ನಾಡಿನ ಅಸ್ಮಿತೆ ಉಳುವಿಗೆ ದಿಟ್ಟು ನಿಲುವು ಇರಲಿ: ಸಾಹಿತಿ ಅಯ್ಯಪ್ಪಯ್ಯ ಹುಡಾ

ಶನಿವಾರ, ಮೇ 25, 2019
33 °C
ಕಸಾಪ ಸಂಸ್ಥಾಪನಾ ದಿನಾಚರಣೆ

ನಾಡಿನ ಅಸ್ಮಿತೆ ಉಳುವಿಗೆ ದಿಟ್ಟು ನಿಲುವು ಇರಲಿ: ಸಾಹಿತಿ ಅಯ್ಯಪ್ಪಯ್ಯ ಹುಡಾ

Published:
Updated:
Prajavani

ರಾಯಚೂರು: ನೆಲ, ಜಲದ ವಿಚಾರದಲ್ಲಿ ನಾಡಿನ ಅಸ್ಮಿತೆ ಉಳಿಸಲು ಕನ್ನಡ ಸಾಹಿತ್ಯ ಪರಿಷತ್ತು ರಾಜೀ ಮಾಡಿಕೊಳ್ಳದೆ ದಿಟ್ಟ ನಿಲುವು ತಾಳಿದೆ ಎಂದು ಸಾಹಿತಿ ಅಯ್ಯಪ್ಪಯ್ಯ ಹುಡಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ವರ್ಚಸ್ಸಿಗೆ ಧಕ್ಕೆಯಾಗದಂತೆ ಪರಿಷತ್ತು ಜಾಗೂರುಕತೆ ವಹಿಸಿದ್ದು, ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.

ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ 1915ರಿಂದ ನಡೆದು ಬಂದಿರುವ ದಾರಿ ಎಲ್ಲರ ಮನದಲ್ಲಿದೆ. ವಿವಿಧ ಸಾಹಿತ್ಯ ಪ್ರಕಾರಗಳಿಗೆ ಸಹಕಾರ ನೀಡಿದೆ. ಗಮಕ ಕಲೆ ಬೆಳೆಯುವಲ್ಲಿ ಬಹುದೊಡ್ಡ ಕೊಡುಗೆಯಿದೆ. ಸಾಧಕ ಬಾಧಕಗಳ ಬಗ್ಗೆ ಸಾಹಿತಿಗಳು ಕಾಳಜಿ ತೋರಬೇಕಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಯುವಕರ ತಂಡ ವಹಿಸಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ. ಹಣ ಮಾಡುವವರು ಹಾಗೂ ಸ್ಥಾನಕ್ಕಾಗಿ ರಾಜಕಾರಣ ಮಾಡುವವರು ಈ ಸಂಸ್ಥೆಗೆ ಬರಬಾರದು. ಸೇವಾ ಮನೋಭಾವದೊಂದಿಗೆ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವವರು ಬರಬೇಕು ಎಂದರು.

ಉದ್ಘಾಟನೆ ನೆರವೇರಿಸಿದ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ವಚನ, ಜನಪದ, ದಾಸ ಹಾಗೂ ದಲಿತ ಸಾಹಿತ್ಯದಲ್ಲಿ ಜಿಲ್ಲೆಯ ಪಾತ್ರ ಪ್ರಮುಖವಾಗಿದ್ದು, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಹೊಸತನದ ಚಿಂತನೆಗಳನ್ನು ಹುಟ್ಟು ಹಾಕಿದ ಕೀರ್ತಿ ಇಲ್ಲಿನ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ತಾಲ್ಲೂಕು ಘಟಕದ ಪದಾಧಿಕಾರಿಗಳಲ್ಲಿ ಯುವ ಮುಖಗಳಿಗೆ ಅವಕಾಶ ನೀಡಿದ್ದು, ಉತ್ತಮವಾದ ವಿಚಾರವಾಗಿದೆ. ಸಾಹಿತ್ಯವನ್ನು ಕಟ್ಟಿ ಬೆಳೆಸಲು ಎಲ್ಲರೂ ಒಗ್ಗೂಡಬೇಕು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಶಿಖರಮಠ ಮಾತನಾಡಿ, ಸಾಹಿತ್ಯವನ್ನು ಕಟ್ಟಿ ಬೆಳೆಸಲು ಹಿರಿಯರ ಮಾರ್ಗದರ್ಶನದಲ್ಲಿ ಕನ್ನಡ ಸೇವೆಗೆ ಎಲ್ಲರನ್ನು ಒಂದುಗೂಡಿಸಿಕೊಂಡು ಚಟುವಟಿಕೆ ನಡೆಸಲಾಗುತ್ತದೆ ಎಂದು ಹೇಳಿದರು.

ಸಲಹಾ ಸಮಿತಿಯ ಸದಸ್ಯರಾದ ರಮೇಶ ಮೇಹರವಾಡೆ, ದಾನಮ್ಮ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ಬಿ.ವಿಜಯರಾಜೇಂದ್ರ, ಕೆ.ಯಶೋದಾ, ರಾಮಣ್ಣ ಬೋಯೆರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !