ಬಿಂಕದಕಟ್ಟಿ ಮೃಗಾಲಯದ ಹೊಸ ಅತಿಥಿ ಆಸ್ಟ್ರಿಚ್‌..!

ಶುಕ್ರವಾರ, ಏಪ್ರಿಲ್ 26, 2019
21 °C
ಹೈದರಾಬಾದ್‌ನಿಂದ ತಂದಿರುವ 4 ಪಕ್ಷಿಗಳು; ಪ್ರವಾಸಿಗರ ಆಕರ್ಷಣೆ

ಬಿಂಕದಕಟ್ಟಿ ಮೃಗಾಲಯದ ಹೊಸ ಅತಿಥಿ ಆಸ್ಟ್ರಿಚ್‌..!

Published:
Updated:
Prajavani

ಗದಗ: ಇಲ್ಲಿನ ಬಿಂಕದಕಟ್ಟಿ ಮೃಗಾಲಯಕ್ಕೆ ಹೈದರಾಬಾದ್‌ನಿಂದ ವಾರದ ಹಿಂದೆ ನಾಲ್ಕು ಆಸ್ಟ್ರಿಚ್‌ ಪಕ್ಷಿಗಳನ್ನು ತರಲಾಗಿದೆ. ಭಾರಿ ಗಾತ್ರದಲ್ಲಿ ಬೆಳೆಯುವ, ಹಾರಲಾರದ ಈ ಪಕ್ಷಿಗಳೇ ಮೃಗಾಲಯದ ಸದ್ಯದ ಪ್ರಮುಖ ಆಕರ್ಷಣೆ.

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲ್ಬುರ್ಗಿ ಸೇರಿ 9 ಕಡೆ ಮೃಗಾಲಯಗಳಿವೆ. ಆದರೆ, ಮೈಸೂರು, ಬನ್ನೇರುಘಟ್ಟ ಮೃಗಾಲಯಗಳಲ್ಲಿ ಮಾತ್ರ ಆಸ್ಟ್ರಿಚ್‌ ಪಕ್ಷಿಗಳಿವೆ. ಆದರೆ, ಅಲ್ಲಿ ಈ ತಳಿಯ ಹೆಚ್ಚುವರಿ ಪಕ್ಷಿಗಳು ಇಲ್ಲದ ಕಾರಣ, ಹೈದರಾಬಾದ್‌ನ ಖಾಸಗಿ ಪಕ್ಷಿ ಸಾಕಣೆ ಕೇಂದ್ರವೊಂದರಿಂದ ತಲಾ ₹90 ಸಾವಿರ ವೆಚ್ಚದಲ್ಲಿ 2 ಗಂಡು, 2 ಹೆಣ್ಣು ಸೇರಿ ನಾಲ್ಕು ಆಸ್ಟ್ರಿಚ್‌ ಮರಿಗಳನ್ನು ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿದೆ.

‘ಈ ಆಸ್ಟ್ರಿಚ್‌ ಮರಿಗಳು ಕೇವಲ 3 ತಿಂಗಳ ಪ್ರಾಯದ್ದು. ಇವು 1 ವರ್ಷದೊಳಗೆ ಈಗಿರುವ ಗಾತ್ರದಿಂದ ಮೂರು ಪಟ್ಟು ಬೆಳೆಯುತ್ತವೆ. ಪ್ರೌಢಾವಸ್ಥೆ ತಲುಪಿದ ಆಸ್ಟ್ರಿಚ್‌ ಪಕ್ಷಿಯೊಂದು 2 ರಿಂದ 2.8 ಮೀಟರ್‌ ಎತ್ತರ ಇರುತ್ತದೆ. ಈ ಪಕ್ಷಿಗಳ ಜೀವಿತಾವಧಿ 40ರಿಂದ 45 ವರ್ಷ’ ಎಂದು ಮೃಗಾಲಯದ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ತಿಳಿಸಿದರು.

ಮೃಗಾಲಯದಲ್ಲಿ ಆಸ್ಟ್ರಿಚ್‌ಗಾಗಿಯೇ ಹೊಸ ಆವಾಸ ಸ್ಥಳ ನಿರ್ಮಿಸಲಾಗಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ನೆರಳಿನ ವ್ಯವಸ್ಥೆಗಾಗಿ ಮತ್ತು ವಿಶ್ರಾಂತಿಗಾಗಿ ನೀಲಗಿರಿ ಕಂಬ ಮತ್ತು ಒಣ ಹಲ್ಲು ಬಳಸಿ ಹಕ್ಕಿ ಮನೆಯನ್ನೂ ನಿರ್ಮಿಸಲಾಗಿದೆ. ಕ್ಯಾರೆಟ್‌, ಸೊಪ್ಪು, ತರಕಾರಿ, ಕಲ್ಲಂಗಡಿ ಹಣ್ಣು ಮತ್ತು ಕುಕ್ಕುಟ ಆಹಾರವನ್ನು ಆಸ್ಟ್ರಿಚ್‌ಗೆ ನೀಡಲಾಗುತ್ತದೆ.

ಸದ್ಯ ಮೃಗಾಲಯದಲ್ಲಿ ಹುಲಿ, ಕರಡಿ, ಜಿಂಕೆ, ನೀಲಗಾಯಿ, ಕಡವೆ, ನರಿ, ಮೊಸಳೆ, ಆವೆು, ಹೆಬ್ಬಾವು ಮತ್ತು ಚಿರತೆ ಸೇರಿ 38 ಜಾತಿಯ 367 ಪ್ರಾಣಿಗಳಿವೆ. ತಿಂಗಳ ಹಿಂದೆ ಮೈಸೂರು ಮೃಗಾಲಯದಿಂದ ಬಹಳ ದುಬಾರಿ ಪಕ್ಷಿ ಎಂದೇ ಹೆಸರಾಗಿರುವ ಸ್ಕಾರ್ಲೆಟ್‌ ಐಬಿಸ್‌ ಜೋಡಿಯನ್ನು ತರಲಾಗಿತ್ತು. ವರ್ಷದ ಹಿಂದೆ ಅಲ್ಲಿಂದಲೇ ‘ಅನಸೂಯಾ’ ಹಾಗೂ ‘ಲಕ್ಷ್ಮಣ್‌’ ಹೆಸರಿನ ಎರಡು ಹುಲಿಗಳನ್ನು ತರಲಾಗಿತ್ತು.ಈ ಅತಿಥಿಗಳು ಬಂದ ನಂತರ ಬಿಂಕದಕಟ್ಟಿ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ.

ನಡಿಗೆ ಪಥದ ಸುತ್ತ ಮರದ ಬೇಲಿ

40 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಮೃಗಾಲಯದ ಆವರಣದಲ್ಲಿ 2.5 ಕಿ.ಮೀ ಉದ್ದದ ನಡಿಗೆ ಪಥ ಅಭಿವೃದ್ಧಿಪಡಿಸಲಾಗಿದೆ.

ಈ ಮಾರ್ಗದಲ್ಲಿ ಇಂಟರ್‌ಲಾಕ್‌ ಹಾಕಲಾಗಿದ್ದು, ಪ್ರವಾಸಿಗರು ಆರಾಮವಾಗಿ ನಡೆದುಕೊಂಡು ಹೋಗಿ ಪ್ರಾಣಿ, ಪಕ್ಷಿಗಳನ್ನು ಸಮೀಪದಿಂದ ವೀಕ್ಷಿಸಬಹುದು. ಈ ನಡಿಗೆ ಪಥದ ಸುತ್ತ ಸಸಿಗಳನ್ನು ನೆಡಲಾಗಿದ್ದು, ಅವುಗಳ ರಕ್ಷಣೆಗೆ ನೀಲಗಿರಿ ಕಂಬಗಳನ್ನು ಬಳಸಿ, ಪರಿಸರ ಸ್ನೇಹಿ ಬೇಲಿ ನಿರ್ಮಿಸಲಾಗಿದೆ. ಮೃಗಾಲಯದ ಆವರಣವನ್ನು ಈಗಾಗಲೇ ಪ್ಲಾಸ್ಟಿಕ್‌ ರಕ್ಷಿತ ವಲಯ ಎಂದು ಘೋಷಿಸಲಾಗಿದೆ.

* ರಾಜ್ಯದಲ್ಲಿ ಆಸ್ಟ್ರಿಚ್‌ ಪಕ್ಷಿಗಳನ್ನು ಹೊಂದಿರುವ ಮೂರನೆಯ ಪ್ರಾಣಿ ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಬಿಂಕದಕಟ್ಟಿ ಮೃಗಾಲಯ ಪಾತ್ರವಾಗಿದೆ.

– ಮಹಾಂತೇಶ ಪೆಟ್ಲೂರ, ಮೃಗಾಲಯದ ಆರ್‌ಎಫ್‌ಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !