ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ವೇತನ, ಸೇವಾ ಭದ್ರತೆಗೆ ಆಹಾರ ಪೂರೈಕೆ ಡೆಲಿವರಿ ಪಾರ್ಟನರ್‌ಗಳ ಆಗ್ರಹ

Last Updated 4 ಅಕ್ಟೋಬರ್ 2019, 20:02 IST
ಅಕ್ಷರ ಗಾತ್ರ

ಬೆಂಗಳೂರು: ನಾವು ಹೆಸರಿಗೆ ‘ಸ್ವತಂತ್ರ ಸೇವಾದಾರರು’. ದಿನಕ್ಕೆ 16ರಿಂದ 18 ಗಂಟೆ ಕೆಲಸ. ಉದ್ಯೋಗ ಭದ್ರತೆ ಇಲ್ಲ, ನಿಗದಿತ ವೇತನವೂ ಇಲ್ಲ...

ಇದು, ಆ್ಯಪ್ ಆಧಾರಿತ ಆಹಾರ ಪೂರೈಕೆಯ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದು ಹೀಗೇ.

ಗುರುವಾರನಗರದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್‌ (ಎಐಡಿವೈಒ) ಆಯೋಜಿಸಿದ್ದ ಆಹಾರ ವಿತರಕ ಪಾಲುದಾರರ (ಫುಡ್ ಡೆಲಿವರಿ ಪಾರ್ಟನರ್‌ಗಳು) ಸಮಾವೇಶದಲ್ಲಿ ಅವರು ತಮ್ಮ ಕಷ್ಟ ಹೇಳಿಕೊಂಡರು.

‘ನಾವು, ಬೇಕಾದಾಗ ಲಾಗಿನ್ ಮತ್ತು ಲಾಗ್‌ ಔಟ್ ಮಾಡಬಲ್ಲ ‘ಸ್ವತಂತ್ರ ಸೇವಾದಾರರು’ ಎಂಬುದು ಕಂಪನಿಗಳ ಪ್ರತಿಪಾದನೆ. ಹೀಗೆ ಹೆಸರು ನೋಂದಣಿ ಮಾಡಿಕೊಂಡು ದುಡಿಯುತ್ತಿರುವ ನಮಗೆ ಕಂಪನಿಗಳು ಸಂಬಳ ನೀಡುವುದಿಲ್ಲ. ಪೇ–ಔಟ್, ಡೆಲಿವರಿ ಚಾರ್ಜ್‌ ಮತ್ತು ಪ್ರೋತ್ಸಾಹ ಧನದ ಪ್ರಮಾಣವೂ ಪದೇ ಪದೇ ಬದಲಾಗುತ್ತಿದೆ’ ಎಂದು ವಿವರಿಸಿದರು.

‘ಕೆಲಸಕ್ಕೆ ನಿಗದಿತ ಅವಧಿ, ವೇತನ ಇಲ್ಲ. ದುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಸ್ವತಂತ್ರ ಸೇವಾದಾರರು ಎಂದು ಕರೆಸಿಕೊಳ್ಳುವ ನಮಗೆ ಸ್ವಾತಂತ್ರ್ಯವೇ ಇಲ್ಲ. ನಮ್ಮ ಹಿತ ಕಾಪಾಡುವ ಕಾನೂನು ಈ ದೇಶದಲ್ಲಿ ಇಲ್ಲ’ ಎಂದು ಅಳಲು ತೋಡಿಕೊಂಡರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಜಿ.ಎಸ್.ಕುಮಾರ್, ‘ಹೋಟೆಲ್ ಮತ್ತು ಗ್ರಾಹಕರಿಂದ ಲಾಭ ಮಾಡಿಕೊಳ್ಳುವ ಕಂಪನಿಗಳು ಅವರ ಪರವಾಗಿ ಕೆಲಸ ಮಾಡುವ ನಮ್ಮನ್ನು ಉದ್ಯೋಗಿಗಳೆಂದೇ ಪರಿಗಣಿಸಿಲ್ಲ. ನಿರಂತರ ಶೋಷಣೆ ಇದೆ. ಸರ್ಕಾರ ಇವರ ರಕ್ಷಣೆಗಾಗಿ ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿದರು.

ವಕೀಲ ಕೆ.ಸುಬ್ಬರಾವ್ ಅವರು, ‘ಜಾಗತೀಕರಣ ನೀತಿಗಳಿಂದಾಗಿ ಕಾರ್ಮಿಕರ ಶೋಷಣೆ ತಾರಕಕ್ಕೇರಿದೆ. ಹೀಗಾಗಿ ಸಂಘಟಿತರಾಗಿ ಹೋರಾಟ ಅನಿವಾರ್ಯ’ ಎಂದು ಹೇಳಿದರು.

‘ವಿತರಕ ಪಾಲುದಾರರಿಗೂ ಉದ್ಯೋಗ ಕಾಯಂಗೊಳಿಸಬೇಕು ಮತ್ತು ವೇತನನಿಗದಿ ಸಂಬಂಧ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು’ ಎಂದು ಡೆಲಿವರಿ ಪಾರ್ಟನರ್‌ಗಳ ಹೋರಾಟ ಸಮಿತಿ ಅಧ್ಯಕ್ಷ ವಿನಯ್ ಸಾರಥಿ ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT