ಯಾದಗಿರಿ: ಇಲ್ಲಿನ ಗಾಂಧಿನಗರದಿಂದ ಸುಭಾಷ ವೃತ್ತದ ವರೆಗೆ ಖಾಲಿ ಕೊಡಗಳೊಂದಿಗೆ ಎಸ್‌ಯುಸಿಐ(ಸಿ) ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಿವಾಸಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಹಾತ್ಮ ಗಾಂಧಿ ನಗರ ತಾಂಡಾದ ಜನರಿಗೆ ಮೂಲಸೌಲಭ್ಯ ಕಲ್ಪಿಸದಿರುವ ಸರ್ಕಾರ ಮತ್ತು ಪೌರಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಂಘಟನಾ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ತುರ್ತಾಗಿ ಸಮರ್ಪಕ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಕರ್ಯ ಕಲ್ಪಿಸಲು ಸರ್ಕಾರವನ್ನು ಒತ್ತಾಯಿಸಿದರು.
ಕೆಟ್ಟು ನಿಂತಿರುವ ವಿವಿಧ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಬೇಕು. ಈಗಾಗಲೇ ಇರುವ ವಿವಿಧ ನೀರಿನ ಟ್ಯಾಂಕ್‌ಗಳ ಮೂಲಕ ನೀರುಒದಗಿಸಬೇಕು. ಕೆಟ್ಟಿರುವ ವಿವಿಧ ನೀರೆತ್ತುವ ಮೋಟರ್‌ಗಳನ್ನು ದುರಸ್ತಿ ಮಾಡಬೇಕು. ಆ ಮೂಲಕ ದಿನ ಬಳಕೆಗೆ ನೀರೊದಗಿಸಬೇಕು ಎಂದು ಬೇಡಿಕೆ ಸಲ್ಲಿಸಿದರು.
ಹಲವು ವರ್ಷಗಳಿಂದ ಅರ್ಧಕ್ಕೆ ನಿಲ್ಲಿಸಿರುವ ಶೌಚಾಲಯದ ಕಟ್ಟಡ ಶೀಘ್ರವಾಗಿ ಪೂರ್ಣಗೊಳಿಸಬೇಕು. ನಗರ ಸೇರಿದಂತೆ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನಂತರವೂ ಬಡಾವಣೆಯಲ್ಲಿ ಕೆಟ್ಟು ನಿಂತಿರುವ 5-6ಕೊಳವೆ ಬಾವಿಗಳನ್ನು ದುರಸ್ತಿ ಮಾಡಲು ನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಕ್ರಮ ಕೈಗೊಂಡಿಲ್ಲ. 24X7 ನೀರು ಸರಬರಾಜು ಯೋಜನೆ ಸಂಪರ್ಕ ಪಡೆದವರಿಗೂಎರಡುದಿನಗಳಿಗೊಮ್ಮೆ ನೀರು ಪೂರೈಸಿ ಪ್ರತಿ ತಿಂಗಳು ₹150 ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬೀದಿ ದೀಪಗಳಿಲ್ಲ. ಕೆಟ್ಟಿರುವ ಸೋಲಾರ್ ದೀಪಗಳ ದುರಸ್ತಿ ಮಾಡಿಲ್ಲ ಎಂದು ದೂರಿದರು.
ಶೀಘ್ರದಲ್ಲಿ ಬಡಾವಣೆ ಸಮಸ್ಯೆಗಳ ಪರಿಶೀಲನೆಗೆ ಸ್ಥಳಕ್ಕೆ ಆಗಮಿಸುವುದಾಗಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಭರವಸೆ ನೀಡಿದರು.
ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್, ಸದಸ್ಯರಾದ ಸೈದಪ್ಪ ಎಚ್.ಪಿ.., ರಾಮಲಿಂಗಪ್ಪ ಬಿ.ಎನ್., ಸಿಂಧು ಬಿ., ಸುಭಾಷ್‍ಚಂದ್ರ ಬಿ.ಕೆ., ಸವಿತಾ, ಗೀತಾ, ಮಹೆಬೂಬಿ ಬೇಗಂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.