ಸೋಮವಾರ, ಫೆಬ್ರವರಿ 17, 2020
31 °C
ಪ್ರಕರಣ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆರೋಪಿಗಳು ಪರಾರಿ

ಆಯುರ್ವೇದ ವೈದ್ಯನ ಅಪಹರಿಸಿ ಸುಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಯುರ್ವೇದ ವೈದ್ಯ ಎಂ.ರವಿಕುಮಾರ್ ಎಂಬುವರನ್ನು ಅಪಹರಿಸಿ ಕಾರಿನಲ್ಲೇ ಚಿತ್ರಹಿಂಸೆ ನೀಡಿದ ದುಷ್ಕರ್ಮಿಗಳು, ಬಳಿಕ ನಗದು ಹಾಗೂ ಉಂಗುರಗಳನ್ನು ಬಿಚ್ಚಿಕೊಂಡು ಅವರನ್ನು ನಾಗರಬಾವಿ ಸರ್ಕಲ್‌ ಬಳಿ ಬಿಟ್ಟು ಹೋಗಿದ್ದಾರೆ.

ಫೆ.18ರ ರಾತ್ರಿ ಈ ಘಟನೆ ನಡೆದಿದೆ. ‘ನಿಮ್ಮ ಹತ್ಯೆಗೆ ವೈದ್ಯರೊಬ್ಬರು ₹5 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು. ಅದೇ ಕಾರಣಕ್ಕೆ ನಿಮ್ಮನ್ನು ಅಪಹರಿಸಿದ್ದೇವೆ’ ಎಂದು ದುಷ್ಕರ್ಮಿಗಳು ಹೇಳಿದ್ದಾಗಿ ರವಿಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಸುಪಾರಿ ಕೊಟ್ಟ ವೈದ್ಯ ಹಾಗೂ ಅಪಹರಣಕಾರರ ಬಂಧನಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಗ್ರಹಾರ ದಾಸರಹಳ್ಳಿ ನಿವಾಸಿಯಾದ ರವಿಕುಮಾರ್, ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಕ್ಲಿನಿಕ್ ನಡೆಸುತ್ತಾರೆ. ಫೆ.18ರ ರಾತ್ರಿ 10 ಗಂಟೆ ಸುಮಾರಿಗೆ ಅವರು ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು.

‘ಮಾಗಡಿ ರಸ್ತೆಯ ಕೆಎಚ್‌ಬಿ ‌ಕಾಲೊನಿಯ ಕೆಳಸೇತುವೆಯಲ್ಲಿ ಅಡ್ಡಗಟ್ಟಿದ ಮೂವರು, ಏಕಾಏಕಿ ತೊಡೆಗೆ ಚಾಕು ಚುಚ್ಚಿದರು. ನಂತರ, ‘ನಿನ್ನೊಂದಿಗೆ ಏನೋ ಮಾತನಾಡಬೇಕು. ಸುಮ್ಮನೆ ಬಂದು ಕಾರಿನಲ್ಲಿ ಕುಳಿತುಕೊ’ ಎಂದು ಬೆದರಿಸಿದರು. ಜೀವ ಭಯದಿಂದ ಕಾರು ಹತ್ತಿದೆ. ಆ ನಂತರ ರಾಮನಗರಕ್ಕೆ ಕರೆದೊಯ್ದರು. ‘ನಿನ್ನನ್ನು ಮುಗಿಸಲು ವೈದ್ಯರೊಬ್ಬರು ಸುಪಾರಿ ಕೊಟ್ಟಿದ್ದಾರೆ. ನೀನು ₹6 ಲಕ್ಷ ಕೊಟ್ಟುಬಿಟ್ಟರೆ ಏನೂ ಮಾಡುವುದಿಲ್ಲ’ ಎನ್ನುತ್ತ ಕುತ್ತಿಗೆ ಹತ್ತಿರ ಚಾಕು ಹಿಡಿದು ಬೆದರಿಸಿದರು’ ಎಂದು ರವಿಕುಮಾರ್ ದೂರಿದ್ದಾರೆ.

‘ನಾನು ಆಯುರ್ವೇದ ವೈದ್ಯ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ಹೇಗಾದರೂ ಮಾಡಿ ₹2 ಲಕ್ಷ ಹೊಂದಿಸಿಕೊಡುತ್ತೇನೆ ಎಂದು ಗೋಗರೆದೆ. ಅದಕ್ಕೆ ಒಪ್ಪಿದ ಅವರು, ನನ್ನಿಂದಲೇ ತಂಗಿಗೆ ಕರೆ ಮಾಡಿಸಿ ಹಣ ಹೊಂದಿಸುವಂತೆ ಹೇಳಿಸಿದರು. ಆನಂತರ ಚಿನ್ನ ಹಾಗೂ ವಜ್ರದ ಎರಡು ಉಂಗುರಗಳನ್ನು ಬಿಚ್ಚಿಕೊಂಡು, ಪರ್ಸ್‌ನಲ್ಲಿದ್ದ ₹12 ಸಾವಿರ ನಗದನ್ನೂ ಕಸಿದುಕೊಂಡರು.’

‘ಇದೇ ವೇಳೆ ಒಬ್ಬಾತನಿಗೆ ಯಾರೋ ಕರೆ ಮಾಡಿದ್ದರು. ಆತನೊಂದಿಗೆ ಮಾತನಾಡಿ ಕರೆ ಸ್ಥಗಿತಗೊಳಿಸಿದ ಬಳಿಕ, ‘ನಿನ್ನ ತಂಗಿ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ನಿಮ್ಮ ಮನೆ ಹತ್ತಿರ ಬಂದಿದ್ದಾರಂತೆ. ನೀನು ಜೀವಂತವಾಗಿ ಮನೆಗೆ ಹೋಗುವುದಿಲ್ಲ’ ಎಂದು ಬೆದರಿಸಿದ. ಆಗ ನಾನು, ‘ತಿಳಿಯದೆ ಆಕೆ ತಪ್ಪು ಮಾಡಿದ್ದಾಳೆ. ನಾನು ಹೋಗಿ ಎಲ್ಲವನ್ನೂ ಸರಿ ಮಾಡುತ್ತೇನೆ. ದೂರನ್ನೂ ಹಿಂಪಡೆಯುತ್ತೇನೆ’ ಎಂದೆ. ಅದಕ್ಕೆ ಒಪ್ಪಿ ವಾಪಸ್ ಬೆಂಗಳೂರಿಗೆ ಕರೆದುಕೊಂಡು ಬಂದರು’ ಎಂದು ರವಿಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ. 

ಪರಿಚಿತರಿಂದಲೇ ಸುಪಾರಿ?

‘ರಾತ್ರಿ 1.30ರ ಸುಮಾರಿಗೆ ನಾಗರಬಾವಿ ಸರ್ಕಲ್‌ ಬಳಿ ನನ್ನನ್ನು ಕಾರಿನಿಂದ ಇಳಿಸಿದ ಅವರು, ‘ನೀನು ಒಳ್ಳೆಯವನು. ನಿನ್ನ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಹೇಳಿದ ಮಾತಿನಂತೆ ನಡೆದುಕೊ’ ಎಂದು ಹೇಳಿ ಹೊರಟು ಹೋದರು. ನಂತರ ವಾಹನ ಸವಾರರೊಬ್ಬರ ನೆರವು ಪಡೆದು ಜಿ.ಎಂ.ಆಸ್ಪತ್ರಗೆ ದಾಖಲಾದೆ. ಪರಿಚಿತರೇ ಸುಪಾರಿ ಕೊಟ್ಟಿರುವ ಅನುಮಾನವಿದೆ’ ಎಂದು ರವಿಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು