ವೈಯಕ್ತಿಕ ಟೀಕೆಗಳಿಂದ ರಾಜಕೀಯ ಮೌಲ್ಯಗಳ ಕುಸಿತ: ಸಿಎಂ

ಬುಧವಾರ, ಏಪ್ರಿಲ್ 24, 2019
31 °C

ವೈಯಕ್ತಿಕ ಟೀಕೆಗಳಿಂದ ರಾಜಕೀಯ ಮೌಲ್ಯಗಳ ಕುಸಿತ: ಸಿಎಂ

Published:
Updated:
Prajavani

ತಲವಾನೆ (ಬಾಳೆಹೊನ್ನೂರು): ‘ಉತ್ತರಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ವಿರೋಧ ಪಕ್ಷವನ್ನು ‘ಶರಾಬಿ’ ಪಾರ್ಟಿ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚುನಾವಣಾ ಪ್ರಚಾರದ ವೇಳೆ ವೈಯಕ್ತಿಕವಾದ ಟೀಕೆಗೆ ಆದ್ಯತೆ ನೀಡುತ್ತಿರುವುದು ರಾಜಕೀಯ ಮೌಲ್ಯಗಳ ಕುಸಿತ ಕಾಣುತ್ತಿರುವುದರ ಸಂಕೇತವಾಗಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ತಲವಾನೆ ಎಸ್ಟೇಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ರಾಜಕೀಯ ಮುಖಂಡರು ಸಭೆಯಲ್ಲಿ ಮಾತನಾಡಿದ್ದನ್ನು ಇಂದಿನ ಯುವಜನಾಂಗ ಬೇರೆ ಬೇರೆ ರೀತಿಯಲ್ಲಿ ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಸಹ್ಯಕರವಾಗಿ ಬಿಂಬಿಸುವುದನ್ನು ನೋಡಿದಾಗ ಸಮಾಜದಲ್ಲಿ ಅವರ ಅಭಿರುಚಿ, ಯೋಚನೆಯ ಲಹರಿ ಯಾವ ಕಡೆಗೆ ಹೊರಳುತ್ತಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಗನ ಚಿತ್ರದ ಕ್ಯಾಸೆಟ್ ಬಿಡುಗೆಡ ಸಮಾರಂಭದಲ್ಲಿ ನಿರ್ದೇಶಕರ ಸಲಹೆಯಂತೆ ಜನರ ಮಧ್ಯದಿಂದ ನಿಖಿಲ್ ಬರುತ್ತಿರುವ ವೇಳೆ ‘ಎಲ್ಲಿದ್ದಿಯಪ್ಪಾ ನಿಖಿಲ್’ ಎಂದು ಕೇಳಿದ್ದನ್ನೇ ಕೆಲವರು ಅಪಪ್ರಚಾರ ಮಾಡಿದರು. ಕುಟುಂಬದ ನಾವೆಲ್ಲಾ ಬದುಕಿರುವುದೇ ಜನಗಳ ಮಧ್ಯದಲ್ಲಿ. ಸೋಲಲಿ ಗೆಲ್ಲಲಿ, ನಾವೆಲ್ಲಾ ಜನರ ಕಷ್ಟ ಸುಖಕ್ಕೆ ಹೋರಾಟ ಮಾಡಿಕೊಂಡೇ ರಾಜಕೀಯದಲ್ಲಿ ಬದುಕಿದ್ದೇವೆ. ಹಣ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ. ಅಧಿಕಾರ ಇಲ್ಲದಿದ್ದಾಗಲೂ ಕುಗ್ಗಿಲ್ಲ’ ಎಂದರು.

‘ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೊದಲ ಬಾರಿಗೆ ₹1,500 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಕುಡಿಯುವ ನೀರಿನ ಯೋಜನೆಗಳಿಗೆ ₹400 ಕೋಟಿ, ಬೀದರ್ ಜಿಲ್ಲೆಗೆ ಪ್ರಥಮಬಾರಿಗೆ ನೀರಾವರಿ ಯೋಜನೆಗಳಿಗೆ ₹500 ಕೋಟಿ ನೀಡಲಾಗಿದೆ. ಆದರೂ ಅದಕ್ಕೂ ಕಮಿಷನ್ ಹೊಡೆಯಲು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !