ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಸಮುಚ್ಚಯಕ್ಕೆ ಭದ್ರತೆ

ಜ್ಞಾನಭಾರತಿ ಆವರಣದ 5 ಹಾಸ್ಟೆಲ್‌ಗಳಿಗೆ ಏಕರೂಪದ ಅಡುಗೆ ಮನೆ ವ್ಯವಸ್ಥೆ
Last Updated 7 ಸೆಪ್ಟೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳ ಐದು ಹಾಸ್ಟೆಲ್‌ಗಳಿಗೆ ಕಾಂಪೌಂಡ್‌ ನಿರ್ಮಿಸುವ ಕಾರ್ಯ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಇನ್ನು ಮುಂದೆ ಇದರೊಳಗಿನ 3 ಸಾವಿರ ವಿದ್ಯಾರ್ಥಿಗಳು ಕಣ್ಗಾವಲಿನಲ್ಲಿ ಇರುವಂತಹ ವ್ಯವಸ್ಥೆ ಬರಲಿದೆ.

3 ಕಿ.ಮೀ.ಉದ್ದಕ್ಕೆ ₹1.5 ಕೋಟಿ ವೆಚ್ಚದಲ್ಲಿ ಕಾಂಪೌಂಡ್‌ ನಿರ್ಮಿಸಲಾಗುತ್ತಿದ್ದು, ಶೇ 90ರಷ್ಟು ಕಾಮಗಾರಿ ಕೊನೆಗೊಂಡಿದೆ. ಇಲ್ಲಿ ಸೌರ ವಿದ್ಯುತ್‌, ಬೃಹತ್‌ ಅಡುಗೆಮನೆ (ಮೆಗಾ ಕಿಚನ್‌) ವ್ಯವಸ್ಥೆ ರೂಪುಗೊಳ್ಳಲಿದೆ. ಈ ಕಾಮಗಾರಿಗಳ ಅಂದಾಜು ₹ 12 ಕೋಟಿ.

‘ವಿದ್ಯಾರ್ಥಿಗಳ ವಸತಿ ಪ್ರದೇಶದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ನಡೆಯುತ್ತಿತ್ತು. ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿನಿಲಯದ ಬಳಿ ಸುಳಿಯಬಾರದು ಎಂಬ ಕಾರಣಕ್ಕೆ ಈ ಯೋಜನೆ ರೂಪಿಸಲಾಗಿದೆ. ಪಕ್ಕದಲ್ಲೇ ಇರುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌)ಮೈಸೂರು ರಸ್ತೆ ಕಡೆಗೆ ಪ್ರತ್ಯೇಕ ರಸ್ತೆ ಕಲ್ಪಿಸುವ ನಿಟ್ಟಿನಲ್ಲೂ ಮಾತುಕತೆ ನಡೆಯುತ್ತಿದೆ’ ಎಂದು ಕುಲಪತಿ ಪ್ರೊ. ಕೆ. ಆರ್‌. ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ವಿಶ್ವವಿದ್ಯಾಲಯವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜ್‌ನ (ಯುವಿಸಿಇ) ವಿದ್ಯಾರ್ಥಿಗಳೂ ಇದ್ದಾರೆ. ಒಟ್ಟು 3 ಸಾವಿರ ವಿದ್ಯಾರ್ಥಿಗಳಿಗೆ ಏಕರೂಪದ ಅಡುಗೆ ವ್ಯವಸ್ಥೆ ಮುಂದೆ ಜಾರಿಗೆ ಬರಲಿದೆ’ ಎಂದು ಅವರು ಮಾಹಿತಿ ನೀಡಿದರು.

ಈಶಾನ್ಯ ಭಾರತದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌: ಚಂದ್ರಾ ಲೇಔಟ್‌ ಕಡೆಯಿಂದ ಜ್ಞಾನಭಾರತಿ ಕ್ಯಾಂಪಸ್ ಪ್ರವೇಶಿಸುವರಸ್ತೆಯ ಬದಿಯಲ್ಲೇ ಈಶಾನ್ಯ ಭಾರತದಿಂದ ಬಂದಿರುವ ಬಾಲಕಿಯರಿಗಾಗಿ ₹13 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಲ್ಲಿ ಸಹ ಬೃಹತ್‌ ಅಡುಗೆಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಬೆಂಗಳೂರು ವಿ.ವಿ ಜತೆಗೆ, ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿಯ ಅವಕಾಶ ಸಿಗಲಿದೆ.

’ನಗರದಲ್ಲಿ ಈಶಾನ್ಯ ಭಾರತದ 900ಕ್ಕೂ ಅಧಿಕ ವಿದ್ಯಾರ್ಥಿನಿಯರು ಇದ್ಧಾರೆ. ಈ ಪೈಕಿ 300 ಮಂದಿಗೆ ಇಲ್ಲಿ ಅವಕಾಶ ಸಿಗಲಿದೆ. ಅವರಿಗೆ ಆ ಭಾಗದ ಅಡುಗೆ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಶೀಘ್ರ ಹಾಸ್ಟೆಲ್‌ ಉದ್ಘಾಟನೆ ನಡೆಯಲಿದೆ’ ಎಂದು ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್‌
ಹೇಳಿದರು.

*ವಿದ್ಯಾರ್ಥಿಗಳ ಭದ್ರತೆ, ಉತ್ತಮ ಕಲಿಕಾ ವಾತಾವರಣ ಕಲ್ಪಿಸಲು ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಮುಂದೆ ಅನಾಮಿಕರ ಅನಧಿಕೃತ ಪ್ರವೇಶ ತಪ್ಪಲಿದೆ

-ಪ್ರೊ.ಕೆ.ಆರ್‌.ವೇಣುಗೋಪಾಲ್‌ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT