಡೆ, ಶಕ್ತಿನಗರದ ಆರ್‌ಟಿಪಿಎಸ್ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು , ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಮಟ್ಟ ಬಹಳ ಕಡಿಮೆಯಾಗಿದೆ.

ಆರ್‌ಟಿಪಿಎಸ್‌ ಕಾಲೊನಿಗಳಲ್ಲಿ ನಿತ್ಯ ಒಂದು ಗಂಟೆಯವರೆಗೆ ಬಿಡುತ್ತಿರುವ ನೀರನ್ನು, 40 ನಿಮಿಷಗಳ ಕಾಲ ಮನೆಗಳಿಗೆ ನೀರು ಸರಬರಾಜು ಮಾಡಲಾಗುವುದು. ಕಾಲೊನಿಯ ನೌಕರರು, ಮಹಿಳೆಯರು ಸಹಕಾರಿಸಬೇಕಾಗಿ ಅಧಿಕಾರಿಗಳು ಕೋರಿದ್ದಾರೆ.

* ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಹೇಗಾದರೂ ಮಾಡಿ ಜನರಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಸಬೇಕು.

-ಶರಣಪ್ಪ, ತಾಲ್ಲೂಕು ಅಧ್ಯಕ್ಷ, ಮಾದಿಗ ಮೀಸಲಾತಿ ಹೋರಾಟ ಸಮಿತಿ

* ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ದುರಸ್ತಿಗೊಳಿಸಿ ಜನರಿಗೆ ಕುಡಿಯುವ ನೀರು ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು

-ರಮೇಶ ಜಗ್ಲಿ, ಸದಸ್ಯ, ಗ್ರಾಮ ಪಂಚಾಯಿತಿ, ದೇವಸೂಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT