ಶನಿವಾರ, ನವೆಂಬರ್ 23, 2019
17 °C

‘ಬಿಳಿ ಕೊಕ್ಕರೆ ಹಾಗೂ ವಿಶ್ವದ ಆಖ್ಯಾಯಿಕೆಗಳು’ ಪುಸ್ತಕ ಪ್ರಕಟ

Published:
Updated:
Prajavani

ಬೆಂಗಳೂರು: ಸಾಹಿತಿ ಗೌರೀಶ ಕಾಯ್ಕಿಣಿ ಅವರ 107ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಬಿಳಿ ಕೊಕ್ಕರೆ ಹಾಗೂ ವಿಶ್ವದ ಆಖ್ಯಾಯಿಕೆಗಳು’ ಎಂಬ ಪುಸ್ತಕದ ಹೊಸ ಆವೃತ್ತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗುರುವಾರ ಪ್ರಕಟಿಸಲಿದೆ. 

1956ರಲ್ಲಿ ಕುಮಟಾದ ಸುಲಭ ಸಾಹಿತ್ಯದಿಂದ ‘ಬಿಳಿಕೊಕ್ಕರೆ’ ಮತ್ತು 1972ರಲ್ಲಿ ಧಾರವಾಡದ ಸಮಾಜ ಪುಸ್ತಕಾಲಯದಿಂದ ‘ವಿಶ್ವದ ಆಖ್ಯಾಯಿಕೆಗಳು’ ಪುಸ್ತಕ ಪ್ರಕಟವಾಗಿದ್ದವು. ಕುವೆಂಪು ಭಾಷಾ ಭಾರತಿ ಪ್ರಧಿಕಾರ ಇದೀಗ ಒಂದೇ ಸಂಪುಟದಲ್ಲಿ ಹೊರತರುತ್ತಿದೆ. 

ಜಾಕ್ ಲಂಡನ್, ವಿಲಿಯಂ ಫಾಕ್ನರ್ ಸೇರಿದಂತೆ ಹಲವು ಶ್ರೇಷ್ಠ ಕತೆಗಾರರ ಕತೆಗಳ ಜತೆಗೆ ಈಗಾಗಲೇ ಐತಿಹ್ಯಗಳಾಗಿ ಹೋಗಿರುವ ಈಡಿಪಸ್, ರಿಪ್ ವ್ಯಾನ್ ವಿಂಕಲ್, ಜಾನ್ ಆಫ್ ಆರ್ಕ್, ಪೆಂಡೋರಾ ಪೆಟ್ಟಿಗೆ, ಟ್ರೋಜನ್ ಕುದುರೆ, ವಿಲಿಯಂ ಟೆಲ್‌ ಒಳಗೊಂಡಂತೆ ಹಲವು ವೈವಿಧ್ಯಮಯ ಕಿರುಗತೆಗಳು ಈ ಪುಸ್ತಕದಲ್ಲಿವೆ.

‘ಬಿಳಿಕೊಕ್ಕರೆ ಮತ್ತು ವಿಶ್ವದ ಆಖ್ಯಾಯಿಕೆಗಳು’ ಪುಸ್ತಕದಲ್ಲಿ ವಿವಿಧ ದೇಶದ ಲೇಖಕರ ಇಪ್ಪತ್ತು ಆಖ್ಯಾಯಿಕೆಗಳು ಹಾಗೂ ಆರು ಕತೆಗಳಿವೆ. ಮನುಷ್ಯನೊಳಗಿನ ಸಂಘರ್ಷಕ್ಕಿಂತ ನಿಸರ್ಗದಲ್ಲಿರುವ ಹಿಂಸಾತ್ಮಕ ಹೋರಾಟಗಳು ಕಡಿಮೆ ಮಟ್ಟದ್ದಾಗಿವೆ. ಮನುಷ್ಯ ಪ್ರಾಣಿಗಳಿಗಿಂತ ಹೆಚ್ಚು ಹಿಂಸಾಮಯಿ ಎಂಬುದರ ಚಿತ್ರಣವನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ, ಮಾನವ ಮತ್ತು ಪ್ರಕೃತಿ ವಲಯದ ಮನೋಹರವಾದ ಹೋರಾಟವಿದೆ. ದೈವವು ಮಾನವನನ್ನು ಆಡಿಸಿ, ಕೊಲ್ಲುವ ವಿಧಿವಿಲಾಸ ಸ್ವರೂಪದ ವಿವರಗಳಿವೆ’ ಎಂದು ಪುಸ್ತಕದ ಬೆನ್ನುಡಿಯಲ್ಲಿ ವಿಮರ್ಶಕ ಕೆ. ಮರುಳಸಿದ್ದಪ್ಪ ತಿಳಿಸಿದ್ದಾರೆ. 

 

ಪ್ರತಿಕ್ರಿಯಿಸಿ (+)