ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಚಿಂತೆ

Last Updated 11 ಜುಲೈ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು:ಕಾವೇರಿ ನೀರನ್ನೇ ನಂಬಿರುವ ಬೆಂಗಳೂರಿನಲ್ಲಿ ಜುಲೈ ಕಳೆದರೆಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಸ್ಥಿತಿ ಇದೆ. ಹೊಸದಾಗಿ ಪಾಲಿಕೆ ವ್ಯಾಪ್ತಿಗೆ ಸೇರಿದ 110 ಗ್ರಾಮಗಳಲ್ಲಿ ಮೂಲ ಸೌಕರ್ಯವೇ ಇಲ್ಲ, ಟ್ರಾಫಿಕ್ ಸಮಸ್ಯೆಯಂತೂ ದಿನೇ ದಿನೇ ಹೆಚ್ಚುತ್ತಿದೆ.

ಬೆಂಗಳೂರಿನ ಜನ ಹೀಗೆ ಸಮಸ್ಯೆಗಳ ಸರಮಾಲೆಗಳ ನಡುವೆ ಜೀವನ ನಡೆಸುತ್ತಿದ್ದರೆ. ನಗರ ವ್ಯಾಪ್ತಿಯ ಆರು ಶಾಸಕರು ರಾಜೀನಾಮೆ ನೀಡಿದ್ದಾರೆ.

ಭೈರತಿ ಬಸವರಾಜು ಪ್ರತಿನಿಧಿಸುವಕೆ.ಆರ್.ಪುರ ಕ್ಷೇತ್ರ ವ್ಯಾಪ್ತಿಯಲ್ಲಿ ವೆಂಗಯ್ಯನಕೆರೆ, ಗಂಗಶೆಟ್ಟಿಕೆರೆ, ಕೌದನಹಳ್ಳಿಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಪ್ಪಿಸಲು ಮಲಿನ ನೀರು ಶುದ್ಧೀಕರಣ ಘಟಕಗಳು(ಎಸ್‌ಟಿಪಿ) ನಿರ್ಮಾಣ ಆಗಬೇಕಿದೆ.

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ 5 ಹಳ್ಳಿಗಳು ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಇವೆ.ಇಲ್ಲಿಗೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಇದಕ್ಕಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ನಿತ್ಯ ತಿಣುಕಾಡಬೇಕಾಗಿದೆ.

ಮಾರುಕಟ್ಟೆ ಕಟ್ಟಡಕ್ಕಾಗಿ ಇಲ್ಲಿ 5 ಎಕರೆ 20 ಗುಂಟೆ ಜಾಗ ಮೀಸಲಿಡಲಾಗಿದೆ. ಇದರ ಬಹುತೇಕ ಭಾಗ ಒತ್ತುವರಿಯಾಗಿದೆ. ಉಳಿದ ಜಾಗ ಕಸದ ತೊಟ್ಟಿಯಂತಾಗಿದೆ. ಈ ನಡುವೆಯೇ ಬೆಳಿಗ್ಗೆ ಜನಜಂಗುಳಿ ನಡುವೆ ವ್ಯಾಪಾರ ವಹಿವಾಟು ನಡೆಯುತ್ತದೆ.₹60 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂಬ ಪ್ರಸ್ತಾವ ನನೆಗುದಿಗೆ ಬಿದ್ದಿದೆ.ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಸಬೇಕೆಂಬ ಪ್ರಸ್ತಾಪವೂ ಹಾಗೇ ಉಳಿದಿದೆ ಎನ್ನುತ್ತಾರೆ ಕೆ.ಆರ್.ಪುರದ ವೆಂಕಟೇಶ್.

ಮುನಿರತ್ನ ಅವರು ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆ. ಜಾಲಹಳ್ಳಿ ಕ್ರಾಸ್, ಗೊರಗುಂಟೆ ಪಾಳ್ಯದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದರೂ, ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ರಾಜರಾಜೇಶ್ವರಿನಗರ ದ್ವಾರದ ಬಳಿಯೂ ಸಂಚಾರ ದಟ್ಟಣೆ ಪರಿಹಾರವಾಗಬೇಕಿದೆ.ಜೆ.ಪಿ. ಪಾರ್ಕ್, ಲಗ್ಗೆರೆ ಮತ್ತು ನಾಗರಬಾವಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಕಟ್ಟಡಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ.

ಎಸ್‌.ಟಿ. ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಏರೋಹಳ್ಳಿ ಮತ್ತು ದೊಡ್ಡಬಿದರಕಲ್ಲಿನಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ವಿತರಿಸಲಾಗುತ್ತಿದೆ. ಮುತ್ತಯ್ಯನಪಾಳ್ಯ, ಅಂದರಹಳ್ಳಿ, ಬಿಳೇಕಲ್ಲು, ಏರೋಹಳ್ಳಿ, ಕರಿವೋಬನಹಳ್ಳಿ, ಹೊಸಹಳ್ಳಿಯಲ್ಲಿ ನಿರ್ವಸತಿಗರು ಹಕ್ಕು ಪತ್ರಗಳಿಗಾಗಿ ಸರ್ಕಾರಿ ಕಚೇರಿಗಳ ಬಾಗಿಲು ಸವೆಸುತ್ತಿದ್ದಾರೆ.

ರಾಜರಾಜೇಶ್ವರಿನಗರ ಮತ್ತು ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿಕೊಳಚೆ ನಿರ್ಮೂಲನಾ ಮಂಡಳಿ, ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಯಡಿ 4,000 ಮನೆಗಳು ನಿರ್ಮಾಣವಾಗುತ್ತಿವೆ. ಬಿಲ್ ಪಾವತಿಯಾಗದ ಕಾರಣಕ್ಕೆ ಸಾವಿರಾರು ಮನೆಗಳು ಅರ್ಧಕ್ಕೆ ನಿಂತಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ರಾಮಲಿಂಗಾರೆಡ್ಡಿ ಅವರು ಪ್ರತಿನಿಧಿಸುವ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಕೋರಮಂಗಲ, ಎಚ್‌.ಎಸ್.ಆರ್ ಲೇಔಟ್ ರೀತಿಯ ಅಭಿವೃದ್ಧಿ ಹೊಂದಿದ ಬಡಾವಣೆಗಳಿದ್ದರೂ, ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಉದ್ಬವವಾಗುವುದು ತಪ್ಪಿಲ್ಲ. ಮೆಟ್ರೊ ರೈಲು ಮಾರ್ಗದ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವ ಕಾರಣ ಟ್ರಾಫಿಕ್ ಸಮಸ್ಯೆ ದುಪ್ಪಟ್ಟಾಗಿದೆ. ಈ ಭಾಗದ ಪ್ರಮುಖ ವ್ಯಾಪಾರ ಕೇಂದ್ರವಾದ ಮಡಿವಾಳ ಮಾರುಕಟ್ಟೆಯಲ್ಲಿ ಸ್ವಲ್ಪ ಮಳೆ ಬಂದರೂ‌ ಕೆಸರು ಗದ್ದೆಯಲ್ಲಿ ಸಂಚರಿಸಿದ ಅನುಭವವಾಗುತ್ತದೆ. 400 ಹೊಸ ಮಳಿಗೆಗಳ ನಿರ್ಮಾಣ ಯೋಜನೆಯಲ್ಲಿ 100 ಮಳಿಗೆಗಳ ನಿರ್ಮಾಣವಾಗಿವೆ. ಉಳಿದ ಮಳಿಗೆಗಳ ನಿರ್ಮಾಣದ ನಿರೀಕ್ಷೆಯಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರಿಗಳಿದ್ದಾರೆ.

ರೋಷನ್ ಬೇಗ್ ಪ್ರತಿನಿಧಿಸುವ ಶಿವಾಜಿನಗರ ಕ್ಷೇತ್ರವು ನಗರದ ಮಧ್ಯ ಭಾಗದಲ್ಲಿದೆ. ಒಂದೆಡೆ ಪ್ರತಿಷ್ಠಿತ ಬಡಾವಣೆಗಳಿದ್ದರೆ, ಕಿಷ್ಕಿಂದೆಯಂತಹ ಸ್ಲಂ ಕೂಡ ಇವೆ. ಈ ಕ್ಷೇತ್ರದಲ್ಲಿ ಸಂಚಾರ ದಟ್ಟಣೆಯೇ ಪ್ರಮುಖ ಸಮಸ್ಯೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಸಬ್ ಅರ್ಬನ್ ರೈಲು, ಮೆಟ್ರೊ ರೈಲು ಸೇರಿ ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ಹಬ್ ನಿರ್ಮಿಸುವ ಯೋಜನೆ ಕಾರ್ಯಗತವಾಗಬೇಕಿದೆ.ಮೂಲ ಸೌಕರ್ಯಗಳ ಕೊರತೆಯಿಂದ ರಸೆಲ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕುಸಿಯುತ್ತಿದೆ.

ಕೆ. ಗೋಪಾಲಯ್ಯ ಪ್ರತಿನಿಧಿಸುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜನ ಮಳೆ ಬಂದರೆ ಜೀವ ಬಿಗಿ ಹಿಡಿದು ವಾಸಿಸುತ್ತಾರೆ. ರಾಜಕಾಲುವೆಯ ಒಂದು ಭಾಗದ ತಡೆಗೋಡೆ ಎತ್ತರಿಸಲಾಗಿದೆಯಾದರೂ, ಜೋರು ಮಳೆ ಬಂದರೆ ಮನೆಗಳು ಮುಳುಗುವ ಆತಂಕ ನಿವಾಸಿಗಳನ್ನು ಕಾಡುತ್ತಿದೆ. ನಂದಿನಿ ಲೇಔಟ್‌ ಸೆಂಟ್ರಲ್ ಉದ್ಯಾನದಲ್ಲಿ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಕೃಷಿ ಚಟುವಟಿಕೆ ಆರಂಭವೇ ಆಗಿಲ್ಲ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರವನ್ನು ಎಂಟಿಬಿ ನಾಗರಾಜ್ ಪ್ರತಿನಿಧಿಸುತ್ತಿದ್ದಾರೆ. ಮಳೆ ಇಲ್ಲದೆ ಈ ಕ್ಷೇತ್ರದಲ್ಲಿ ಕೆರೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. 1,500 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿ ನೀರಿಲ್ಲ. ಈ ವರ್ಷದ ಕೃಷಿ ಚಟುವಟಿಕೆ ಇನ್ನೂ ಆರಂಭವೇ ಆಗಿಲ್ಲ.

‘ಕೆ.ಸಿ. ವ್ಯಾಲಿಯಿಂದ ಶ್ರೀನಿವಾಸಪುರಕ್ಕೆ ಹೊಸಕೋಟೆ ಮಾರ್ಗವಾಗಿಯೇ ಪೈಪ್‌ ಲೈನ್ ಮೂಲಕ ನೀರು ಕೊಂಡೊಯ್ಯಲಾಯಿತು. ಆದರೆ, ಹೊಸಕೋಟೆಗೆ ನೀರು ಪೂರೈಸಲಿಲ್ಲ. ಎತ್ತಿನಹೊಳೆ ಯೋಜನೆಯಡಿ ನೀರು ಪೂರೈಸುವ ಭರವಸೆ ಹಾಗೇ ಉಳಿದಿದೆ’ ಎನ್ನುತ್ತಾರೆ ಹೊಸಕೋಟೆಯ ಜನರು.

ಶಾಸಕರು; ಕ್ಷೇತ್ರ
ಬೈರತಿ ಬಸವರಾಜ; ಕೆ.ಆರ್. ಪುರ
ಮುನಿರತ್ನ; ರಾಜರಾಜೇಶ್ವರಿ ನಗರ
ಎಸ್.ಟಿ. ಸೋಮಶೇಖರ್; ಯಶವಂತ‍ಪುರ
ರಾಮಲಿಂಗಾರೆಡ್ಡಿ; ಬಿಟಿಎಂ ಲೇಔಟ್‌
ಆರ್.ರೋಷನ್ ಬೇಗ್‌; ಶಿವಾಜಿನಗರ
ಎಂಟಿಬಿ ನಾಗರಾಜ್‌; ಹೊಸಕೋಟೆ
‌ಕೆ.ಗೋಪಾಲಯ್ಯ(ಜೆಡಿಎಸ್‌); ಮಹಾಲಕ್ಷ್ಮಿ ಲೇಔಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT