ಶನಿವಾರ, ನವೆಂಬರ್ 23, 2019
23 °C
ಸಂಕ್ಷಿಪ್ತ ಸುದ್ದಿಗಳು

ವಿ.ಎಂ.ಶೀಲವಂತ್‌ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌

Published:
Updated:

ಬೆಂಗಳೂರು: ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ) ಆಗಿ ವಕೀಲ ವಿಜಯಕುಮಾರ್ ಎಂ.ಶೀಲವಂತ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತ ಆದೇಶವನ್ನು ರಾಜ್ಯ ಕಾನೂನು ಇಲಾಖೆ ಬುಧವಾರ ಹೊರಡಿಸಿದೆ. ಎರಡು ವರ್ಷಗಳ ಅವಧಿಗೆ ಶೀಲವಂತ್‌ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದಿನ ಮೈತ್ರಿ ಸರ್ಕಾರದದ ಅವಧಿಯಲ್ಲಿ ಎಸ್‌ಪಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಕೀಲ ಎಚ್.ಎಸ್. ಚಂದ್ರಮೌಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಶಾಲಾಮಕ್ಕಳಿಗೆ ಇಂದಿನಿಂದ ಪೌಷ್ಟಿಕ ಹಾಲು

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ 42 ಸಾವಿರ ಮಕ್ಕಳಿಗೆ ಇಂದಿನಿಂದ ವಿಟಮಿನ್‌ ಹಾಗೂ ಪೌಷ್ಟಿಕಾಂಶಯುಕ್ತ ಹಾಲು ದೊರೆಯಲಿದೆ. 

ಅದಮ್ಯ ಚೇತನ ಸಂಸ್ಥೆಯು ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಸಾಯಿ ಶ್ಯೂರ್‌ ಮಲ್ಟಿ ವಿಟಮಿನ್‌ ಪೌಷ್ಟಿಕಾಂಶಯುಕ್ತ ಹಾಲನ್ನು ‘ಕ್ಷೀರಭಾಗ್ಯ ಯೋಜನೆ’ಯಡಿ ವಾರದಲ್ಲಿ ಎರಡು ಬಾರಿ ವಿತರಿಸಲಿದೆ. 

ಯೋಜನೆ ಸೆಪ್ಟೆಂಬರ್‌ 12ರಿಂದ ಆರಂಭಗೊಳ್ಳಲಿದ್ದು, ಸಚಿವ ಎಸ್‌. ಸುರೇಶ್‌ ಕುಮಾರ್‌ ಉದ್ಘಾಟಿಸಲಿದ್ದಾರೆ. ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಕಲಬುರ್ಗಿ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದೆ.

‘ಈ ಯೋಜನೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಒಂದು ವರ್ಷದ ಬಳಿಕ ಮಕ್ಕಳ ಹಿಮೋಗ್ಲೋಬಿನ್‌ ಮಟ್ಟ ಪರೀಕ್ಷಿಸಿದ ವೇಳೆ ಅವರ ಆರೋಗ್ಯ ಮಟ್ಟ ವೃದ್ಧಿಯಾಗಿತ್ತು. ಮಕ್ಕಳ ಆರೋಗ್ಯದಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿರುವ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದೆವು. ಆ ಬಳಿಕ ಯೋಜನೆಯನ್ನು ಉಳಿದ ಜಿಲ್ಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಯಿತು’ ಎಂದು ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆನಂದ್‌ ಕುಮಾರ್‌ ವಿವರಿಸಿದರು.

ಒತ್ತುವರಿ ತೆರವು ₹4 ಕೋಟಿ ಆಸ್ತಿ ವಶ

ಯಲಹಂಕ: ಬಾಗಲೂರು ಗ್ರಾಮದ ಸರ್ಕಾರಿ ಗುಂಡುತೋಪು ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಕಟ್ಟಡವನ್ನು ತೆರವುಗೊಳಿಸಿದ ತಾಲ್ಲೂಕು ಆಡಳಿತ, ₹4 ಕೋಟಿ ಮೌಲ್ಯದ ಆಸ್ತಿಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆದಿದೆ.

ಬಾಗಲೂರು ಗ್ರಾಮದ ಸರ್ವೆ ನಂ.120ರಲ್ಲಿ 32 ಗುಂಟೆ ಸರ್ಕಾರಿ ಜಾಗವಿದ್ದು, ಇದರಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಬೇಕೆಂದು ಕಂದಾಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಾಗ ಮಂಜೂರುಮಾಡುವ ಮುನ್ನವೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಲು ಮುಂದಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಯಲಹಂಕ ತಾಲ್ಲೂಕು (ಹೆಚ್ಚುವರಿ) ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಪ್ರತಿಕ್ರಿಯಿಸಿ (+)