ಒಂದೇ ದಿನ ಆರು ಮಂದಿ ದುರ್ಮರಣ

7
ಹುಟ್ಟುಹಬ್ಬ ಆಚರಣೆಗಾಗಿ ನಂದಿಬೆಟ್ಟಕ್ಕೆ ಹೊರಟಿದ್ದ ವೇಳೆ ಅಪಘಾತ l ಟೆಕಿ ಮೇಲೆ ಹರಿದ ಕಾರು

ಒಂದೇ ದಿನ ಆರು ಮಂದಿ ದುರ್ಮರಣ

Published:
Updated:
Deccan Herald

ಬೆಂಗಳೂರು: ನಗರದ ಮೂರು ಕಡೆ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತಗಳಲ್ಲಿ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಪಾಳ್ಯದ ಗೇಟ್ ಬಳಿ ಮಾರುತಿ ಓಮ್ನಿ ವ್ಯಾನ್‌ಗೆ ಇನೋವಾ ಕಾರು ಹಿಂದಿನಿಂದ ಗುದ್ದಿದ್ದರಿಂದ ವ್ಯಾನ್‌ನಲ್ಲಿದ್ದ ಸುಂದರ್ (24), ವೆಂಕಟೇಶ್ (25), ಸತೀಶ್ (23) ಹಾಗೂ ವಿಕಾಸ್ (22) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಸ್ನೇಹಿತರಾದ ಹೇಮಂತ್ (24), ಅಜಿತ್ (22), ಅವಿನಾಶ್ (22), ರವಿ (24), ಭರತ್‌ (23) ಗಾಯಗೊಂಡಿದ್ದಾರೆ. 

ಮೃತ ಯುವಕರು, ಆರ್‌.ಟಿ.ನಗರ ಸಮೀಪದ ಚೋಳನಾಯಕನಪಾಳ್ಯದ ನಿವಾಸಿಗಳು. ಸಭೆ–ಸಮಾರಂಭ ಹಾಗೂ ಮದುವೆಗಳಲ್ಲಿ ಹೂವಿನ ಅಲಂಕಾರ ಮಾಡುವ ಕೆಲಸ ಮಾಡುತ್ತಿದ್ದರು. ಸ್ನೇಹಿತ ಅವಿನಾಶ್‌ ಅವರ ಹುಟ್ಟುಹಬ್ಬವನ್ನು ನಂದಿಬೆಟ್ಟದಲ್ಲಿ ಆಚರಿಸುವುದಕ್ಕಾಗಿ ಮಾರುತಿ ವ್ಯಾನ್‌ನಲ್ಲಿ 9 ಮಂದಿ ಹೊರಟಿದ್ದರು.

‘ರಾತ್ರಿ 12 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಹೊರಟಿದ್ದ ಇನೋವಾ ಕಾರು, ಮಾರುತಿ ವ್ಯಾನ್‌ಗೆ ಹಿಂದಿನಿಂದ ಗುದ್ದಿತ್ತು. ಅದರ ರಭಸಕ್ಕೆ ವ್ಯಾನ್‌ ಜಖಂಗೊಂಡು ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಇನೋವಾ ಕಾರು ಚಾಲಕ ಮನೋಜ್‌ ಹಾಗೂ ಕಾರಿನಲ್ಲಿದ್ದ ಮಧು ಎಂಬುವರು ಗಾಯಗೊಂಡಿದ್ದಾರೆ. ಕಾರಿನಲ್ಲಿ ಏರ್‌ಬ್ಯಾಗ್‌ ಇದ್ದಿದ್ದರಿಂದ ಅವರ ಪ್ರಾಣ ಉಳಿದಿದೆ’ ಎಂದು ತಿಳಿಸಿದರು. 

ಟೆಕಿ ಸಾವು: ಸಿಂಗಸಂದ್ರ ಮೇಲ್ಸೇತುವೆಯಲ್ಲಿ ಮಂಗಳವಾರ ರಾತ್ರಿ 8.30 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವಾಚಸ್ಪತಿ ಎಂಬುವರು ಮೃತಪಟ್ಟಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಕಂಪನಿಯೊಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮಂಗಳವಾರ ರಾತ್ರಿ 8.30 ಗಂಟೆ ಸುಮಾರಿಗೆ ಸ್ಕೂಟರ್‌ನಲ್ಲಿ ಮನೆಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

‘ರಸ್ತೆ ವಿಭಜಕಕ್ಕೆ ಸ್ಕೂಟರ್‌ ಗುದ್ದಿದ್ದರಿಂದಾಗಿ ವಾಚಸ್ಪತಿ ಕೆಳಗೆ ಬಿದ್ದಿದ್ದರು. ಅದೇ ರಸ್ತೆಯಲ್ಲಿ ಹೊರಟಿದ್ದ ಕಾರೊಂದು ಅವರ ಮೈಮೇಲೆ ಹರಿದು ಹೋಗಿತ್ತು ಎನ್ನಲಾಗುತ್ತಿದೆ. ತನಿಖೆಯಿಂದಲೇ ನಿಖರ ಮಾಹಿತಿ ತಿಳಿಯಬೇಕಿದೆ’ ಎಂದು ಹುಳಿಮಾವು ಸಂಚಾರ ಪೊಲೀಸರು ಹೇಳಿದರು. 

ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು: ರಾಜಾಜಿನಗರ ಸಮೀಪದ ಬಸವೇಶ್ವರ ಕಾಲೇಜು ಬಳಿ ಮಂಗಳವಾರ ರಾತ್ರಿ 8.40 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮಹೇಂದ್ರ (19) ಎಂಬುವರು ಮೃತಪಟ್ಟಿದ್ದಾರೆ.

ರಾಜಾಜಿನಗರದ 3ನೇ ಹಂತದ ನಿವಾಸಿ ಮಹೇಂದ್ರ, ರಾಜಾನುಕುಂಟೆ ಎಸ್‌ವಿಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ. ಕೆಟಿಎಂ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

‘ಬೈಕ್‌ಗೆ ಕಾರು ಗುದ್ದಿದ್ದರಿಂದ ಅಪಘಾತ ಸಂಭವಿಸಿರುವ ಅನುಮಾನವಿದೆ. ಇದುವರೆಗೂ ಕಾರು ಪತ್ತೆಯಾಗಿಲ್ಲ’ ಎಂದು ರಾಜಾಜಿನಗರ ಸಂಚಾರ ಪೊಲೀಸರು ಹೇಳಿದರು.

ಸಿಗ್ನಲ್ ಇಲ್ಲದಿರುವುದೇ ಕಾರಣ

ಕನ್ನಮಂಗಲ ಪಾಳ್ಯದ ಗೇಟ್ ಬಳಿ ಸೂಕ್ತ ಸಂಚಾರ ಸಿಗ್ನಲ್‌ಗಳಿಲ್ಲ. ಈ ಗೇಟ್‌ ರಸ್ತೆಯು ಇಳಿಜಾರಿನಲ್ಲಿದ್ದು, ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಹೋಗುವಾಗ ವಾಹನಗಳು ಪರಸ್ಪರ ಗೋಚರಿಸುವುದಿಲ್ಲ. ಇದರಿಂದಲೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ರಸ್ತೆಗೆ ಇತ್ತೀಚೆಗಷ್ಟೇ ಡಾಂಬರೀಕರಣ ಮಾಡಲಾಗಿದೆ. ರಸ್ತೆ ಸಂಚಾರದ ಸುರಕ್ಷತಾ ಟ್ರ್ಯಾಕ್ (ಬಿಳಿಗೆರೆ) ಸಹ ಹಾಕಿಲ್ಲ. ಯಾವ ವಾಹನ ಯಾವ ಕಡೆಗೆ ಹೋಗಬೇಕೆಂಬ ಮಾರ್ಗಸೂಚಿಯೂ ಇಲ್ಲ. ನಾಲ್ಕು ದಿನಗಳಲ್ಲಿ ಇದೇ ಸ್ಥಳದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಭುವನಹಳ್ಳಿ ನರ್ಸರಿಯ ಶ್ರೀನಿವಾಸ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !