ಸೋಲಿಲ್ಲದ ಸರದಾರನನ್ನು ಸೋಲಿಸಿ: ಬಿ.ಎಲ್.ಸಂತೋಷ್

ಶನಿವಾರ, ಮೇ 25, 2019
27 °C

ಸೋಲಿಲ್ಲದ ಸರದಾರನನ್ನು ಸೋಲಿಸಿ: ಬಿ.ಎಲ್.ಸಂತೋಷ್

Published:
Updated:
Prajavani

ಯಾದಗಿರಿ: ಸೋಲಿಲ್ಲದ ಸರದಾರ ಎಂದು ಬೀಗುತ್ತಿರುವವರಿಗೆ ಸೋಲಿನ ರುಚಿ ತೋರಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಪರ ಪ್ರಚಾರ ಸಭೆ ಮತ್ತು ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಚ್.ಡಿ.ದೇವೇಗೌಡ, ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿರುವ ಸೋಲಿಲ್ಲದ ಸರದಾರರು. ದೇವೇಗೌಡ ಮತ್ತು ಮುನಿಯಪ್ಪ ಅವರಿಗೆ ಈಗಾಗಲೇ ಸೋಲಿನ ಭೀತಿ ಎದುರಾಗಿದೆ. ಖರ್ಗೆ ಅವರು ಸೋಲಿನ ಭೀತಿಯಿಂದ ಲಿಂಗಾಯತ, ಕೋಲಿ ಸಮುದಾಯದ ಸಮಾವೇಶಗಳನ್ನು ನಡೆಸಿದ್ದಾರೆ ಎಂದರು.

ಭಾರತವನ್ನು ಗೆಲ್ಲಿಸಬೇಕಾಗಿರುವುದರಿಂದ ಈ ಚುನಾವಣೆ ಮಹತ್ವದ್ದಾಗಿದೆ. ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಓಡಾಡುತ್ತಿದ್ದಾರೆ. ಆದರೆ, ಇಡೀ ದೇಶ ಮೋದಿ ಅವರು ಪ್ರಧಾನಿ ಆಗಬೇಕೆಂದು ಬಯಸುತ್ತಿದೆ ಎಂದು ಹೇಳಿದರು.

ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದವರು ಸೈನಿಕರಾಗುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಸೈನಿಕರಿಗಿಂತ ರಸ್ತೆ ಬದಿ ಪಾನಿಪುರಿ ಮಾರಾಟ ಮಾಡುವವರು ಹೆಚ್ಚು ಹಣ ಗಳಿಸುತ್ತಾರೆ. ಸೈನಿಕರಾಗುವುದು ದೇಶಭಕ್ತಿಯಿಂದ ಎಂದರು.

ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ. ಪುತ್ರನನ್ನು ಗೆಲ್ಲಿಸಿ ಎಂದು ಎಚ್‌.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುತ್ತಾರೆ. ಕಣ್ಣೀರು ಹಾಕು ಬದಲು ಸ್ಥಾನದಿಂದ ಕೆಳಗಿಳಿಯಿರಿ. ಸಿದ್ದರಾಯಮಯ್ಯ ಅವರು ಮುಖ್ಯಮಂತ್ರಿ ಆಗಲು ಕಾಯುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ವಿಷಯದಲ್ಲಿ ಜಾತಿ ಹುಡುಕಲಿಲ್ಲ. ಆದರೆ, ಕಾಂಗ್ರೆಸ್‌ನವರು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಜಾತಿ ಹುಡುಕಿದರು. ಇದು ಅವರ ಕೆಟ್ಟ ಮನಸ್ಥಿತಿ ತೋರಿಸುತ್ತದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್‌ಗೆ ಆಯ್ಕೆ ಆದ ನಂತರ ತಾವು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ತಮ್ಮ ಪುತ್ರನನ್ನು ನಿಲ್ಲಿಸಿ ಗೆಲ್ಲಿಸಿದರು. ಅವರಿಗೆ ತಮ್ಮ ಜಾತಿಯ ಬೇರೆ ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ಈ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಕೆಲಸ ಮಾಡುತ್ತಿಲ್ಲ. ಬದಲಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಪಡೆದರೆ ಸರ್ಕಾರ ಪತನವಾಗುತ್ತದೆ ಎಂದು ವೀರಪ್ಪ ಮೊಯಿಲಿ ಹೇಳಿದ್ದಾರೆ. ಹೀಗಾಗಿ ಮತದಾರರು ಒಂದು ಮತ ಹಾಕಿದರೆ ಎರಡು ಸರ್ಕಾರ ಬರುತ್ತದೆ. ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ, ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ, ಡಾ.ವೀರಬಸಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಲಲಿತಾ ಅನಪೂರ, ನಾಗರತ್ನ ಕುಪ್ಪಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !