ಭಾನುವಾರ, ನವೆಂಬರ್ 17, 2019
28 °C

ಹೈಕೋರ್ಟ್‌ನಲ್ಲಿ ಶೀಘ್ರಲಿಪಿ ಕೋರ್ಸ್ ಆರಂಭ: ಅಭಯ್ ಶ್ರೀನಿವಾಸ್ ಓಕಾ ಹೇಭರವಸೆ

Published:
Updated:
Prajavani

ಬೆಂಗಳೂರು: ‘ನ್ಯಾಯಾಂಗ ವ್ಯವಸ್ಥೆಯಲ್ಲಿ ಶೀಘ್ರಲಿಪಿಗಾರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಹೈಕೋರ್ಟ್‌ನಲ್ಲೂ ಶೀಘ್ರಲಿಪಿ ಕೋರ್ಸ್‌ ರಂಭಿಸಲಾಗುವುದು’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಭರವಸೆ ನೀಡಿದರು. 

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಶೀಘ್ರಲಿಪಿಗಾರರ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹೈಕೋರ್ಟ್‌ ಸೇರಿದಂತೆ ಅಧೀನ ನ್ಯಾಯಾಲಯಗಳಲ್ಲಿಶೀಘ್ರಲಿಪಿಕಾರರಿಗೆ ಬೇಡಿಕೆಯಿದೆ. ಹಾಗಾಗಿ ಆಸಕ್ತಿ ಇರುವವರಿಗೆ ಕೌಶಲ ವೃದ್ಧಿಸಿ, ಅಗತ್ಯ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ರಿಜಿಸ್ಟ್ರಾರ್ ಜನರಲ್ ಜತೆ ಚರ್ಚಿಸಿ, ಕೋರ್ಸ್‌ ಆರಂಭಿಸಲಾಗುವುದು. ಇದಕ್ಕೆ ಸಂಘದ ಸಹಕಾರ ಅಗತ್ಯ’ ಎಂದು ತಿಳಿಸಿದರು. 

‘ನ್ಯಾಯಾಲಯಗಳ ಹೊರತಾಗಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿಯೂ ಶೀಘ್ರಲಿಪಿಗಾರರಿಗೆ ಬೇಡಿಕೆಯಿದೆ. ಆದರೆ, ಅಗತ್ಯ ಇರುವಷ್ಟು ಶೀಘ್ರಲಿಪಿಕಾರರು ಲಭ್ಯವಿಲ್ಲ’ ಎಂದರು. 

ಶತಮಾನೋತ್ಸವ ಕೇಂದ್ರೀಯ ಸಮಿತಿ ಅಧ್ಯಕ್ಷ ಟಿ.ಎನ್. ಧ್ರುವಕುಮಾರ್, ‘ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಪದವಿಗಳನ್ನು ಪಡೆದುಕೊಂಡು ನಿರುದ್ಯೋಗಿಗಳಾಗುವವರ ಸಂಖ್ಯೆ ಹೆಚ್ಚಾಗಿದೆ.ಕೇವಲ ₹25 ಸಾವಿರ ವೆಚ್ಚದಲ್ಲಿ ಶೀಘ್ರಲಿಪಿ ಕೋರ್ಸ್‌ ಪೂರ್ಣಗೊಳಿಸಬಹುದಾಗಿದ್ದು, ಉತ್ತಮ ಉದ್ಯೋಗಾವಕಾಶ
ಗಳಿವೆ’ ಎಂದು ಒತ್ತಾಯಿಸಿದರು. 

‘ಈ ಮೊದಲು ಕಂದಾಯ ಭವನದಲ್ಲಿದ್ದ ಸಂಘದ ಕಟ್ಟಡವನ್ನು ಸರ್ಕಾರವೇ ನೆಲಸಮ ಮಾಡಿದೆ. ಹಾಗಾಗಿ ತರಗತಿಗಳನ್ನು ನಡೆಸುವುದು ಕಷ್ಟವಾಗಿದೆ. ಆದ್ದರಿಂದ ನಗರದಲ್ಲಿ 5 ಸಾವಿರ ಚದರ ಅಡಿ ಭೂಮಿಯನ್ನು ಸರ್ಕಾರ ನೀಡಬೇಕು. ಸಂಘಕ್ಕೆ ನೀಡುತ್ತಿದ್ದ ವಾರ್ಷಿಕ ಅನುದಾನವನ್ನೂ ಸರ್ಕಾರ ನಿಲ್ಲಿಸಿದ್ದರಿಂದ ಸಮಸ್ಯೆಯಾಗಿದೆ. ಅದನ್ನು ಮತ್ತೆ ಆರಂಭಿಸಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಥಮ ಖಾಸಗಿ ಕಾರ್ಯಕ್ರಮ

‘ರಾಜ್ಯಕ್ಕೆ ಬಂದ ಮೇಲೆ ಹಲವು ಖಾಸಗಿ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದ್ದವು. ಯಾವುದೇ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಶೀಘ್ರಲಿಪಿಗಾರರ ಸಂಘದ ಆಹ್ವಾನವನ್ನು ನಿರಾಕರಿಸುವ ಹಾಗಿರಲಿಲ್ಲ. ಇದೇ ಮೊದಲಬಾರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ತಿಳಿಸಿದರು. 

‘ನಾನು ವಕೀಲರ ಕುಟುಂಬದಲ್ಲಿ ಜನಿಸಿದವನು. ನಮ್ಮ ಮನೆಯಲ್ಲಿಯೇ ಮೂವರು ಶೀಘ್ರಲಿಪಿಕಾರರು ಇದ್ದರು. ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು’ ಎಂದು ಶೀಘ್ರಲಿಪಿಕಾರರ ಜತೆಗಿನ ನಂಟನ್ನು ಹೇಳಿಕೊಂಡರು. 

 

ಪ್ರತಿಕ್ರಿಯಿಸಿ (+)