ಗುರುವಾರ , ನವೆಂಬರ್ 21, 2019
22 °C

ಪೊಲೀಸರಿಗೇ ಅವಾಚ್ಯ ನಿಂದನೆ!

Published:
Updated:

ಬೆಂಗಳೂರು: ತನ್ನ ಬಳಿಯಿದ್ದ ಹಣವನ್ನು ಪೊಲೀಸರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸೆಲ್ಫಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಯುವಕನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ರಾಕೇಶ್ (22) ಬಂಧಿತ ಆರೋಪಿ. ಆತನಿಂದ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಒಂಬತ್ತನೇ ತರಗತಿ ಓದಿರುವ ರಾಕೇಶ್, ಮೂರು ವರ್ಷಗಳಿಂದ ಮೆಜೆ ಸ್ಟಿಕ್ ಸಮೀಪದಲ್ಲಿರುವ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳು ಗಳಿಂದ ಮಲ್ಲೇಶ್ವರದಲ್ಲಿರುವ ಹೋಟೆ ಲ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮದ್ಯ ವ್ಯಸನಿಯಾಗಿದ್ದ ಆತ, ಲೈಂಗಿಕ ಅಲ್ಪಸಂಖ್ಯಾತರ ಜತೆ ಸ್ನೇಹ ಬೆಳೆಸಿದ್ದ ಎಂದು ಪೊಲೀಸರು ಹೇಳಿದರು.

ಸೆ. 14ರಂದು ಆರೋಪಿ ಮೆಜೆಸ್ಟಿಕ್‍ನ ಬಸ್ ನಿಲ್ದಾಣದಲ್ಲಿ ಪರಿಚಯಸ್ಥ ಲೈಂಗಿಕ ಅಲ್ಪಸಂಖ್ಯಾತರೊಬ್ಬರ ಜೊತೆ ಅಸಭ್ಯವಾಗಿ ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಪೊಲೀಸ್ ಸಹಾಯವಾಣಿಗೆ ದೂರು ನೀಡಿದ್ದರು.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಪರಾರಿ ಯಾಗಲು ಯತ್ನಿಸಿದ್ದಾನೆ. ‌‌ಮದ್ಯದ ಅಮಲಿನಲ್ಲಿದ್ದ ಆತನನ್ನು ವಶಕ್ಕೆ ಪಡೆದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆತ, ಎರಡು ದಿನಗಳ ಬಳಿಕ ಪೊಲೀಸರ ಬಗ್ಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿದ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.

‘ಮಹದೇಶ್ವರ ಬೆಟ್ಟಕ್ಕೆ ಹೊರಟ್ಟಿದ್ದ ನನ್ನನ್ನು ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆ ಕರೆದೊಯ್ದು, ಹಣ ಕಸಿದುಕೊಂಡು ಬಿಟ್ಟಿದ್ದಾರೆ. ಅಂಥ ಪೊಲೀಸರನ್ನು ಬಿಡಬಾರದು’ ಎಂದು ನಿಂದಿಸಿದ್ದ. ಈ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾಡುಗೋಡಿಯ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಾಳಿ: ₹ 1 ಲಕ್ಷ ವಶ

ಸದಸ್ಯರಲ್ಲದ ಹಲವರು ಸೇರಿ ಕೊಂಡು ಜೂಜಾಟ ಆಡುತ್ತಿದ್ದ ಕ್ಲಬ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಕ್ಲಬ್‌ ಮಾಲೀಕರು ಸೇರಿ ಒಟ್ಟು 14 ಮಂದಿಯನ್ನು ಬಂಧಿಸಿ ₹ 1 ಲಕ್ಷ ವಶಪಡಿಸಿಕೊಂಡಿದ್ದಾರೆ.

ಲಗ್ಗೆರೆ ರಿಂಗ್‌ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.

ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)