ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು, 41 ಡಿಗ್ರಿ ತಲುಪಿದ ತಾಪಮಾನ: ತಂಪು ಪಾನೀಯಕ್ಕೆ ಮೊರೆ

ನೆರಳಿಗಾಗಿ ಜನರ ಪರದಾಟ
Last Updated 27 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕೊಪ್ಪಳ: ಬಿಸಿಲಿನ ಪ್ರಖರ ದಿನದಿಂದ ದಿನಕ್ಕೆ ಏರುತ್ತಿದ್ದು, ಶನಿವಾರ ಗರಿಷ್ಠ 41 ಡಿಗ್ರಿ ಉಷ್ಣಾಂಶ ದಾಖಲೆಯಾಗುವ ಮೂಲಕ ಜನ ಜೀವನವನ್ನು ತತ್ತರಗೊಳಿಸಿದೆ. ಮೇ ಅಂತ್ಯದವರೆಗೆ ತಾಪಮಾನವು 43ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಮನೆಯಲ್ಲಿದ್ದರೂ ಬಿಸಿಲಿನ ಧಗೆಗೆ ಬೆವರುವಂತಾಗಿದೆ. ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಧಗೆ ಸಂಜೆ 6ರ ನಂತರವೂ ಇರುತ್ತದೆ. ಗಾಳಿ ಬೀಸಿದರೆ ಮಾತ್ರ ಇಳಿಸಂಜೆ ತುಸು ತಂಪು ಎನಿಸುವ ವಾತಾವರಣ ಇರುತ್ತದೆ. ಆದರೆ ವಾರದಿಂದ ಗಾಳಿ ಕೂಡಾ ಬೀಸದೇ ಮತ್ತಷ್ಟು ಸಂಕಟಪಡುವಂತೆ ಮಾಡಿದೆ.

ಬಿಸಿಲಿನ ಪ್ರಖರತೆಗೆ ಜಲಮೂಲ ಗಳು ಬತ್ತಿ ಹೋಗಿವೆ. ಕೆರೆಯಲ್ಲಿರುವ ಅಲ್ಪ ನೀರೇ ಆಸರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮೇಯಲು ಬಿಟ್ಟ ದನಕರುಗಳಿಗೆ ಹಿಡಿ ಹುಲ್ಲು ದೊರೆಯುತ್ತಿಲ್ಲ. ಬಿಸಿಲಿಗೆ ಹೆದರಿ ಗಿಡಗಳ ಆಶ್ರಯದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.

ಕೊಪ್ಪಳ ಜಿಲ್ಲೆಯನ್ನು ವಿಭಜಿಸುವ ಹೆದ್ದಾರಿಯಂತೂ ಅಕ್ಷರಶಃ ಬೆಂಕಿಯ ಕುಲುಮೆಯಂತಾಗಿದೆ. ಸುಮಾರು 80 ಕಿ.ಮೀ ಹೆದ್ದಾರಿ ದುರಸ್ತಿಗಾಗಿ ಒಂದೇ ಒಂದು ಗಿಡ ಬಿಡದೇ ನೆಲಸಮ ಮಾಡಲಾಗಿದೆ. ವಾಹನದಲ್ಲಿ ತೆರಳುವ ಪ್ರಯಾಣಿಕರಂತೂ ಬಿಸಿ ಗಾಳಿಗೆ ತತ್ತರಿಸಿ ಹೋಗಿದ್ದಾರೆ.

ಎತ್ತ ನೋಡಿದರೂ ಹಸಿರುಇರುವ ಪರಿಸರ ಮಾಯವಾಗಿದೆ. ಗಿಡ–ಮರಗಳು ಇಲ್ಲದೆ ಬೋಳು ಪ್ರದೇಶವನ್ನು ನೋಡುತ್ತಾ ಹೋದರೆ ಮನಸ್ಸು ಮಮ್ಮಲ ಮರುಗುತ್ತಿದೆ. ಮಳೆಗಾಲದಲ್ಲಿ ನೆಪಕ್ಕೆ ಮಾತ್ರ ಆರಂಭವಾಗುವ 'ವೃಕ್ಷ ಲಕ್ಷ' ಆಂದೋಲನ ನಂತರ ಮರೆಯಾಗಿ, ಗಿಡ ಪರಿಸರದ ಮಹತ್ವವನ್ನು ಸಾರಿ ಹೇಳುವಂತೆ ಆಗಿದೆ. ಕಳೆದ ಎರಡು ತಿಂಗಳಿಂದ ಹನಿ ಮಳೆ ಕೂಡಾ ಭೂಮಿಗೆ ಬಿದ್ದಿಲ್ಲ. ಹುಲ್ಲುಕಡ್ಡಿ ಒಣಗಿ ನಿಂತಿವೆ.

ತಂಪು ಪಾನೀಯ ವ್ಯಾಪಾರ ಜೋರು: ಬಿಸಿಲಿನ ಝಳಕ್ಕೆ ಹೆದರಿದ ಜನರು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ತಂಪು ಪಾನೀಯಗಳ ಬೆಲೆ ಕೂಡಾ ಏರಿಕೆ ಕಂಡಿವೆ. ₹ 10ಕ್ಕೆ ಲಿಂಬೂ ಸೋಡಾ ಆರಂಭಗೊಂಡು₹ 100 ರ ತನಕ ಸ್ಟ್ರಾಬೇರಿ ಹಣ್ಣುಗಳ ಜ್ಯೂಸ್‌ಗೆ ಬೆಲೆ ಇದೆ. ಕಬ್ಬಿನ ಹಾಲು, ಮಜ್ಜಿಗೆ, ವಿವಿಧ ಹಣ್ಣಿನ ತರೇವಾರಿ ಜ್ಯೂಸ್‌ಗೆ ಬೇಡಿಕೆ ಇದೆ. ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ತಂಪು ಪಾನೀಯಗಳ ಅಂಗಡಿಗೆ ಜನ ಮುಗಿ ಬೀಳುತ್ತಿದ್ದಾರೆ.

ರಸ್ನಾ, ಗೋಲಿ ಸೋಡಾ, ಲಸ್ಸಿ, ಆರೇಂಜ್, ಮಸಾಲಾ ಸೋಡಾ, ಜೀರಾ ಜ್ಯೂಸ್‌ ಕೂಡಾ ಬೇಡಿಕೆ ಪಡೆದಿವೆ. ₹ 15ಕ್ಕೆ ಸಿಗುತ್ತಿದ್ದ ಎಳೆನೀರಿನ ಬೆಲೆ ₹ 30ಕ್ಕೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ವಿವಿಧ ಹಣ್ಣುಗಳು ಮಾರಾಟಕ್ಕೆ ಬಂದಿದ್ದು, ಕೊಳ್ಳುವ ಗ್ರಾಹಕರ ಸಂಖ್ಯೆ ಕೂಡಾ ಹೆಚ್ಚಿದೆ. ಬಿಸಿಲಿನ ಪ್ರಖರತೆಗೆ ಮಾವಿನಹಣ್ಣು ಹೆಚ್ಚಿನ ರುಚಿಯನ್ನು ಪಡೆದುಕೊಳ್ಳುತ್ತದೆ. ಆದರೆ, ಮಾವಿನ ಹಣ್ಣು ಮಾರಾಟ ನಿರೀಕ್ಷಿಸಿದ ಪ್ರಮಾಣದಲ್ಲಿ ಆಗುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

*ಜನರು ಬಿಸಿಲಿನ ಧಗೆಗೆ ಬಸವಳಿದಿದ್ದು, ತಂಪು ಪಾನೀಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಬೇಕರಿ ತಿನಿಸುಗಳನ್ನು ಜನ ಖರೀದಿಸಲು ಇಷ್ಟಪಡುತ್ತಿಲ್ಲ. ತಂಪಾದ ನೀರಿನ ಪ್ಯಾಕೆಟ್, ಮಜ್ಜಿಗೆ ಹೆಚ್ಚು ಮಾರಾಟವಾಗುತ್ತಿವೆ.
ಕಾರ್ತಿಕ, ಬೇಕರಿ ಮಾಲೀಕ

* ಬಿಸಿಲಿನ ಝಳಕ್ಕೆ ಪರದಾಡುವಂತೆ ಆಗಿದೆ. ತಣ್ಣನೆಯ ನೀರು ದೊರೆತರೆ ಖುಷಿಯಾಗುತ್ತದೆ. ಬಿಸಿಲಿನಿಂದ ಹೊರಗೆ ಸುತ್ತಾಡಲೂ ಭಯ ಪಡುವಂತಾಗಿದೆ.
ಅಲ್ತಾಫ್ ಹುಸೇನ್ ಪಟೇಲ್, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT