ಮಾರುತೇಶ್ವರ ಜಾತ್ರೆ: 26 ಜೋಡಿ ದಾಂಪತ್ಯ ಜೀವನಕ್ಕೆ

ಮಂಗಳವಾರ, ಏಪ್ರಿಲ್ 23, 2019
27 °C

ಮಾರುತೇಶ್ವರ ಜಾತ್ರೆ: 26 ಜೋಡಿ ದಾಂಪತ್ಯ ಜೀವನಕ್ಕೆ

Published:
Updated:
Prajavani

ಮುನಿರಾಬಾದ್: ಸಮೀಪದ ಬೇವಿನಹಳ್ಳಿಯ ಶ್ರೀಮಾರುತೇಶ್ವರ ವಾರ್ಷಿಕ ಜಾತ್ರೆಯ ಅಂಗವಾಗಿ ಭಾನುವಾರ ದೇವಸ್ಥಾನ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 26 ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಮುಂಡರಗಿ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಸತಿ-ಪತಿಗಳು ಅನ್ಯೋನ್ಯವಾಗಿ ಬದುಕಿದರೆ ಅದೇ ಶಿವನಿಗೆ ತೋರುವ ಭಕ್ತಿ. ಸಾಮರಸ್ಯ ಇದ್ದರೆ ಮಾತ್ರ ಜೀವನದಲ್ಲಿ ಸುಖ ಎಂದು ನುಡಿದರು. ‌

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿ, ಮದುವೆ ಸಂಸ್ಕಾರದಿಂದ ನಿಮಗೆ ಈಗ ಪ್ರಭುದ್ಧತೆ ಬಂದಿದೆ. ನೀವು ಸಾಮಾನ್ಯರಲ್ಲ. ಮಹಿಳೆಗೆ ‘ತಾಳಿ’ ಬಂಧನ, ಪುರುಷರಿಗೆ ‘ಬಾಸಿಂಗ’ ಬಂಧನ. ಮದುವೆಯಾದ ಹೆಣ್ಣು ಮತ್ತು ಗಂಡಿಗೆ ಕೆಲವು ಕಟ್ಟುಪಾಡುಗಳು ಇರುತ್ತವೆ. ಸಮಾಜದಲ್ಲಿ ಅವುಗಳನ್ನು ಮೀರಿ ನಡೆಯಲು ಬರುವುದಿಲ್ಲ. ನಿಮ್ಮ ಕುಟುಂಬ, ನಿಮ್ಮಸಮಾಜದ ರೀತಿ ರಿವಾಜುಗಳಿಗೆ ಬದ್ಧರಾಗಿರಬೇಕು ಎಂದು ನವ ದಂಪತಿಗಳಿಗೆ ಕಿವಿಮಾತು ಹೇಳಿದರು.

ಲಿಂಗಯ್ಯಸ್ವಾಮಿಹಿರೇಮಠ ಶಹಾಪುರ, ಶರಣಯ್ಯಸ್ವಾಮಿ ಹಿರೇಮಠ, ಕಾಡಯ್ಯಸ್ವಾಮಿ ಹಿರೇಮಠ ಇತರರು ತಾಳಿ ಪೂಜೆ, ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು. ವಿವಿಧ ಸಮಾಜದ ಗಣ್ಯರು ಪಾಲ್ಗೊಂಡಿದ್ದರು.

ಮೃಷ್ಟಾನ್ನ ಭೋಜನ: ಸರ್ಕಾರಿ ಶಾಲಾ ಆವರಣದಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರೊಟ್ಟಿ, ಪಲ್ಯ, ಬೂಂದಿ ಲಾಡು, ಜೀಲೇಬಿ, ಅನ್ನ ಸಾಂಬಾರ, ಮಜ್ಜಿಗೆ ಯಾವುದೂ ಕೊರತೆಯಾಗದಂತೆ ಯುವಕರು, ಯುವತಿಯರು, ಸಂಘ ಸಂಸ್ಥೆಗಳು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಉತ್ಸಾಹದಿಂದ ಸೇವೆಯಲ್ಲಿ ನಿರತರಾಗಿದ್ದು ಕಂಡು ಬಂತು.

ಮಹಾರಥೋತ್ಸವ: ಭಾನುವಾರ ಸಂಜೆ 6ಕ್ಕೆ ನಡೆದ ಮಹಾರಥೋತ್ಸವಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆ ಕನಕಗುರುಪೀಠದ ಹಾಲವರ್ತಿ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಕಿರ್ಲೋಸ್ಕರ್ ಕಾರ್ಖಾನೆ ಹಿರಿಯ ಉಪಾಧ್ಯಕ್ಷ ಪಿ.ನಾರಾಯಣ ದಂಪತಿ ಉಪಸ್ಥಿತರಿದ್ದರು. ಸಾವಿರಾರು ಜನ ಉತ್ತತ್ತಿ-ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಡೊಳ್ಳು, ನಂದಿಕೋಲು, ಜಾಂಜ್‍ಮೇಳದ ಸದ್ದು, ಭಕ್ತರ ಜೈಕಾರ ಮೇಳೈಯಿಸಿದ್ದವು.

ರಕ್ತದಾನ ಶಿಬಿರ: ಕೊಪ್ಪಳ ರೆಡ್‍ಕ್ರಾಸ್ ಸೂಸೈಟಿಯ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು. ಸುಮಾರು 18ಜನ ದಾನಿಗಳು ರಕ್ತದಾನ ಮಾಡಿದರು.

ಡಾ.ಶ್ವೇತಾ ಎಂ.ರೆಡ್ಡಿ, ಡಾ.ಶ್ವೇತಾ, ವೆಂಕಟೇಶ್, ರಾಘವೇಂದ್ರ, ಮಂಜುನಾಥ, ಪರಶುರಾಮ ಸಾಥ್‍ ನೀಡಿದರು. ಸ್ಥಳದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !