ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಮ್ಮ, ಅಕ್ಕಮ್ಮ ದೇವಿ ಜಾತ್ರೆ: ಹೋಳಿಗೆ ಪ್ರಸಾದಕ್ಕೆ ಹರಿದು ಬಂತು ಭಕ್ತ ಸಾಗರ

Last Updated 8 ಏಪ್ರಿಲ್ 2019, 9:45 IST
ಅಕ್ಷರ ಗಾತ್ರ

ಡಂಬಳ: ಮಾಯಮ್ಮದೇವಿ ಹಾಗೂ ಅಕ್ಕಮ್ಮ ದೇವಿ ಮಹೋತ್ಸದ ಅಂಗವಾಗಿ ಶನಿವಾರ ಹೋಳಿಗೆ ಜಾತ್ರೆ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮುದಾಯದ ಮಧ್ಯೆ ನೆರವೇರಿತು.

ಯುಗಾದಿ ಹಬ್ಬದ ನಿಮಿತ್ತ ಮಾಯಮ್ಮ, ಅಕ್ಕಮ್ಮ ಹಾಗೂ ಬೀರಲಿಂಗೇಶ್ವರರಿಗೆ ವಿಶೇಷ ಪೂಜೆ ಹೋಮ, ಹವನ ಮಾಡಲಾಯಿತು. ಅಕ್ಕಮ್ಮ ಮತ್ತು ಮಾಯಮ್ಮದೇವಿ ಈ ಭಾಗದ ಜನರ ಆರಾಧ್ಯ ದೇವತೆ.

ಉತ್ತರ ಕರ್ನಾಟಕದ ವಿಶಿಷ್ಟ ಜಾತ್ರೆಯಾದ ಈ ಹೋಳಿಗೆ ಜಾತ್ರೆಯ ಯಶಸ್ಸಿಗೆ ಜಾತ್ರಾ ಮಹೋತ್ಸವದ ಎಲ್ಲ ಪದಾಧಿಕಾರಿಗಳು ಶ್ರಮ ವಹಿಸಿ ದುಡಿಯುತ್ತಾರೆ.

3 ಕ್ವಿಂಟಲ್ ಬೇಳೆ, 4 ಕ್ವಿಂಟಲ್ ಬೆಲ್ಲ 2 ಕ್ವಿಂಟಲ್‌ ಮೈದಾ ಹಿಟ್ಟು ಉಪಯೋಗಿಸಿ ಮಹಿಳೆಯರು ಬಿಸಿ ಬಿಸಿ ಹೋಳಿಗೆ ತಯಾರಿಸುತ್ತಾರೆ.‌

‘ನಾಲ್ಕು ವರ್ಷದ ಹಿಂದೆ ಹೊಸ ಗೋಪುರ ಸ್ಥಾಪನೆಯಾದ ನಂತರ ಈ ವರ್ಷ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭಕ್ತರು ನೀಡಿದ ದೇಣಿಗೆ, ಆಹಾರ ಸಾಮಗ್ರಿಗಳಿಂದ ತಯಾರಿಸಲಾಗಿರುತ್ತದೆ’ ಎಂದು ಅಕ್ಕಮ್ಮ, ಮಾಯಮ್ಮ ಹಾಗೂ ಬೀರಲಿಂಗೇಶ್ವರ ಟ್ರಸ್ಟ್ ಸೇವಾ ಸಮಿತಿ ಅಧ್ಯಕ್ಷ ಬೀರಪ್ಪ ಎಸ್. ಬಂಡಿ ಹಾಗೂ ಉಪಾಧ್ಯಕ್ಷ ಸೋಮಶೇಖರ ಗುರುವಿನ ಪ್ರಜಾವಾಣಿಗೆ ತಿಳಿಸಿದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿಯ ಮಾಯಕ್ಕ ದೇವಿಯ ಪ್ರತಿರೂಪವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು ವಿವಿಧ ಬಣ್ಣಗಳಿಂದ ಅಲಂಕೃತವಾದ ಗೋಪುರ, ದೇವಿಯ ಮೂರ್ತಿ ಭಕ್ತರ ಮನವನ್ನು ಸೆಳೆಯುತ್ತದೆ.

ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿಂದ ನೂರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಲ್ಲವ್ವ ಜಂಗವಾಡ, ಮುತ್ತಣ್ಣ ಹಿರೇಮಠ ತಿಳಿಸಿದರು.

ಹೋಳಿಗೆ ಪ್ರಸಾದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಸಿದ್ಧಪಡಿಸಿರುವ ಹೋಳಿಗೆಯನ್ನು ಒಂದು ಕಡೆ ಸಂಗ್ರಹ ಮಾಡಿ ಇಟ್ಟಿರುವುದು
ಹೋಳಿಗೆ ಪ್ರಸಾದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಸಿದ್ಧಪಡಿಸಿರುವ ಹೋಳಿಗೆಯನ್ನು ಒಂದು ಕಡೆ ಸಂಗ್ರಹ ಮಾಡಿ ಇಟ್ಟಿರುವುದು

ನೂರಾರು ಮಹಿಳೆಯರು ಗುಂಪು ಗುಂಪಾಗಿ ಕುಳಿತುಕೊಂಡು ಮೈದಾ ಹಿಟ್ಟು, ಕುದಿಸಿದ ಕಡಲೆ ಬೇಳೆ, ಬೆಲ್ಲವನ್ನು ಹದಮಾಡಿಕೊಳ್ಳುವುದು, ಒಲೆಯ ಮೇಲೆ ಬಿಸಿ ಬಿಸಿಯಾದ ಹೋಳಿಗೆ ಸಿದ್ಧಪಡಿಸುವುದನ್ನು ನೋಡಲು ಎರಡು ಕಣ್ಣು ಸಾಲದು.

ಬಿಸಿ ಬಿಸಿ ಹೋಳಿಗೆ, ಬದನೆಕಾಯಿ ಪಲ್ಲೆ, ಉಪ್ಪಿನಕಾಯಿ, ತುಪ್ಪ, ಹಪ್ಪಳ, ಸೋನಾ ಮಸೂರಿ ಅಕ್ಕಿಯಿಂದ ತಯಾರಿಸಿದ ಅನ್ನ, ವಿವಿಧ ತರಕಾರಿಗಳಿಂದ ಸಿದ್ಧಪಡಿಸಿದ ಸಾಂಬಾರ ಪ್ರಸಾದವನ್ನು ಭಕ್ತರಿಗೆ ಉಣಬಡಿಸಲಾಗುತ್ತದೆ.

ಮಧ್ಯಾಹ್ನ 1 ಗಂಟೆಯಿಂದ ಪ್ರಾರಂಭವಾದ ಪ್ರಸಾದ ವ್ಯವಸ್ಥೆ ರಾತ್ರಿ 10 ಗಂಟೆಯಾದರೂ ಮುಂದುವರಿದಿರುತ್ತದೆ.

ಜಾತ್ರಾ ಕಮಿಟಿಯ ಹಿರಿಯರು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಜಾತ್ರೆಯ ಯಶಸ್ವಿಗೆ ಹಗಲಿರುಳು ಶ್ರಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT