ಜನ ಜಾನುವಾರುಗಳಿಗೆ ನೀರು, ಮೇವು ನೀಡಿ

ಭಾನುವಾರ, ಮೇ 26, 2019
32 °C

ಜನ ಜಾನುವಾರುಗಳಿಗೆ ನೀರು, ಮೇವು ನೀಡಿ

Published:
Updated:
Prajavani

ಹಾವೇರಿ: ಜಿಲ್ಲೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಜನರು ಗುಳೆ ಹೋಗದಂತೆ ಉದ್ಯೋಗ ಖಾತ್ರಿ ಯೊಜನೆಯಡಿ ಕೆಲಸ ನೀಡುವಂತೆ ಕಾರ್ಯನಿರ್ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಇಲ್ಲಿನ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಚೆಗೆ ನಡೆದ ಬರ ಪರಿಸ್ಥಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸಬೇಕು. ಎಲ್ಲಿಯೂ ನೀರಿನ ಸಮಸ್ಯೆ ಉಂಟಾಗದಂತೆ ಆಯಾ ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒಗಳು ಸದಾ ನಿಗಾ ವಹಿಸಬೇಕು ಎಂದರು.

ಕುಡಿಯುವ ನೀರು ಪೂರೈಕೆಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಬಿಡುಗಡೆ ಮಾಡಿದ ನೀರನ್ನು ಕೃಷಿ ಬಳಕೆಗೆ ಉಪಯೋಗಿಸದಂತೆ ಎಚ್ಚರವಹಿಸಬೇಕು. ನದಿಪಾತ್ರದ ಪಂಪಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಮಳೆಗಾಲ ಪ್ರಾರಂಭವಾಗುವವರೆಗೆ ಜಿಲ್ಲೆಯಲ್ಲಿ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಪಾಲನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು

ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಮೇವಿನ ಸಮಸ್ಯೆ ಕುರಿತು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ 1077 (08375–249102) ಹಗಲು ಮತ್ತು ರಾತ್ರಿ ಸಹಾಯವಾಣಿ ತೆರೆಯಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಸಹ ಸಹಾಯವಾಣಿ ಆರಂಭಿಸಲಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿನಾಯಕ ಹುಲ್ಲೂರ ಮಾತನಾಡಿ, ಜಿಲ್ಲೆಯಲ್ಲಿ 205 ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಲಾಗಿದೆ. 57 ಗ್ರಾಮಗಳಲ್ಲಿ 116 ಖಾಸಗಿ ಕೊಳವೆಬಾವಿಗಳನ್ನು ಒಪ್ಪಂದದ ಆಧಾರದ ಮೇಲೆ ಪಡೆಯಲಾಗಿದೆ. ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲಾಗುತ್ತಿದೆ ಎಂದರು.

ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ 85, ಹಾನಗಲ್-126, ಹಾವೇರಿ-108, ಹಿರೇಕೆರೂರು-125, ರಾಣೆಬೆನ್ನೂರು-143, ಸವಣೂರು-63 ಹಾಗೂ ಶಿಗ್ಗಾವಿಯಲ್ಲಿ 82 ಸೇರಿ 732 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಹಾನಗಲ್ ತಾಲ್ಲೂಕಿನಲ್ಲಿ ಎರಡು, ಹಾವೇರಿ, ರಾಣೆಬೆನ್ನೂರು ಹಾಗೂ ಸವಣೂರಿನಲ್ಲಿ ತಲಾ ಒಂದು ಶುದ್ಧ ನೀರಿನ ಘಟಕ ದುರಸ್ತಿಯಲ್ಲಿವೆ ಎಂದು ವಿವರಿಸಿದರು.

ನಗರ/ಪಟ್ಟಣ ಪ್ರದೇಶಗಳಲ್ಲಿ 2018–19ನೇ ಸಾಲಿನಲ್ಲಿ ಎಸ್.ಎಫ್.ಸಿ. ಅನುದಾನದಲ್ಲಿ ₹1.80 ಲಕ್ಷ ಅನುದಾನ ಬಿಡುಗಡೆಯಾಗಿದ್ದು, 54 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದರು.

ಪ್ರಸ್ತುತ 3.26 ಲಕ್ಷ ಮೆಟ್ರಿಕ್ ಟನ್ ಮೇವು 25 ವಾರಗಳಿಗೆ ಸಾಕಾಗುವಷ್ಟು ದಾಸ್ತಾನು ಇದೆ. ಮೇವು ಲಭ್ಯವಿರುವುದರಿಂದ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸುವುದು ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಕಂಡುಬಂದರೆ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !