ಕುಮಾರಪಟ್ಟಣ ವಾರದ ಸಂತೆ: ಹೆದ್ದಾರಿಯ ಚಿಂತೆ

ಸೋಮವಾರ, ಏಪ್ರಿಲ್ 22, 2019
32 °C
ಮೂಲಸೌಲಭ್ಯಗಳ ಕೊರತೆಯಿಂದ ಜನರಿಗೆ ತೊಂದರೆ

ಕುಮಾರಪಟ್ಟಣ ವಾರದ ಸಂತೆ: ಹೆದ್ದಾರಿಯ ಚಿಂತೆ

Published:
Updated:
Prajavani

ಕೊಡಿಯಾಲ (ಕುಮಾರಪಟ್ಟಣ): ವಾರದಲ್ಲೊಮ್ಮೆ ಪ್ರತಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ (ಎನ್ಎಚ್-4) ಪಕ್ಕದಲ್ಲಿಯೇ ಜರುಗುವ ಸಂತೆಗೆ ಬರುವ ಜನರಿಗೆ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಹಾಗೂ ಬೃಹತ್ ವಾಹನ ಸಂಚಾರದಿಂದ ಸಾರ್ವಜನಿಕರಲ್ಲಿ ಚಿಂತೆ ಆತಂಕ ಶುರುವಾಗಿದೆ.

ಪ್ರತಿನಿತ್ಯ ಹೆದ್ದಾರಿಯಲ್ಲಿ ಸಾವಿರಾರು ಬೃಹತ್ ವಾಹನಗಳು ಸಂಚರಿಸುತ್ತವೆ. ಹೀಗಾಗಿ, ಜನರಲ್ಲಿ ರಸ್ತೆ ದಾಟಿ ಬರಲು ಭಯ ಇದ್ದೇ ಇರುತ್ತದೆ. ಇದಲ್ಲದೇ, ಮನ ಬಂದಂತೆ ನಿಲ್ಲಿಸುವ ದ್ವಿಚಕ್ರ ವಾಹನಗಳ ಮಧ್ಯೆ ದಾರಿ ಮಾಡಿಕೊಂಡು ಕೈಚೀಲ ಹಿಡಿದು ಸಂತೆ ಮಾಡಿ ಮನೆ ಸೇರುವ ಹೊತ್ತಿಗೆ ಜನ ಹೈರಾಣ ಆಗಿಬಿಡುತ್ತಾರೆ.

‘ಸಂತೆಯಲ್ಲಿ ದೊರೆಯುವ ತಾಜಾ ತರಕಾರಿ ಖರೀದಿಸಲು ಕುಮಾರಪಟ್ಟಣ ಸೇರಿ ನಲವಾಗಲ, ಕವಲೆತ್ತು, ಹಲಸಬಾಳು, ರಾಜನಹಳ್ಳಿ ಗ್ರಾಮಗಳಿಂದ ಜನ ಬರುತ್ತಾರೆ. ಆದರೆ, ಇಕ್ಕಟ್ಟಾದ ಜಾಗದಲ್ಲಿ ಸಂತೆ ನಡೆಯುವುದರಿಂದ ಜನಸಂದಣಿಹೆಚ್ಚಿರುತ್ತದೆ’ ಎಂದು ಸಂತೆಗೆ ಬಂದ ಶಿಕ್ಷಕ ಅಶೋಕ ಕಿಳ್ಳೆಕ್ಯಾತರ ಹೇಳಿದರು.

‘ನಾವು ಕುಳಿತುಕೊಳ್ಳುವ ಜಾಗಕ್ಕೆ ಗ್ರಾಮ ಪಂಚಾಯ್ತಿಗೆ ಹಣ ಕಟ್ಟುತ್ತೇವೆ. ಕೂರಲು ಸರಿಯಾದ ಆಸನ, ನೆರಳು, ಬೆಳಕು ಇಲ್ಲ. ಮೂಲಸೌಲಭ್ಯಗಳ ಕೊರತೆ ಇದ್ದರೂ ಜಕಾತಿ ಕಡ್ಡಾಯವಾಗಿ ಸಂಗ್ರಹಿಸುತ್ತಾರೆ. ತರಕಾರಿಯನ್ನು ಮಣ್ಣು, ದೂಳಿನಲ್ಲಿ ಇಟ್ಟು ಮಾರಬೇಕಿದೆ. ಇನ್ನು ಮಳೆಗಾಲದಲ್ಲಂತೂ ಮಾರುಕಟ್ಟೆ ನೀರು ನುಗ್ಗಿ ಕೆಸರು ಗದ್ದೆ ಆಗುತ್ತದೆ’ ಎಂದು ವ್ಯಾಪಾರಿಗಳು ದೂರಿದರು.

ಸುಸಜ್ಜಿತ ಸಂತೆ ಮೈದಾನ ನಿರ್ಮಿಸಲು (ಹಳೆ ಪಿ.ಬಿ ರಸ್ತೆ ಬಳಿ) ಹೊಸ ನಲವಾಗಲ ಪ್ಲಾಟ್‌ನಲ್ಲಿ ಜಾಗ ಗುರತಿಸಲಾಗಿತ್ತು. ರಾಣೆಬೆನ್ನೂರು ತಾಲ್ಲೂಕಿನ ಕೃಷಿ ಮಾರುಕಟ್ಟೆಯಿಂದ ₹ 1 ಕೋಟಿ ಅನುದಾನ ಮಂಜೂರಾಗಿತ್ತು. ಜಾಗ ನೀಡಲು ನಲವಾಗಲ ಗ್ರಾಮಸ್ಥರು ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಅನುದಾನ ವಾಪಾಸ್ ಆಗಿದೆ. ಮತ್ತೆ ಹೊಸ ಜಾಗಕ್ಕಾಗಿ ಹುಡುಕಾಟ ನಡೆಸಿದ್ದೇವೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪುಷ್ಪಾವತಿ ಕುಂಬಾರ ಹಾಗೂ ಉಪಾಧ್ಯಕ್ಷ ದಿನೇಶಕುಮಾರ್ ಬಿ.ಎಚ್. ಮಾಹಿತಿ ನೀಡಿದರು.

* ತುಂಗಭದ್ರಾ ನದಿ ಸುತ್ತುವರಿದ ಕಾರಣ ಸರ್ಕಾರಿ ಭೂಮಿ ಇಲ್ಲದಂತಾಗಿದೆ. ಆದರೂ ಚುನಾವಣೆ ಮುಗಿದ ಬಳಿಕ ಸಭೆಯಲ್ಲಿ ಚರ್ಚಿಸಿ ಸೂಕ್ತ ಜಾಗ ಹುಡುಕಿ ಸಂತೆ ಮೈದಾನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ

ಪೂರ್ಣಿಮಾ ವಿ., ಪಿಡಿಒ– ಕೊಡಿಯಾಲ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !