ಶುಕ್ರವಾರ, ನವೆಂಬರ್ 15, 2019
24 °C

ಆರೋಗ್ಯ: ಹಲ್ಲಿನ ಸಮಸ್ಯೆ ಪತ್ತೆಗೆ ದಂತ ಕ್ಷ- ಕಿರಣ ಪರೀಕ್ಷೆ

Published:
Updated:

ದಂತ ಕ್ಷ- ಕಿರಣ ಎಂಬುದು ಹಲ್ಲಿಗೆ ಸಂಬಂಧಿಸಿದ ರೋಗ ಪತ್ತೆ ಹಚ್ಚುವ ಒಂದು ಪರೀಕ್ಷೆ ಆಗಿದ್ದು, ಹಲವಾರು ಸಂದರ್ಭಗಳಲ್ಲಿ ದಂತ ವೈದ್ಯರ ಬರಿಗಣ್ಣಿಗೆ ಕಾಣದ ರೋಗಗಳನ್ನು ಮತ್ತು ಹಲ್ಲಿನ ಸಂಕೀರ್ಣತೆ ಪತ್ತೆ ಹಚ್ಚಲು ಬಳಸಲಾಗುತ್ತದೆ. ಇದೊಂದು ಅತ್ಯಂತ ಸುಲಭವಾಗಿ ಮಾಡಬಹುದಾದ ಪರೀಕ್ಷೆ ಆಗಿದ್ದು ಹತ್ತು ನಿಮಿಷಗಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಪತ್ತೆ ಹಚ್ಚಲು ಸಹಕಾರಿ ಆಗಿದೆ.

ಇಂಗ್ಲಿಷ ಭಾಷೆಯಲ್ಲಿ ‘ಡೆಂಟಲ್ ಎಕ್ಸರೇ’ ಎನ್ನಲಾಗುತ್ತದೆ. ದಂತ ಸಂಬಂಧಿ ಎಕ್ಸ್‌ರೆಗಳನ್ನು ಬಾಯಿ ಒಳಗೆ ತೆಗೆವ ಎಕ್ಸರೆ ಮತ್ತು ಬಾಯಿ ಹೊರಭಾಗದಲ್ಲಿ ತೆಗೆಯುವ ಎಕ್ಸರೆ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಬಾಯಿ ಒಳ ಭಾಗದಲ್ಲಿ ಕ್ಷ-ಕಿರಣದ ಫಿಲ್ಮ್‌ ಇಟ್ಟಲ್ಲಿ ಅಂತಹ ದಂತ ಕ್ಷ-ಕಿರಣವನ್ನು ಬಾಯಿಯ ಒಳಭಾಗದ ದಂತ ಕ್ಷ-ಕಿರಣ ಎನ್ನಲಾಗುತ್ತದೆ.

ಅಂತೆಯೇ ಬಾಯಿ ಹೊರಭಾಗದಲ್ಲಿ ಕ್ಷ-ಕಿರಣ ಫಿಲ್ಮ್‌ ಇಟ್ಟಾಗ ಅದನ್ನು ಬಾಯಿ ಹೊರಭಾಗದ ದಂತ ಕ್ಷ–ಕಿರಣ ಎನ್ನಲಾಗುತ್ತದೆ. ಜನರಿಗೆ ದಂತ ಕ್ಷ-ಕಿರಣದಿಂದ ಹೊರಸೂಸುವ ವಿಕಿರಣ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ತಪ್ಪುಕಲ್ಪನೆ ಇದೆ. ದಂತ ಕ್ಷ-ಕಿರಣದ ಪರೀಕ್ಷೆ ಸಮಯದಲ್ಲಿ ಹೊರಸೂಸುವ ವಿಕಿರಣ ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ರೋಗಿಗೆ ಯಾವುದೇ ರೀತಿ ತೊಂದರೆ ಉಂಟಾಗುವುದಿಲ್ಲ. ಈ ಕಾರಣದಿಂದ ರೋಗಿಗಳು ಯಾವುದೇ ಭಯ ಅಥವಾ ಸಂಶಯಗಳಿಲ್ಲದೆ ದಂತ ವೈದ್ಯರು ಸೂಚಿಸಿದಲ್ಲಿ ದಂತ ಕ್ಷ–ಕಿರಣ ಪರೀಕ್ಷೆಯನ್ನು ನಿರ್ಭಿತಿಯಿಂದ ಮಾಡಿಸಿಕೊಳ್ಳಬಹುದು.

ಎಲ್ಲಿ ದಂತ ಕ್ಷಕಿರಣ ಬಳಸುತ್ತಾರೆ?

* ಹಲ್ಲಿಗೆ ದಂತ ಕ್ಷಯ ಉಂಟಾದಾಗ ಅದರ ತೀವ್ರತೆ ತಿಳಿಯಲು ದಂತ ಕ್ಷ-ಕಿರಣ ಬಳಸು
ತ್ತಾರೆ. ಹಲ್ಲಿನ ಬದಿಗಳಲ್ಲಿ ಎರಡು ಹಲ್ಲುಗಳ ಸಂದಿಗಳಲ್ಲಿ ದಂತ ಕ್ಷಯ ಉಂಟಾದಾಗ ದಂತ ವೈದ್ಯರ ಬರಿಗಣ್ಣಿಗೆ ಗೋಚರಿಸದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ‘ಬೈಟ್‍ವಿಂಗ್ ಎಕ್ಸರೆ’ ಎಂಬ ವಿಧಾನದ ಮುಖಾಂತರ ದಂತ ಕ್ಷಯವನ್ನು ಪತ್ತೆ ಹಚ್ಚಲಾಗುತ್ತದೆ.

* ಬೇರುನಾಳ ಚಿಕಿತ್ಸೆ ಮಾಡುವಾಗ (ರೂಟ್ ಕೆನಾಲ್ ಥೆರಪಿ) ಹಲ್ಲಿನ ರಚನೆ, ಗಾತ್ರ, ಬೇರುಗಳ ಸಂಖ್ಯೆ ಹಾಗೂ ಉದ್ದ, ಬೇರಿನ ಮೇಲ್ಭಾಗದಲ್ಲಿನ ಮತ್ತು ಸುತ್ತಲಿನ ಎಲುಬಿನ ಸಾಂದ್ರತೆ ತಿಳಿಯಲು ದಂತ ಕ್ಷಕಿರಣ ಪರೀಕ್ಷೆ ಮಾಡಲಾಗುತ್ತದೆ.

* ಹಲ್ಲು ಅಲುಗಾಡುತ್ತಿದ್ದಲ್ಲಿ, ಹಲ್ಲಿನ ಸುತ್ತಲಿನ ದಂತಾದಾರ ಎಲುಬಿನ ರಚನೆ, ಗಾತ್ರ, ಸಾಂದ್ರತೆ ಮತ್ತು ಎತ್ತರವನ್ನು ತಿಳಿಯಲು ದಂತ ಕ್ಷ-ಕಿರಣ ಪರೀಕ್ಷೆಮಾಡುತ್ತಾರೆ.

* ಬುದ್ಧಿಶಕ್ತಿ ಹಲ್ಲು ಅಥವಾ ಮೂರನೇ ದವಡೆ ಹಲ್ಲು ಹೊರಬಾರದೆ, ಎಲುಬಿನಲ್ಲಿ ಹುದುಗಿಕೊಂಡಿದ್ದಲ್ಲಿ ಹಲ್ಲಿನ ಗಾತ್ರ, ರಚನೆ, ಬೇರಿನ ಉದ್ದ, ಸಂಖ್ಯೆ ಮತ್ತು ಆಕಾರವನ್ನು ತಿಳಿಯಲು ದಂತ ಕ್ಷ–ಕಿರಣ ಮಾಡಲಾಗುತ್ತದೆ. ಅದೇ ರೀತಿ ಹಲ್ಲಿನ ಬೇರಿಗೂ ಮತ್ತು ದವಡೆ ಒಳಗಿರುವ ದಂತದ ನರಗಳಿಗೂ ಇರುವ ಸಾಮೀಪ್ಯ ಮತ್ತು ಸಂಬಂಧ ತಿಳಿಯಲು ದಂತ ಕ್ಷ- ಕಿರಣ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಹಲ್ಲು ಕೀಳುವ ಸಮಯದಲ್ಲಿ ದಂತದ ನರಗಳಿಗೆ ಹಾನಿಯಾಗಿ ಮುಂದೆ ಬಹಳ ತೊಂದರೆ ಉಂಟಾಗಬಹುದು.

* ಹಲ್ಲಿಗೆ ಏಟು ಬಿದ್ದಾಗ, ಹಲ್ಲು ಮುರಿದು ಹೋದಾಗ ಹಲ್ಲಿಗೂ, ಹಲ್ಲಿನ ಬೇರಿಗೂ ಉಂಟಾದ ಏಟಿನ ತೀವ್ರತೆ ತಿಳಿಯಲು ದಂತ ಕ್ಷ–ಕಿರಣ ಪರೀಕ್ಷೆಮಾಡಲಾಗುತ್ತದೆ.

* ಕೆಲವೊಮ್ಮೆ ನಿಗದಿತ ಸಮಯಕ್ಕೆ ಹಲ್ಲು ಮೂಡದೇ ಇದ್ದಾಗ, ದವಡೆಯಲ್ಲಿ ಹಲ್ಲು
ಹುಟ್ಟಿದೆಯೋ ಇಲ್ಲವೋ ಎಂಬುದನ್ನು ಖಾತರಿಗೊಳಿಸಲು ದಂತ ಕ್ಷ-ಕಿರಣ ಅತೀ ಅವಶ್ಯ.

* ಹಲ್ಲು ಕೀಳುವ ಸಂದರ್ಭದಲ್ಲಿ ಸಾಮಾನ್ಯವಾದ ಎಳೆತಕ್ಕೆ ಹಲ್ಲು ಮಿಸುಕಾಡದಿದ್ದಾಗ, ಹಲ್ಲು ಮತ್ತು ಎಲುಬಿನ ನಡುವೆ ಏನಾದರೂ ಜೋಡುವಿಕೆ ಉಂಟಾಗಿದೆಯೋ ಎಂಬುದನ್ನು
ಪತ್ತೆ ಹಚ್ಚಲು ದಂತ ಕ್ಷ-ಕಿರಣ ಬಳಸುತ್ತಾರೆ.

* ಮುಖಕ್ಕೆ ಏಟು ಬಿದ್ದಾಗ ದವಡೆ ಮುರಿತ ಉಂಟಾಗಿದೆಯೋ ಎಂಬುದನ್ನು ಪತ್ತೆ ಹಚ್ಚಲು ಕ್ಷ-ಕಿರಣ ಬಳಸುತ್ತಾರೆ.

* ಹಲ್ಲು ಕೀಳುವ ಸಂದರ್ಭದಲ್ಲಿ ಹಲ್ಲಿನ ಬೇರು ಮುರಿದಾಗ ಉಳಿದ ಮುರಿದ ಹಲ್ಲಿನ ಭಾಗವನ್ನು ತೆಗೆವ ಮೊದಲು ದಂತ ಕ್ಷ-ಕಿರಣ ಪರೀಕ್ಷೆ ಮಾಡಿದಲ್ಲಿ ಹಲ್ಲು ತೆಗೆಯಲು ಸುಲಭವಾಗುತ್ತದೆ.

* ದವಡೆ ಒಳಗೆ ಯಾವುದಾದರೂ ಕ್ಯಾನ್ಸರ್ ಅಥವಾ ಇನ್ನಾವುದೇ ರೋಗದ ಕುರುಹು ಕಾಣಿಸಿದಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಎಕ್ಸರೆ ಬಳಸಲಾಗುತ್ತದೆ.

* ಹಲ್ಲಿನ ಸೋಂಕು ತಗುಲಿ ಮುಖ ಊದಿಕೊಂಡಿದ್ದಲ್ಲಿ ಹಲ್ಲಿನ ಬೇರಿನ ಸುತ್ತ ಕೀವು ತುಂಬಿರುವುದನ್ನು ಪತ್ತೆ ಹಚ್ಚಲು ದಂತ ಕ್ಷ-ಕಿರಣ ಬಳಸುತ್ತಾರೆ.

* ದಂತ ಇಂಪ್ಲಾಂಟ್ ಚಿಕಿತ್ಸೆ ಸಮಯದಲ್ಲಿ ಎಲುಬಿನ ರಚನೆ, ಸಾಂದ್ರತೆ ತಿಳಿಯಲು ದಂತ ಕ್ಷ-ಕಿರಣ ಬಳಸುತ್ತಾರೆ.

ದಂತ ಕ್ಷಕಿರಣ ಯಾವಾಗ, ಯಾಕೆ?

ದಂತ ಕ್ಷ-ಕಿರಣ ಎನ್ನುವುದು ಅತ್ಯಂತ ಸುರಕ್ಷಿತ ಪರೀಕ್ಷೆಯಾಗಿದ್ದು, ನಿರ್ಭೀತಿಯಿಂದ ದಂತ ವೈದ್ಯರ ಸಲಹೆಯಂತೆ ಅಗತ್ಯವಿದ್ದಾಗ ಮಾಡಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಲೆಡ್ (ಸೀಸ) ಏಪ್ರನ್ ಬಳಸಿ ಭ್ರೂಣದಲ್ಲಿರುವ ಮಗುವಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಥೈರಾಯಿಡ್ ಗ್ರಂಥಿಗೆ ಹಾನಿಯಾಗದಂತೆ ‘ಥೈರಾಯಿಡ್ ಕಾಲರ್’ ಬಳಸಲಾಗುತ್ತದೆ. ಅತೀ ಕಡಿಮೆ ವಿಕಿರಣ ಸೂಸುವ ಕಾರಣದಿಂದ, ದಂತ ಕ್ಷ-ಕಿರಣದಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ.

ಪ್ರತಿಕ್ರಿಯಿಸಿ (+)