ಕಾರ್ಯಕರ್ತ ಎಂಬ ಆಪ್ತಬಂಧು

ಗುರುವಾರ , ಏಪ್ರಿಲ್ 25, 2019
21 °C

ಕಾರ್ಯಕರ್ತ ಎಂಬ ಆಪ್ತಬಂಧು

Published:
Updated:

ಇದು, ಚುನಾವಣೆ ಕಾಲ. ನೆತ್ತಿ ಸುಡುವ ಉರಿ ಬಿಸಿಲು ಮೀರಿಸುವ ಪ್ರಚಾರದ ಕಾವು ಸರ್ವರ ತನು, ಮನಗಳಿಗೆ ತಟ್ಟುವ ಕಾಲ. ಚುನಾವಣೆ ಹೊತ್ತಿನಲ್ಲಿ ‘ಧನ’ ಕೆಲವರಿಗೆ ಮಾತ್ರ ತಟ್ಟುವುದರಿಂದ ಇಲ್ಲಿ ಅದನ್ನು ಕೈಬಿಡಲಾಗಿದೆ! ಚುನಾವಣೆ ಕಾವು ಬಿಸಿಲನ್ನು ಮೀರಿ ಚುರುಕುಗೊಳಿಸುವವರು ಕಾರ್ಯಕರ್ತರು. ಚುನಾವಣೆ ಹಬ್ಬದ ಸಂಭ್ರಮ ಹೆಚ್ಚಿಸುವವರೇ ಕಾರ್ಯಕರ್ತ ಎಂಬ ಆಪ್ತಬಂಧು, ಈತ ಚುನಾವಣೆ ಎಂಬ ಅಬ್ಬರದ ಕೇಂದ್ರ ಬಿಂದುವೂ ಹೌದು!

ಕಾರ್ಯಕರ್ತರು ಎಂದರೆ ಯಾರು? ಇದು, ಮಂಡ್ಯದಲ್ಲಿ ಗೆಲ್ಲುವುದು ನಿಖಿಲ್ಲಾ, ಸುಮಲತಾನಾ? ಮೈಸೂರಿನಲ್ಲಿ ಮೈತ್ರಿ ಖಾತ್ರಿಯಾಗಿ ಗೆಲುವು ಒದಗಿಸುತ್ತದಾ ಎಂಬುದಕ್ಕಿಂತಲೂ ಕ್ಲಿಷ್ಟ ಪ್ರಶ‍್ನೆ. ಏಕೆಂದರೆ ಕಾರ್ಯಕರ್ತರು ಎಂಬ ಚಿತ್ರಕ್ಕೆ ಸ್ಪಷ್ಟ ಮುಖ ಚಹರೆ ಇಲ್ಲ. ಅವರವರ ಭಾವಕ್ಕೆ ಊಹಿಸಿ ಕೊಳ್ಳಬಹುದಾದ ಚಹರೆ ಇದು. ಇದು ವ್ಯಕ್ತಿಯಲ್ಲ; ಇದೊಂದು ಸಮೂಹ.

ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿರುವ ಸಮಾವೇಶ, ಸಭೆಗಳ ಚಿತ್ರಗಳನ್ನು ಸುಮ್ಮನೆ ಗಮನಿಸಿ. ಅಲ್ಲಿ ದಾಖಲಾಗುವುದು ನಾಯಕರ ಚಿತ್ರಗಳು ಮಾತ್ರವೇ. ಕಾರ್ಯಕರ್ತರದ್ದು ಸಮೂಹದ ಚಿತ್ರವೇ. ಯಾರ ಚಿತ್ರ, ಯಾರಿಗೂ ನೆನಪಿರುವುದಿಲ್ಲ. ಆದರೆ, ಇವರಿಲ್ಲದೆ ಚಿತ್ರ, ಸಮಾವೇಶ ಅಪೂರ್ಣ ಎನ್ನುವಷ್ಟು ಕಾರ್ಯಕರ್ತನಿಗೆ ಮಹತ್ವವಿದೆ.

ಕಾರ್ಯಕರ್ತರಲ್ಲಿಯೂ ವಿಧಗಳಿವೆ. ನಿಷ್ಠಾವಂತ ಕಾರ್ಯಕರ್ತರು, ಚುನಾವಣೆಯ ಸಕ್ರಿಯ ಕಾರ್ಯಕರ್ತರು, ಪ್ರಚಾರ ಕಾರ್ಯ
ಕರ್ತರು, ನಿಷ್ಠಾವಂತರಲ್ಲದ ಕಾರ್ಯಕರ್ತರು, ವ್ಯಕ್ತಿ ನಿಷ್ಠೆಯ ಕಾರ್ಯಕರ್ತರು, ಪಕ್ಷ ನಿಷ್ಠೆಯ ಕಾರ್ಯಕರ್ತರು, ನಾಯಕ ನಿಷ್ಠೆಯ ಕಾರ್ಯಕರ್ತರು, ಅಧಿಕಾರದ ಜತೆಗೆ ಆಕರ್ಷಿತರಾಗುತ್ತಲೇ ರಾತ್ರೊರಾತ್ರಿ ನಿಷ್ಠೆಯ ಮಗ್ಗುಲು ಬದಲಿಸುವ ಕಾರ್ಯಕರ್ತರು.

ವಿಧಗಳಿವೆ, ಮೊದಲೇ ಹೇಳಿದಂತೆ ಚಹರೆ ಇಲ್ಲ! ಬಹುಶಃ ಅದಕ್ಕೆ ಇರಬೇಕು. ಯಾವುದೇ ಟಿ.ವಿ. ಚಾನಲ್‌ಗಳನ್ನೂ ನೋಡಿ ಕೇವಲ ನಾಯಕರ ಚಹರೆಗಳೇ ಕಾಣುತ್ತವೆ. ಕಾರ್ಯಕರ್ತರು ಸಮೂಹದಲ್ಲಿ ಇರುತ್ತಾರೆ. ಅಲ್ಲೇ ಕಳೆದುಹೋಗುತ್ತಾರೆ. ಚುನಾವಣೆಯ ಹೊತ್ತಿನಲ್ಲಿ ಮತದಾರಗಿಂತಲೂ ಹೆಚ್ಚು ಹೆಚ್ಚು ಗಮನಸೆಳೆಯುವವರು, ಚುನಾವಣೆಯ ಹಬ್ಬವನ್ನು ಸಂಭ್ರಮಿಸುವ ಕಾರ್ಯಕರ್ತರು.

ಯಾವುದೇ ಪಕ್ಷದ, ನಾಯಕರ ರೋಡ್‍ ಷೋ ಅಥವಾ ಸಮಾವೇಶಗಳನ್ನು ಗಮನಿಸಿ ಕಾರ್ಯಕರ್ತರ ಗುಂಪು ಇರುತ್ತದೆ. ಇವು, ಆ ಪಕ್ಷ ಅಥವಾ ಅಭ್ಯರ್ಥಿಯ ಖಾತರಿ ವೋಟುಗಳು ಎಂದು ಭಾವಿಸುವಂತಿಲ್ಲ. ಇಂಥ ಸಮಾವೇಶ,. ರೋಡ್‍ ಷೋಗಳು ಇತ್ತೀಚಿನ ವರ್ಷಗಳಲ್ಲಿ ತಾತ್ಕಾಲಿಕವಾಗಿ ಕೆಲವರಿಗೆ ಉದ್ಯೋಗದ ಖಾತರಿ ಒದಗಿಸುವ ಹಬ್ಬಗಳೇ ಆಗಿವೆ. ಹೆಚ್ಚಿನವರು ಪಾವತಿ ಕಾರ್ಯಕರ್ತರು. ಒಂದು ಹೊತ್ತಿನ, ದಿನದ ಹೊಟ್ಟೆ ತುಂಬಿಸಲಿದೆ ಎಂಬುದಕ್ಕೆ ಇಂಥ ಕಾಯ‍ಕರ್ತ ಬಣಕ್ಕೆ ಚುನಾವಣೆ ಎಂದರೆ ಪ್ರೀತಿ. ಪಕ್ಷದ ಬಾವುಟ, ಪ್ಲಕಾರ್ಡ್ ಹಿಡಿದು, ತಾವೇ ಚುನಾವಣೆಗೆ ನಿಂತಂತ ಯುವೋತ್ಸಾಹದ ಬುಗ್ಗೆ ಇವರು.

ದಿನದ ಲೆಕ್ಕ ಮಾತಾಡಿದರೆ ಮುಗಿಯಿತು. ಏಜೆಂಟರು ಮಾಡುವ ಬಸ್ಸೋ, ವ್ಯಾನೋ, ಆಟೊ ಹತ್ತಿ ಹೊರಡುತ್ತಾರೆ. ದಿನವೀಡಿ ಪ್ರಚಾರದಲ್ಲಿ, ದಿನದಂತ್ಯಕ್ಕೆ ಇನ್ನಾವುದೊ ಕಾರಣಕ್ಕೋ ‘ಟೈಟ್‌’ ಆಗಿಬಿಡುತ್ತಾರೆ. ಅಸಲಿಗೆ ಇವರಿಗೆ ಕ‍್ಯಾಂಡಿಡೇಟು ಯಾರು ಎಂಬುದು ನಗಣ್ಯ. ಅಗತ್ಯವೂ ಇಲ್ಲ. ಇವರನ್ನು ದಿನದ ಹೊತ್ತಿಗೆ ಕಾದಿರಿಸುವ ಏಜೆಂಟರಷ್ಟೇ ಇವರಿಗೆ ಮುಖ್ಯ.

ಪದೇ ಪದೇ ಕೇಳಿಬರುವ ವರ್ಗ ಎಂದರೆ ನಿಷ್ಠಾವಂಥ ಕಾರ್ಯಕರ್ತರದು.. ಪಕ್ಷ, ನಾಯಕ ನಿಷ್ಠೆಯ ವರ್ಗವಿದು. ಇವರು ಭಾಷಣಕ್ಕೆ ಮರುಳಾಗುವುದಿಲ್ಲ. ಇವರಿಗೆ ತಮ್ಮದೇ ‘ಮನ್‍ ಕೀ ಬಾತ್’ ಇರುತ್ತದೆ. ಅದಕ್ಕಷ್ಟೆ ನಿಷ್ಠರಾಗಿರುತ್ತಾರೆ.

ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವುದೇ ಈ ಬಣ. ಈ ಕಾರ್ಯಕರ್ತರಲ್ಲಿ ಸ್ಪಷ್ಟತೆ ಇರುತ್ತದೆ. `ಅವರೇ ಪ್ರಧಾನಿ ಆಗಬೇಕು’ ಎಂದೋ, ಇವರು ‘ಸಾಲಮನ್ನಾ ಮಾಡಿದರು’ ಎಂದೋ ಅಥವಾ ‘ನಮ್ಮ ತಾತ, ಅಪ್ಪ ಆ ಚಿಹ್ನೆಗೆ ಹಾಕುತ್ತಿದ್ದರು. ನಾನು ಅಷ್ಟೇ’ ಎಂದೋ. ಒಟ್ಟಿನಲ್ಲಿ ಒಂದು ಸಕಾರಣ. ಮತದಾರರಲ್ಲೂ ಅದನ್ನೇ ಬಿಂಬಿಸುತ್ತಾ, ಸಮರ್ಥನೆ ನೀಡುತ್ತಾ ಆ ನಿಲುವನ್ನೇ ಗಟ್ಟಿಗೊಳಿಸಲೆತ್ನಿಸುತ್ತಾರೆ. ಇವರು ಕಾಸಿಗಾಗಿ ಕಾರ್ಯಕರ್ತರಲ್ಲ. ತಮ್ಮ ಶಕ್ತಿ, ವಾಕ್ಪಟುತ್ವ ಬಳಸಿ ಇನ್ನಷ್ಟು ಮತಗಳನ್ನು ರೂಪಿಸಬಲ್ಲ ನಿಷ್ಠಾವಂತರು.

ಪ್ರಜಾಪ್ರಭುತ್ವದ ಹಬ್ಬ ನಿಜಕ್ಕೂ ರಂಗು ಪಡೆಯುವುದೇ ಇಂಥ ಬಣದಿಂದ. ಇವರ ನಿಷ್ಠೆ ಉಳಿಸಿಕೊಳ್ಳುವ ಹೊಣೆ ನಾಯಕರದು. ಇತ್ತೀಚಿಗೆ ನಾಯಕರೇ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಮಗ್ಗುಲು ಬದಲಿಸುತ್ತಾರೆ. ಆಗ ಗೊಂದಲಕ್ಕೆ ಒಳಗಾಗುವುದು ಈ ಬಣವೆ. ನಾಯಕರ ಪಕ್ಷಪಲ್ಲಟ ಇವರಿಗೆ ಅನಿರೀಕ್ಷಿತ. ಸಿಟ್ಟೋ, ನೋವೋ ಮತದಾನದ ದಿನ ಹೊರ ಹಾಕುತ್ತಾರೆ. ಇದೇ ಅನಿರೀಕ್ಷಿತ ಫಲಿತಾಂಶ ತರುತ್ತದೆ.

ಫಲಿತಾಂಶದ ದಿನವೂ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗುತ್ತದೆ, ಮತ್ತದೆ ಬಾವುಟ, ಪ್ಲಕಾರ್ಡು, ಘೋಷಣೆ, ಜಿಂದಾಬಾದ್‍. ತದನಂತರ ತೆರೆಮರೆಗೆ ಸರಿದುಬಿಡುತ್ತಾರೆ. ಕಾಲ ಎಲ್ಲವನ್ನು ಮರೆಸುತ್ತದೆ. ಕಾರ್ಯಕರ್ತ ಮರೆಯಲ್ಲಿ ನಿಂತು ಸರಿದುಹೋಗುವ ಕಾಲವನ್ನೇ ಗಮನಿಸುತ್ತಾ ಮುಂದಿನ ಚುನಾವಣೆಗೆ ಕಾಯುತ್ತಿರುತ್ತಾನೆ. ಆಗವನಿಗೆ ಮತ್ತೆ ಡಿಮ್ಯಾಂಡು. ಏಕೆಂದರೆ, ಅವನು ಆ ಕ್ಷಣದ ಆಪ್ತಬಂಧು.

ಕಾರ್ಯಕರ್ತರ ಹೊಸ ವೇಷ!

ಸೋಷಿಯಲ್‍ ಮೀಡಿಯಾ ಕಾರ್ಯಕರ್ತರು

ಹೇಳಿ, ಕೇಳಿ ಇದು ಸಾಮಾಜಿಕ ಜಾಲತಾಣಗಳ ಪರ್ವ. ನಿರುದ್ಯೋಗ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ, ಎಲ್ಲರ ಕೈಗೂ ಕೆಲಸವಂತೂ ಸಿಕ್ಕಿದೆ. ಎಲ್ಲರ ಬಳಿ ಮೊಬೈಲ್‍ ಫೋನ್‌ ಎಂಬ ಅಸ್ತ್ರವಿದೆ. ಏಕೆಂದರೆ, ಸಾಮಾಜಿಕ ಜಾಲತಾಣಗಳ ಸಂಪರ್ಕದ ಮೂಲಕ ಹೊಸ ‘ಕಾರ್ಯಕರ್ತರ’ ಪಡೆಯೇ ಸಜ್ಜುಗೊಂಡಿದೆ.

ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರು ಎಲ್ಲವನ್ನು ತಿಳಿದ ಬೃಹಸ್ಪತಿಗಳು. ಯಾರು, ಯಾವಾಗ, ಏನು ಹೇಳಿದರೂ ಎಂಬುದರ ದಾಖಲೆಗಳನ್ನು ಸಂಗ್ರಹಿಸಿ, ಆಯಾ ಕಾಲಕ್ಕೆ ಹೊಂದುವಂತೆ ಮೀಮ್‍ ರೂಪಿಸಿ ಟ್ರೋಲ್‍ ಚಲಾವಣೆಗೆ ಬಿಡುವರು. ಕೆಲಸಗೇಡಿಗಳನ್ನು ಸಾಧಕರಾಗಿಸುವ, ಸಾಧಕರನ್ನು ಕೆಲಸಗೇಡಿಗಳಾಗಿ ಮಾಡುವ ಕೆಲಸ ಇವರಿಗೆ ಕರಗತ.

ಅಭಿಪ್ರಾಯ ರೂಪಿಸುವ ಕಾರ್ಯಕರ್ತರು

ನೀವು ಬಸ್ಸಿನಲ್ಲೋ, ರೈಲಿನಲ್ಲಿಯೋ ಪ್ರಯಾಣಿಸುತ್ತಿದ್ದೀರಿ. ಅಥವಾ ನಾಲ್ಕಾರು ಜನರು ಸೇರುವ ಕಡೆ ಇದ್ದೀರಿ. ಅಲ್ಲೊಂದು ನಾಲ್ಕೈದು ಜನರ ಗುಂಪಿರುತ್ತದೆ. ಏಕಾಏಕಿ ಚುನಾವಣೆ ವಿಷಯವನ್ನು ಚರ್ಚೆಗೆ ಎತ್ತಿಕೊಂಡು, ನಿರ್ದಿಷ್ಟ ವ್ಯಕ್ತಿ, ಪಕ್ಷದ ಪರ ಅಭಿಪ್ರಾಯ ರೂಪಿಸಲು ಶುರು ಮಾಡುತ್ತದೆ. ಚುನಾವಣೆ ಚರ್ಚೆ ಎಲ್ಲರಿಗೂ ಸೆಳೆತ. ಸಮೂಹವೂ ಚರ್ಚೆಗೆ ಹೂಂ ಗುಡುತ್ತದೆ. ವಿಷಯವನ್ನು ಚರ್ಚೆ ಮುನ್ನೆಲೆಗೆ ಬಿಡುವ ಗುಂಪು, ನಿರ್ದಿಷ್ಟ ವ್ಯಕ್ತಿ, ಪಕ್ಷದ ಪರ ಅಭಿಪ್ರಾಯ ಬಲಪಡಿಸುತ್ತಾ ಹೋಗುತ್ತದೆ. ಕೇಳುವವರಿಗೆ ಹೌದಲ್ಲ, ಸಾರ್ವಜನಿಕ ಅಭಿಪ್ರಾಯ ಹೀಗಿರುವಾಗ ನಾವು ‘ಅವರಿಗೇ’ ಮತ ಹಾಕೋಣ. ವೋಟು ವೇಸ್ಟ್‌ ಆಗುವುದು ಬೇಡ ಎಂದು ನಿರ್ಧರಿಸುವ ಮಟ್ಟಿಗೆ ಚರ್ಚೆ ಪ್ರಭಾವಿಯಾಗಿರುತ್ತದೆ. ಇದು, ಮೆಟ್ರೊ ನಗರಗಳಲ್ಲಿ, ತೀವ್ರ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಕಾಣಸಿಗುವ ಕಾರ್ಯಕರ್ತ ಪಡೆ. ಅಸಲಿಗೆ ಈ ಗುಂಪು ಆ ಕ್ಷೇತ್ರದ ಮತದಾರರು ಆಗಿರುವುದಿಲ್ಲ. ಮುಖ್ಯವಾಗಿ ಆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಯಾರು ಎಂಬುದು ಅವರಿಗೆ ಮುಖ್ಯವಲ್ಲ. ಪಕ್ಷದ ಪರ ಕೆಲಸ ಮಾಡುವ ಪಾವತಿ ಕಾರ್ಯಕರ್ತರಿವರು.

ಪ್ರಚಾರ ಕಾರ್ಯಕರ್ತರು

ಇನ್ನೊಂದು ವರ್ಗ ಪ್ರಚಾರ ಕಾರ್ಯಕರ್ತರು. ಇವರೂ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಆದರೆ, ಎಲ್ಲ ಪಕ್ಷಗಳಿಗೂ ಹತ್ತಿರ
ವಿರುತ್ತಾರೆ. ಪಕ್ಷ, ವ್ಯಕ್ತಿಯ ‘ಸಾಧನೆ’ಗಳ ಲೇಖನಗಳ ಅಡಕಗಳ ಸಂಗ್ರಹಗಳೇ ಇವರ ಬಳಿ ಇರುತ್ತವೆ. ನಿರ್ದಿಷ್ಟ ಪಕ್ಷ, ಅಭ್ಯರ್ಥಿ ಪರ ವೋಟು, ಅಭಿಪ್ರಾಯಗಳು ಧ್ರುವೀಕರಣ ಆಗುವಂತೆ ಕಿರು ಹೊತ್ತಿಗೆಗಳನ್ನು ರೂಪಿಸಿಕೊಡುತ್ತಾರೆ. ಪ್ರಚಾರ ಸಾಮಗ್ರಿಗಳನ್ನು ಆಕರ್ಷಕವಾಗಿ ಸಜ್ಜುಮಾಡಿಕೊಡುತ್ತಾರೆ.

ಇವರಿಗೆ ಪಕ್ಷ, ಚಿಹ್ನೆ, ಅಭ್ಯರ್ಥಿ ಎಲ್ಲವೂ ಗೌಣ. ಚುನಾವಣೆ ಹೊತ್ತಿನಲ್ಲಿ ತಮ್ಮದೇ ಪ್ರತಿಭೆ ಬಳಸಿಕೊಂಡು ‘ಧನಲಾಭ’ ಭವಿಷ್ಯವನ್ನು ನಿಜವಾಗಿಸಲು ಒತ್ತು ನೀಡುವ ಕಾರ್ಯಕರ್ತರಿವರು.

ಇಂಥ ನವಕಾಲದ ಕಾರ್ಯಕರ್ತರಿಗೂ ಚುನಾವಣೆ ಎಂದರೆ ಹಬ್ಬ, ಸಂಭ್ರಮ. ಏಕೆಂದರೆ, ಅದು ಆದಾಯದ ಮೂಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !