ಕಲೆ, ಸಾಹಿತ್ಯದ ನಡುವೆ ಕೇಳುತ್ತಿದೆ ‘ಸೀಟಿ’ ಸದ್ದು!

ಮಂಗಳವಾರ, ಏಪ್ರಿಲ್ 23, 2019
27 °C
ಬೆಳಿಗ್ಗೆ ಸಮಾಲೋಚನೆ ಸಭೆ l ಮಧ್ಯಾಹ್ನ ಮಾಧ್ಯಮ ಸಂದರ್ಶನ l ಸಂಜೆ ಪ್ರಚಾರ

ಕಲೆ, ಸಾಹಿತ್ಯದ ನಡುವೆ ಕೇಳುತ್ತಿದೆ ‘ಸೀಟಿ’ ಸದ್ದು!

Published:
Updated:

ಬೆಂಗಳೂರು: ಆ ಗೋಡೆಯ ಮೇಲೆ ಬಸವಣ್ಣ, ಪೆರಿಯಾರ್, ಅಂಬೇಡ್ಕರ್‌, ಕುವೆಂಪು, ಬೇಂದ್ರೆ ಅವರಿಂದ ಹಿಡಿದು, ಅಡಿಗ, ನರಸಿಂಹಸ್ವಾಮಿ, ಕೀರ್ತಿನಾಥ ಕುರ್ತಕೋಟಿ, ಲಂಕೇಶ್‌, ಸಿದ್ದಲಿಂಗಯ್ಯ ಹೀಗೆ ತಲೆಮಾರುಗಳ ಸಾಧಕರ ಪಟ
ಗಳು ತೂಗುಡುತ್ತಿದ್ದವು. ಅಲ್ಲದೆ, ಕಲೆ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವು ಸೂಕ್ತಿಗಳುಳ್ಳ ಪುಟ್ಟ ಪುಟ್ಟ ಪಟಗಳೂ ಅಲ್ಲಿದ್ದವು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಅವರ ಕಚೇರಿ ಗೋಡೆಗಳು ಅವರ ರಾಜಕೀಯ ನಿಲುವುಗಳ ಬಗ್ಗೆ ಸ್ಪಷ್ಟ ಸಂದೇಶ ನೀಡುವಂತಿದ್ದವು.

ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಗಡಿಬಿಡಿಯ ನಡುವೆ ತುಸು ಬಿಡುವು. ಆದರೂ, ಕಚೇರಿ ಮಾತ್ರ ಮಾಧ್ಯಮದವರಿಂದ, ಕಾರ್ಯಕರ್ತರಿಂದ ತುಂಬಿತ್ತು. ಬೆಂಬಲಿಗರಂತೂ ಬಹಳ ಹುರುಪಿನಿಂದ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಕಚೇರಿ ತಲುಪಿದಾಗ ಪ್ರಕಾಶ್ ರಾಜ್‌ ಬೇರೆ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಅವರಿಗಾಗಿ ಪತ್ರಕರ್ತರ ಸಮೂಹ ತುಂಬಾ ಹೊತ್ತಿನಿಂದ ಕಾದು ಕುಳಿತಿತ್ತು.

ಸುಮಾರು 12 ಗಂಟೆ ಆಗಿರಬಹುದು. ಇನ್ನೇನು ಪ್ರಕಾಶ್‌ ರಾಜ್‌ ಅವರು ಬರುತ್ತಾರೆ ಎಂದು ಕರೆ ಬಂದ ಕೂಡಲೇ ಮತ್ತಷ್ಟು ಚುರುಕು ಹೆಚ್ಚಿತು. ನಮಗೆ ಮೊದಲ ಸಂದರ್ಶನ ಎಂಬಂತೆ ಬಂದವರೆಲ್ಲ ಆಗ್ರಹಿಸ ತೊಡಗಿದರು. ಎಲ್ಲರ ಕಾಯುವಿಕೆ ನಡುವೆ ಅವರು ಬಂದರು ನಗು ಸೂಸುತ್ತಾ. ಬಂದವರೇ ಎಲ್ಲರ ಕೈ ಕುಲುಕಿ ಕೊಠಡಿ ಹೊಕ್ಕೊಡನೆ ಎಲ್ಲರೂ ಅವರ ಹಿಂದೆ ಓಡಿದರು. ಆಗ ಮಗಳು ಪೂಜಾ, ‘ಅವರು ವಾಶ್‌ರೂಮ್‌ಗೆ ಹೋಗಲು ಬಿಡಿ, ಸ್ವಲ್ಪ ರೆಸ್ಟ್‌ ಮಾಡಲಿ, ಎಲ್ಲರಿಗೂ ಸಂದರ್ಶನ ನೀಡುತ್ತಾರೆ’ ಎಂದು ಮನವಿ ಮಾಡಿದರು.

ಪ್ರಕಾಶ್‌ ರಾಜ್‌ ಅವರ ಪ್ರೀತಿಯ ನಾಯಿ ‘ಸ್ಕೈ’ ಕಚೇರಿಯಲ್ಲಿ ಓಡಾಡಿಕೊಂಡಿತ್ತು. ಕಚೇರಿಯ ಸಿಬ್ಬಂದಿ ‘ಸ್ಕೈ’ ಎಂದು ಕರೆದಾಗಲೊಮ್ಮೆ ಅತ್ತ ಮೂತಿ ಹೊರಳಿಸುತ್ತಿದ್ದ ಅದು, ಒಮ್ಮೆ ಕಣ್ಣು ಮಿಟುಕಿಸುತ್ತಿತ್ತು.

ಎಲ್ಲೆಡೆ ಗಡಿಬಿಡಿ ವಾತಾವರಣ. ಪ್ರಚಾರಕ್ಕೆ ಹೋಗಬೇಕು, ಅದಕ್ಕಾಗಿ ತಯಾರಿ, ಬಂದವರಿಗೆ ನೀರು, ಕಾಫಿ ವ್ಯವಸ್ಥೆ. ‘ಸರ್‌, ತುಂಬಾ ಒಳ್ಳೆಯವರು. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಾರೆ. ಪ್ರಚಾರಕ್ಕೆ ಹೋದ ಕಡೆಯಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮಗೆ ಅನ್ನಿಸಿರುವ ಹಾಗೆ, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಸರ್‌ ಮಧ್ಯೆ ನೇರ ಹಣಾಹಣಿ ಇದೆ. ಗೆಲುವು ಸಿಗುತ್ತದೆ ಎನ್ನುವ ನಂಬಿಕೆ ಇದೆ’ ಎನ್ನುತ್ತಾರೆ ಅವರ ಬೆಂಬಲಿಗರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ರೇಡಿಯೊ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದರು. 3ರ ಹೊತ್ತಿಗೆ ಶಿವಾಜಿನಗರದ ನಾಸಿರ್‌ ಸುಭಾನ್‌ದಲ್ಲಿ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ, ಮತಯಾಚನೆ ಮಾಡಿದರು. ಸಂಜೆ 4ಕ್ಕೆ ಮಹದೇವಪುರದಲ್ಲಿ ಪ್ರಚಾರ ನಡೆಸಿದರು. ಮಾತಿಗೆ ಸಿಕ್ಕ ಸಾರ್ವಜನಿಕರಿಗೆ ‘ನಿಮ್ಮ ಬಡಾವಣೆಗೆ ನೀರು ಬರುತ್ತಾ, ಶಾಲೆ ಎಷ್ಟು ದೂರ ಇದೆ’ ಎಂದು ಕೇಳುತ್ತಿದ್ದ ಅವರು, ತಮಗೆ ಮತ ಹಾಕುವಂತೆ ವಿನಂತಿಸುತ್ತಿದ್ದರು. ಮೆರವಣಿಗೆ ಮುಂದೆ ಅವರ ಚುನಾವಣೆ ಗುರುತು ಸೀಟಿಯ ಪ್ರತಿಕೃತಿ ಹೊತ್ತ ಆಟೊ ಹೋಗುತ್ತಿತ್ತು.

‘ಸಮಸ್ಯೆಗೆ ಸ್ಪಂದಿಸುವ ಛಾತಿ ಇದೆ’

‘ಅಪ್ಪನಿಗೆ ಸುಮಾರು ಭಾಷೆ ಬರುತ್ತದೆ. ಜನರ ಸಮಸ್ಯೆಯನ್ನು ತಿಳಿದುಕೊಂಡು ಅವರ ಭಾಷೆಯಲ್ಲೇ ಸ್ಪಂದಿಸುವ ಛಾತಿ ಅವರಿಗಿದೆ. ಅವರು ಖಂಡಿತ ಗೆಲ್ಲುತ್ತಾರೆ’ ಎಂದು ಪ್ರಕಾಶ್‌ ರಾಜ್‌ ಅವರ ಪುತ್ರಿ ಹಾಗೂ ಪ್ರಚಾರದ ಸಾಮಾಜಿಕ ಜಾಲತಾಣ ನಿರ್ವಹಣೆಯ ಮುಖ್ಯಸ್ಥೆ ಪೂಜಾ ವಿಶ್ವಾಸ ವ್ಯಕ್ತಪಡಿಸಿದರು.

‘ಅವರ ಪ್ರಶ್ನೆಗೆ ಉತ್ತರಿಸಲಾಗದೇ ಅವರನ್ನು ಹಿಂದೂ ವಿರೋಧಿ ಎಂದೆಲ್ಲಾ ಕರೆದರು. ಆದರೆ, ಅವರು ಹಿಂದೂ ವಿರೋಧಿ ಅಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ನಮ್ಮ ಪ್ರಚಾರದ ನಿಲುವು ಇಷ್ಟೇ. ನಾವು ಯಾರ ವಿರುದ್ಧವೂ ಕೆಟ್ಟ ಭಾಷೆ ಬಳಸುವುದಿಲ್ಲ. ಅಪಪ್ರಚಾರವೂ ಮಾಡುವುದಿಲ್ಲ. ಅಪ್ಪ ಮೊದಲೇ ಹೇಳಿದ್ದಾರೆ; ಗೆಲುವು, ಸೋಲು ಮುಖ್ಯವಲ್ಲ. ಬಿಜೆಪಿ ಬಿಟ್ಟರೆ ಕಾಂಗ್ರೆಸ್‌, ಕಾಂಗ್ರೆಸ್‌ ಬಿಟ್ಟರೆ ಬಿಜೆಪಿ ಎನ್ನುವ ಮಿಥ್‌ ಒಡೆಯಬೇಕಿದೆ. ಇದಕ್ಕಾಗಿಯೇ ಅಪ್ಪ ಸ್ಪರ್ಧಿಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !