ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಾಗಿ ದಿಕ್ಕು ತಪ್ಪಿಸುವ ಯತ್ನ: ಮಖ್ಯಮಂತ್ರಿ ಆರೋಪ

ಮೈತ್ರಿ ಪಕ್ಷದ ಪ್ರಚಾರ ಸಭೆ
Last Updated 2 ಮೇ 2019, 16:17 IST
ಅಕ್ಷರ ಗಾತ್ರ

ಮೂಡಿಗೆರೆ: ಭಾರತೀಯ ಸೈನಿಕರ ಸಾಧನೆಯನ್ನು ಚುನಾವಣೆಯ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಜನರ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದು ಇದರಿಂದಲೇ ಬಿಜೆಪಿಯ ಪಥನದ ಹಾದಿ ಪ್ರಾರಂಭವಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈತ್ರಿ ಪಕ್ಷದ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯದ ಬಳಿಕ ದೇಶಕ್ಕೆ ಕಾಡದ ಅಭದ್ರತೆಯು, ಕಳೆದ ಐದು ವರ್ಷಗಳಿಂದ ಕಾಡ ತೊಡಗಿದೆ. ಚುನಾವಣೆಯಲ್ಲಿ ವಾಮ ಮಾರ್ಗವನ್ನು ಅನುಸರಿಸುವ ಯತ್ನವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಮಾಡುವ ಘೋಷಣೆ ಹೊರಡಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ನಾನು ಯಾವುದನ್ನೂ ಲೆಕ್ಕಿಸದೇ ಸಾಲಮನ್ನಾವನ್ನು ಜಾರಿಗೊಳಿಸಿದೆ. ರೈತರು ಹಾಗೂ ಕಾಫಿ ಬೆಳೆಗಾರರ ಸಮಸ್ಯೆಯನ್ನು ಬಿಜೆಪಿಯಾಗಲೀ, ನರೇಂದ್ರ ಮೋದಿಯಾಗಲೀ ಎಂದಿಗೂ ಆಲಿಸಿಲ್ಲ. ರಾಜ್ಯ ಸರ್ಕಾರ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಪರ ಮಾಡಿದ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ದೂರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ.ಜಯಮಾಲಾ ಮಾತನಾಡಿ, ‘ಸಂಸದೆ ಶೋಭಾ ಕರಂದ್ಲಾಜೆ ಅವರು 5 ವರ್ಷದಲ್ಲಿ ಕ್ಷೇತ್ರದತ್ತ ತಲೆ ಹಾಕಿರಲಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬೆಳೆಗಾರರ ಹಾಗೂ ಸ್ಥಳೀಯ ಜ್ವಲಂತ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಅಥವಾ ಬೇರೆಲ್ಲಿಯೂ ಚಕಾರವೆತ್ತಲಿಲ್ಲ. ರಾಜ್ಯ ಸರ್ಕಾರ ಮಾಡಿದ ಉತ್ತಮ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿ ಈಗ ಸ್ವ ಪಕ್ಷೀಯರಿಂದಲೇ ಗೋಬ್ಯಾಕ್ ಚಳವಳಿಗೆ ತುತ್ತಾಗಿದ್ದಾರೆ. ಇಂತಹ ಸಂಸದೆಯನ್ನು ಬಿಜೆಪಿಯವರ ಚಳವಳಿಯಂತೆ ಮನೆಗೆ ಕಳುಹಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಸಚಿವೆ ಮೋಟಮ್ಮ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿದರು.

ಕಾದು ಕುಳಿತ ಕಾರ್ಯಕರ್ತರು: ಮಧ್ಯಾಹ್ನ 2ಕ್ಕೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು 3.30ಕ್ಕೆ ಚಾಲನೆ ಪಡೆದುಕೊಂಡಿತು.

ಮುಖ್ಯಮಂತ್ರಿಗಳ ಬರುವಿಕೆಗಾಗಿ ಕಾದು ಕುಳಿತ ಕಾರ್ಯಕರ್ತರನ್ನು ಹಿಡಿದಿಡುವುದು ಕಾರ್ಯಕರ್ತರಿಗೆ ತಲೆನೋವಾಗಿ ಪರಿಣಮಿಸಿತ್ತು. ಇನ್ನೇನು ಕೆಲವೇ ನಿಮಿಷದಲ್ಲಿ ಮುಖ್ಯಮಂತ್ರಿಗಳು ಬರಲಿದ್ದಾರೆ ಎಂದು ಆಯೋಜಕರು ಪದೇ ಪದೇ ಪ್ರಕಟಿಸುವ ಮೂಲಕ ಕಾದುಕುಳಿತ ಕಾರ್ಯಕರ್ತರನ್ನು ಸಮಾಧಾನಿಸುವ ಪ್ರಯತ್ನ ಮಾಡುತ್ತಿದ್ದರು. 4.30ರ ಸುಮಾರಿಗೆ ಬಂದ ಮುಖ್ಯಮಂತ್ರಿಗಳು ಕೆಲ ಕಾಲ ವೇದಿಕೆಯಲ್ಲಿ ಆಸೀನರಾಗಿ ಬಳಿಕ ಪ್ರಚಾರ ಭಾಷಣ ನಡೆಸಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT