ಅಭಿನಂದನ್‌ ಆಗಮನ; ಎಲ್ಲೆಮೀರಿದ ಹರ್ಷ

ಬುಧವಾರ, ಮಾರ್ಚ್ 27, 2019
22 °C
ಹೆಮ್ಮೆಯ ಪೈಲಟ್‌ ಕಲಿತಿದ್ದ ಕೇಂದ್ರೀಯ ವಿದ್ಯಾಲಯದಲ್ಲೂ ವಿದ್ಯಾರ್ಥಿಗಳ ಸಂಭ್ರಮ

ಅಭಿನಂದನ್‌ ಆಗಮನ; ಎಲ್ಲೆಮೀರಿದ ಹರ್ಷ

Published:
Updated:
Prajavani

ಬೆಂಗಳೂರು: ಪಾಕ್ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಭಾರತಕ್ಕೆ ಆಗಮಿಸುತ್ತಿದ್ದಂತೆ ನಗರದ ಹಲವೆಡೆ ಸಂಭ್ರಮಿಸಲಾಯಿತು. ಸಿಹಿ ಹಂಚುವ ಮೂಲಕ ಹರ್ಷ ವ್ಯಕ್ತಪಡಿಸಲಾಯಿತು.

ರಾತ್ರಿ 9.20ರ ಸುಮಾರಿಗೆ ಅತ್ತ ವಾಘಾ (ಪಾಕ್ ನೆಲ) ಹಾಗೂ ಅಟ್ಟಾರಿ (ಭಾರತದ ನೆಲ) ಗಡಿಗೆ ಬಂದ ಅಭಿನಂದನ್ ಅವರನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಬರಮಾಡಿಕೊಳ್ಳುತ್ತಿದ್ದಂತೆಯೇ ಇತ್ತ, ಬೆಂಗಳೂರಿನ ಕೆ.ಆರ್. ವೃತ್ತದಲ್ಲಿ ಜನಪರ ವೇದಿಕೆಯ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿದರು. ಅಭಿನಂದನ್ ಮತ್ತು ದೇಶದ ಪರ ಘೋಷಣೆಗಳನ್ನು ಕೂಗಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹಾಗೂ ಕಾರ್ಯದರ್ಶಿ ಜಯದೇವ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು, ‘ವಂದೇ ಮಾತರಂ’ ಹಾಗೂ ‘ವೀರ ಸೇನಾನಿ ಅಭಿನಂದನ್’ ಎಂಬ ಘೋಷಣೆ ಕೂಗಿದರು.

ಎನ್‌.ರವಿಕುಮಾರ್‌ ಮಾತನಾಡಿ, ‘ಅಭಿನಂದನ್ ಬಿಡುಗಡೆ ಆಗಿದ್ದಕ್ಕೆ ಇಡೀ ದೇಶಕ್ಕೆ ಸಂತೋಷವಾಗಿದೆ. ಪಾಕಿಸ್ತಾನ ಇನ್ನಾದರೂ ಪಾಠ ಕಲಿಯಲಿ ಎಂದು ಪ್ರಪಂಚದ ಎಲ್ಲ ದೇಶಗಳು ಬಯಸುತ್ತಿವೆ’ ಎಂದು ಹೇಳಿದರು.

ಅಭಿನಂದನ್ ಕಲಿತ ಶಾಲೆಯಲ್ಲಿ ಸಂಭ್ರಮ: ಅಭಿನಂದನ್ ಅವರು ಬೆಂಗಳೂರಿನ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯ ಹಾಗೂ ಎನ್‌ಎಎಲ್‌ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ಪಡೆದಿದ್ದಾರೆ. ಅಭಿನಂದನ್ ಬಿಡುಗಡೆಯಾಗುತ್ತಿದ್ದಂತೆ ಎರಡೂ ಶಾಲೆಗಳಲ್ಲೂ ಸಂಭ್ರಮ ಮನೆ ಮಾಡಿತ್ತು.

ಶಾಲೆಯ ಆವರಣಗಳಲ್ಲಿ ಅಭಿನಂದನ್ ಭಾವಚಿತ್ರ ಹಾಗೂ ಅವರ ಸಾಧನೆಯನ್ನು ಸಾರುವ ಪೋಸ್ಟರ್‌ಗಳನ್ನು ಶುಕ್ರವಾರ ಪ್ರದರ್ಶಿಸಲಾಗಿತ್ತು. ಸಭೆ ಸೇರಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಅಭಿನಂದನ್ ಪರ ಘೋಷಣೆ ಕೂಗಿದರು. 

‘ಅಭಿನಂದನ್ ಅವರ ತಂದೆ ಸಹ ವಿಂಗ್ ಕಮಾಂಡರ್ ಆಗಿದ್ದರು. ಬೆಂಗಳೂರಿನಲ್ಲೂ ಕೆಲಸ ಮಾಡುತ್ತಿದ್ದರು. ಅದೇ ವೇಳೆ ಅಭಿನಂದನ್, ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ 8, 9 ಹಾಗೂ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1998ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ಅಭಿನಂದನ್, ಎನ್‌ಎಎಲ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದರು’ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಪ್ರಾಂಶುಪಾಲ ಎನ್‌.ಮನೋಹರನ್, ‘ಅಭಿನಂದನ್, ನಮ್ಮ ಶಾಲೆಯ ಹಳೇ ವಿದ್ಯಾರ್ಥಿ. ಅವರು ಬಿಡುಗಡೆ ಆಗುತ್ತಿದ್ದಂತೆ ಶಾಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಅವರ ಸಾಧನೆ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಲಾಯಿತು’ ಎಂದರು.

ಅಭಿನಂದನ್ ವಿದ್ಯಾರ್ಥಿಯಾಗಿದ್ದ ವೇಳೆ ಪ್ರಾಂಶುಪಾಲರಾಗಿದ್ದ ಆರ್‌.ಯು.ಪಾಟೀಲ, ‘ಅಭಿನಂದನ್ ಜಾಣ ವಿದ್ಯಾರ್ಥಿ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲೂ ಮುಂದಿದ್ದ. ಆತನಿಗೆ ’ಆಲ್‌ರೌಂಡರ್‌‘ ಎಂದೇ ಕರೆಯುತ್ತಿದ್ದೆವು’ ಎಂದು ಹಳೇ ದಿನಗಳನ್ನು ಮೆಲುಕು ಹಾಕಿದರು.

‘ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ದೇಶ ಮೆಚ್ಚುವ ಹೀರೊ ಆಗಿದ್ದಾನೆ.  ಇದು ನಮ್ಮ ಶಾಲೆಗೆ ಹೆಮ್ಮೆ ವಿಷಯ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !