ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ

ಯಶಸ್ವಿಗೊಳಿಸಲು ಸಜ್ಜುಗೊಂಡಿರುವ ಬಾನಂಡ ಕುಟುಂಬಸ್ಥರು
Last Updated 1 ಮೇ 2019, 19:45 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅಮ್ಮಕೊಡವ ಜನಾಂಗದ ಬಾನಂಡ ಕಪ್ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಭರದಿಂದ ಸಾಗಿದೆ. ಬಾನಂಡ ಕುಟುಂಬದ ಮೂಲ ನೆಲೆಯಾದ ಮಾಯಮುಡಿಯಲ್ಲಿ ಮೇ 4ರಿಂದ ಟೂರ್ನಿ ಆರಂಭಗೊಳ್ಳಲಿದೆ.

ಅಮ್ಮಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಗೆ ಈ ಬಾರಿ ಬಾನಂಡ ಕುಟುಂಬ ಆತಿಥ್ಯ ವಹಿಸಿದೆ. ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 23 ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯನ್ನು ಅಮ್ಮಕೊಡವ ಜನಾಂಗದ ಉತ್ಸವವನ್ನಾಗಿ ಆಚರಿಸಲು ಟೂರ್ನಿ ಗೌರವ ಅಧ್ಯಕ್ಷ ಬಾನಂಡ ಪೃಥ್ಯು ಅವರ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನವನ್ನು ₹2 ಲಕ್ಷ ವೆಚ್ಚದಲ್ಲಿ ಸಜ್ಜುಗೊಳಿಸಲಾಗಿದೆ. ಮೈದಾನ ಮಣ್ಣು ತೆಗೆದು ವಿಶಾಲಗೊಳಿಸಿದ್ದಾರೆ. ಮೈದಾನ ಕಾಂಪೌಂಡ್ ಹಾಗೂ ಗೇಟ್‌ಗೆ ಬಣ್ಣ ಬಳಿದು ಅಲಂಕಾರಗೊಳಿಸಲಾಗಿದೆ.

ಜನಾಂಗದ ಬಾಂಧವ್ಯವನ್ನು ಬೆಸೆಯುವ ಉದ್ದೇಶದಿಂದ 2015ರಲ್ಲಿ ಆರಂಭಿಸಿದ ಟೂರ್ನಿಯನ್ನು ಹಾತೂರಿನಲ್ಲಿ ಎರಡು ವರ್ಷ ಅಖಿಲ ಅಮ್ಮಕೊಡವ ಸಮಾಜದಿಂದ ನಡೆಸಲಾಯಿತು. ಬಳಿಕ 3ನೇ ವರ್ಷದ ಟೂರ್ನಿಯನ್ನು ಪರಿಯಪ್ಪಂಡ ಕುಟುಂಬಸ್ಥರು, 4ನೇ ವರ್ಷದ ಟೂರ್ನಿಯನ್ನು ಮನ್ನಕ್ಕಮನೆ ಕುಟುಂಬಸ್ಥರು ನಡೆಸಿಕೊಟ್ಟರು. ಇದೀಗ ಬಾನಂಡ ಕುಟುಂಬಸ್ಥರು ಆತಿಥ್ಯ ವಹಿಸಿದ್ದಾರೆ.

ಬಾನಂಡ ಕುಟುಂಬದ ಇತಿಹಾಸ: ಅಮ್ಮಕೊಡವ ಜನಾಂಗದಲ್ಲಿ 33 ಮನೆ ಹೆಸರಿನ ಕುಟುಂಬಗಳಿವೆ. ಅವುಗಳಲ್ಲಿ ಬಾನಂಡ ಕುಟುಂಬವೂ ಒಂದು. ಇವರ ಮೂಲ ಪುರುಷ ಸುಬ್ಬಮ್ಮಯ್ಯ ಎಂದು ಹೇಳಲಾಗುತ್ತಿದೆ. ಸುಮಾರು 5 ತಲೆಮಾರಿನ ಹಿಂದಿನವರ ಬಾನಂಡ ಕುಟುಂಬದ ಐನ್‌ಮನೆ ಮಾಯಮುಡಿ ಪಕ್ಕದ ಧನುಗಾಲದಲ್ಲಿದೆ. ಈ ಮನೆಯನ್ನು ಜೀರ್ಣೋದ್ಧಾರ ಮಾಡಲಾಗಿದ್ದು, ಐನ್‌ಮನೆಯ ಸ್ವರೂಪದಿಂದ ಸಂಪೂರ್ಣ ಬದಲಾಗಿದೆ. ಇಲ್ಲಿ ಸುಬ್ಬಮ್ಮಯ್ಯ ಅವರ ಕುಟುಂಬ ವಾಸವಾಗಿದೆ. ಅಮ್ಮಕೊಡವರಲ್ಲಿ 35 ಮನೆ ಹೆಸರಿನ ಕುಟುಂಬಗಳಿದ್ದವು. ಈಗ ಎರಡು ಕುಟುಂಬಗಳು ಇಲ್ಲದಾಗಿದೆ ಎಂದರು ಬಾನಂಡ ನಂಜುಮಯ್ಯ.

ಅಮ್ಮ ಕೊಡವ ಜನಾಂಗದಲ್ಲಿ ಅಂದಾಜು 4 ಸಾವಿರ ಜನಸಂಖ್ಯೆ ಇದೆ. ಬಾನಂಡ ಕುಟುಂಬದಲ್ಲಿ 93 ಮಂದಿ ಸದಸ್ಯರಿದ್ದಾರೆ. ಉತ್ತಮ ವಿದ್ಯಾವಂತರನ್ನು ಹೊಂದಿರುವ ಕುಟುಂಬದಲ್ಲಿ ಬಾನಂಡ ಎಸ್. ಶಂಭು ಸಿವಿಲ್ ನ್ಯಾಯಾಧೀಶರಾಗಿದ್ದರೆ, ಬಾನಂಡ ಗಣೇಶ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು.

ಶಂಭು ಅವರ ಮಗ ಡಾ.ಸುನಿಲ್ ಕೆನಡಾದಲ್ಲಿ ನೆಲೆಸಿದ್ದಾರೆ. ಡಾ.ಕಿರಣ್ ಮೈಸೂರಿನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ. ಬಾನಂಡ ಪೃಥ್ಯು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಉದ್ಘಾಟನೆಗೆ ಗಣ್ಯರು

4ರಂದು ಬೆಳಿಗ್ಗೆ 9ಕ್ಕೆ ಬಾನಂಡ ಕುಟುಂಬಸ್ಥರು ಸ್ಥಳೀಯ ರಾಮ ಮಂದಿರದಿಂದ ಮೆರವಣಿಗೆ ಹೊರಟು ಮೈದಾನ ತಲುಪಲಿದ್ದಾರೆ. ಬಳಿಕ 10ಕ್ಕೆ ರಾಮಚಂದ್ರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಟೂರ್ನಿ ಉದ್ಘಾಟಿಸಿಲಿದ್ದಾರೆ. ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಅಚ್ಚಿಯಂಡ ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಪಾಲ್ಗೊಳ್ಳಲಿದ್ದಾರೆ.

ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಬಾನಂಡ ಕುಟುಂಬದ ಅಧ್ಯಕ್ಷ ನಂಜುಮಯ್ಯ, ಟೂರ್ನಿ ಅಧ್ಯಕ್ಷ ಅಪ್ಪಣಮಯ್ಯ, ಗೌರವಾಧ್ಯಕ್ಷ ಬಾನಂಡ ಪೃಥ್ಯು, ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಸೂದನ್. ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಪುತ್ತಾಮನೆ ಅನಿಲ್, ನಿರ್ದೇಶಕ ಅಮ್ಮತ್ತೀರ ರಾಜೇಶ್ ಟೊಂಕ ಕಟ್ಟಿನಿಂತಿದ್ದಾರೆ.

*ಜಿಲ್ಲೆಯಾದ್ಯಂತ ನೆಲೆಸಿರುವ ‘ಅಮ್ಮ ಕೊಡವ ಜನಾಂಗ’ವನ್ನು ಒಂದುಗೂಡಿಸಿ, ಪರಸ್ಪರ ಪರಿಚಯ ಮಾಡಿಕೊಳ್ಳುವುದು. ಜತೆಗೆ, ಆಧುನಿಕತೆಯ ಭರಾಟೆಯಲ್ಲಿ ಅಳಿದು ಹೋಗುತ್ತಿರುವ ಬಾಂಧವ್ಯದ ಸೇತುವೆಯನ್ನು ಮತ್ತೆ ಕಟ್ಟುವ ಪ್ರಯತ್ನ ಟೂರ್ನಿ ಮೂಲಕ ನಡೆಯುತ್ತಿದೆ

–ಪುತ್ತಾಮನೆ ಅನಿಲ್, ಕಾರ್ಯದರ್ಶಿ,ಅಖಿಲ ಅಮ್ಮಕೊಡವ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT