ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ ಸಾರುವ ಸಾಧನ ಚಿತ್ರಕಲೆ: ಬೂಬಾಲನ್‌ ಅಭಿಪ್ರಾಯ

ನಗರದ ಮಹಾನಗರಪಾಲಿಕೆಯ ಉದ್ಯಾನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ
Last Updated 7 ಏಪ್ರಿಲ್ 2019, 15:10 IST
ಅಕ್ಷರ ಗಾತ್ರ

ತುಮಕೂರು: ಚಿತ್ರಕಲೆಯು ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶಗಳನ್ನು ತಲುಪಿಸುವ ಉತ್ತಮ ಸಾಧನವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್‌ ಅಭಿಪ್ರಾಯಪಟ್ಟರು.

ನಗರದ ಮಹಾನಗರ ಪಾಲಿಕೆಯ ಉದ್ಯಾನದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ, ಚಿತ್ರಕಲಾ ಪರಿಷತ್‌ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಕಲಾವಿದರು ತಮ್ಮ ಕುಂಚಗಳಲ್ಲಿ ಅರಳಿಸುವ ಚಿತ್ರಕಲೆಯು ಹಲವಾರು ಜನರನ್ನು ತಲುಪಬೇಕು. ಆ ಮೂಲಕ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಬೇಕು. ಹಾಗಾಗಿ ಕಲಾವಿದರು ತಮ್ಮ ಯೋಚನಾ ಶಕ್ತಿಯನ್ನು ಉಪಯೋಗಿಸಿಕೊಂಡು ಸಂದೇಶ ಸಾರುವ ಸುಂದರ ಚಿತ್ರಗಳನ್ನು ರಚಿಸಬೇಕು ಎಂದು ಕೋರಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯೆ ವಾಸಂತಿ ಉಪ್ಪಾರ್‌ ಮಾತನಾಡಿ, ಕಲಾವಿದರು ‘ಆಮಿಷವಿಲ್ಲದ ಮತದಾನ’, ‘ಸಮಾಜದ ಎಲ್ಲ ಸ್ಥರದ ಜನರ ಚುನಾವಣೆಯಲ್ಲಿ ಭಾಗವಹಿಸುವಿಕೆ’, ‘ಅಂಗವಿಕಲರ ಮತದಾನಕ್ಕಾಗಿ ಒದಗಿಸಿರುವ ವಿಶೇಷ ಸೌಲಭ್ಯಗಳು’, ಗರ್ಭಿಣಿ, ಬಾಣಂತಿ ಹಾಗೂ ತೃತೀಯ ಲಿಂಗಿಗಳಿಗೆ ಮತದಾನ ಮಾಡಲು ನೀಡಲಾಗಿರುವ ಆದ್ಯತೆ ಹಾಗೂ ಆಮಿಷ ತೋರುವ ಜನರ ವಿರುದ್ಧ ಸಿ–ವಿಜಿಲ್‌ ಆ್ಯಪ್ ಮುಖಾಂತರ ದೂರು ದಾಖಲಿಸುವ ಸಂದೇಶಗಳನ್ನು ಸಾರುವ ಚಿತ್ರಗಳನ್ನು ಬಿಡಿಸಬೇಕು ಎಂದು ಸ್ಪರ್ಧೆಯ ನಿಯಮಗಳನ್ನು ತಿಳಿಸಿದರು.

ಚಿತ್ರಕಲಾ ಪರಿಷತ್‌ನ ರಮೇಶ್‌ ಮಾತನಾಡಿ, ‘ಚುನಾವಣೆಯ ಮಹತ್ವ ಸಾರುವ ಸಂದೇಶಗಳನ್ನು ಎಲ್ಲೆಡೆ ಪ್ರಚಾರ ಪಡಿಸಲು ಚಿತ್ರ ಕಲಾವಿದರನ್ನು ಬಳಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಈ ಅಧಿಕಾರವನ್ನು ಕೇವಲ ಬಹುಮಾನಕ್ಕಾಗಿ ಮಾತ್ರವಲ್ಲದೆ ದೇಶಾಭಿಮಾನಕ್ಕಾಗಿ ಬಳಸಿಕೊಂಡು ಉತ್ತಮ ಚಿತ್ರಪಟಗಳನ್ನು ರಚಿಸಲಾಗುವುದು’ ಎಂದು ಆಶಯ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಕಾಮಾಕ್ಷಿ, ತೀರ್ಪುಗಾರರಾದ ಪ್ರಭು ಹೊಸೂರು, ಕೆ.ಎನ್.ಮನು ಚಕ್ರವರ್ತಿ, ಕೆ.ಎಂ.ರವೀಶ್, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರಾದ ಮಹಂಕಾಳಪ್ಪ, ರಾಜಶೇಖರ್, ರಾಜ್‌ಕುಮಾರ್, ದೇವರಾಜ್, ಶ್ರೀನಿವಾಸ್, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್ ಇದ್ದರು.

ಸರ್ಕಾರಿ ಕಚೇರಿಗಳಲ್ಲಿ ಚಿತ್ರಪಟ ಪ್ರದರ್ಶನ

ಬಹುಮಾನ ವಿತರಿಸಿದ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್‌ ಅವರು, ‘ಪ‍್ರತಿಯೊಬ್ಬ ಕಲಾವಿದರೂ ಉತ್ತಮ ಹಾಗೂ ಅರ್ಥಗರ್ಭಿತವಾದ ಸಂದೇಶಗಳನ್ನು ಚಿತ್ರಿಸಿದ್ದು ಉತ್ಕೃಷ್ಟವಾಗಿವೆ’ ಎಂದು ಅಭಿನಂದಿಸಿದರು.

ಈ ಚಿತ್ರಪಟಗಳನ್ನು ಜಿಲ್ಲಾಧಿಕಾರಿ ಕಚೇರಿ, ಸಿಇಒ, ಎಸ್‌ಪಿ ಕಚೇರಿ ಹಾಗೂ ಪಾಲಿಕೆ ಆಯುಕ್ತರ ಕಚೇರಿಗಳಲ್ಲಿ ಪ್ರದರ್ಶಿಸಿ ಆ ಮೂಲಕ ಚುನಾವಣೆ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಚಿತ್ರಕಲಾ ವಿಜೇತರು

ಅತ್ಯುತ್ತಮ ಚಿತ್ರಗಳನ್ನು ರಚಿಸಿದ ಕಲಾವಿದರಿಗೆ ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಓಂಕಾರ್‌ (ಪ್ರಥಮ), ಎಸ್‌.ವಿ.ಆನಂದ್‌ (ದ್ವಿತೀಯ), ಪಿ.ಹೇಮಾ (ತೃತೀಯ), ಹೀನಾಕೌಸರ್‌, ಕೆ.ಸಿ.ಮಂಜುಳಾ, ಜಿ.ಟಿ.ರಂಗಸ್ವಾಮಿ, ಪಿ.ಜಿ.ಜಗದೀಶ್‌ ಹಾಗೂ ಶಿವಾನಂದಾರಾಧ್ಯ (ಸಮಾಧಾನಕರ) ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT