ವಾಹನ ಡಿಕ್ಕಿ; ಅಸುನೀಗಿದ ಜಿಂಕೆ

ಶನಿವಾರ, ಮೇ 25, 2019
27 °C
ತುರಹಳ್ಳಿ ಅರಣ್ಯ: ಹರಿಣಗಳ ಸಾವಿನ ಸರಣಿಗೆ ಕೊನೆ ಎಂದು?

ವಾಹನ ಡಿಕ್ಕಿ; ಅಸುನೀಗಿದ ಜಿಂಕೆ

Published:
Updated:
Prajavani

ಬೆಂಗಳೂರು: ಗರ್ಭ ಧರಿಸಿದ್ದ ಹೆಣ್ಣು ಜಿಂಕೆಯೊಂದು ತುರಹಳ್ಳಿ ಕಾಡಿನಲ್ಲಿ ಬೀದಿನಾಯಿ ದಾಳಿಗೆ ಸಿಲುಕಿ ಮೃತಪಟ್ಟ ಘಟನೆಯ ಕಹಿನೆನಪು ಮಾಸುವ ಮುನ್ನವೇ, ಗಂಡು ಜಿಂಕೆಯೊಂದು ವಾಹನ ಡಿಕ್ಕಿ ಹೊಡೆದು ಭಾನುವಾರ ಕೊನೆಯುಸಿರೆಳೆದಿದೆ. 

ಜಿಂಕೆಯ ಮೃತದೇಹ ದೊಡ್ಡಬೆಲೆ ಗ್ರಾಮದ ಬಳಿ ನೈಸ್‌ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದೆ. ನಗರದ ಸೆರಗಿನಲ್ಲಿರುವ ತುರಹಳ್ಳಿ ಕಾಡಿನಂಚಿನಲ್ಲಿ ಮೂರು ತಿಂಗಳಲ್ಲಿ ಸತ್ತಿರುವ ಐದನೇ ಜಿಂಕೆ ಇದು.

‘ರಸ್ತೆ ದಾಟುವ ವೇಳೆ ವೇಗವಾಗಿ ಸಾಗಿ ಬಂದ ವಾಹನ ಡಿಕ್ಕಿ ಹೊಡೆದು ಜಿಂಕೆ ಮೃತಪಟ್ಟಿದೆ. ಸತ್ತಿರುವ ಜಿಂಕೆಗೆ ಎರಡೂವರೆ ವರ್ಷ ಆಗಿರಬಹುದು’ ಎಂದು ನಗರ ಜಿಲ್ಲೆಯ ದಕ್ಷಿಣ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶನಿವಾರವಷ್ಟೇ ಬೀದಿನಾಯಿಗಳು ತುರಹಳ್ಳಿ ಕಾಡಿನಿಂದ ಜಿಂಕೆಯೊಂದನ್ನು ಅಟ್ಟಿಸಿಕೊಂಡು ಬಂದು ಕೊಂದು ಹಾಕಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯಲ್ಲಿ ಸುಮಾರು 3 ತಿಂಗಳ ಮರಿಯೂ ಇತ್ತು. 

ಬಿ.ಎಂ.ಕಾವಲ್‌, ಯು.ಎಂ.ಕಾವಲ್‌, ತುರಹಳ್ಳಿ ಕಿರು ಅರಣ್ಯ, ಕಿರುಹಳ್ಳಿ ರಾಜ್ಯ ಮೀಸಲು ಅರಣ್ಯಗಳು ಈ ಪ್ರದೇಶದಲ್ಲಿವೆ. ನೈಸ್‌ ರಸ್ತೆ ನಿರ್ಮಾಣವಾದ ಬಳಿಕ ಕಗ್ಗಲೀಪುರ ವಲಯದ ವ್ಯಾಪ್ತಿಯ ಸಂರಕ್ಷಿತ ಅರಣ್ಯಗಳಲ್ಲಿರುವ ವನ್ಯಜೀವಿಗಳು ಅಪಾಯಕ್ಕೆ ಸಿಲುಕಿವೆ. 2011ರ ಈಚೆಗೆ ನೈಸ್‌ ರಸ್ತೆಯಲ್ಲಿ ಒಟ್ಟು ಮೂರು ಚಿರತೆಗಳು ಹಾಗೂ ಎರಡು ಜಿಂಕೆಗಳು ವಾಹನ ಡಿಕ್ಕಿ ಹೊಡೆದು ಮೃತಪಟ್ಟಿವೆ ಎನ್ನುತ್ತವೆ ಅರಣ್ಯ ಇಲಾಖೆಯ ದಾಖಲೆಗಳು.

ಈ ಪ್ರದೇಶದಲ್ಲಿ ಸಣ್ಣ ಪುಟ್ಟ ಸಸ್ತನಿಗಳು, ಹಾವುಗಳು ವಾಹನದಡಿ ಸಿಲುಕಿ ಸಾಯುತ್ತವೆ. ಆದರೆ, ಅರಣ್ಯ ಇಲಾಖೆ ಅವುಗಳನ್ನು ಲೆಕ್ಕ ಇಡುವುದಿಲ್ಲ. ಗಾಯಗೊಂಡು ಕಾಡಿನೊಳಗೆ ಹೋಗಿ ವನ್ಯಜೀವಿಗಳು ಸತ್ತ ಅನೇಕ ಉದಾಹರಣೆಗಳಿವೆ.

‘ನೈಸ್‌ ರಸ್ತೆ ಇಲ್ಲಿನ ಕಾಡನ್ನು ಸೀಳಿಕೊಂಡು ಹಾದು ಹೋಯಿತು. ಮುಂಗುಸಿ, ಕಾಡುಹಂದಿ, ಉದ್ದ ಬಾಲದ ಮರ ಇಲಿ ಮುಂತಾದ ಪ್ರಾಣಿಗಳು, ನವಿಲುಗಳು ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿ ರಸ್ತೆ ಅಪಘಾತದಿಂದಾಗಿ ಕೊನೆಯುಸಿರೆಳೆದಿವೆ. ಕಳೆದ ಮಳೆಗಾಲದಲ್ಲಿ ನೀರು ಕಾಗೆ ಹಾಗೂ ಗಿಡುಗ ವಾಹನದಡಿ ಬಿದ್ದು ಸತ್ತಿದ್ದವು. ಈ ಪ್ರದೇಶದಲ್ಲಿ 28 ಜಾತಿಯ ಹಾವುಗಳಿವೆ. ಅವು ವಾಹನದಡಿ ಸಿಲುಕಿ ಸಾಯುವುದು ಮಾಮೂಲಿ ಎಂಬಂತಾಗಿದೆ’ ಎನ್ನುತ್ತಾರೆ ಗೌರವ ವನ್ಯಜೀವಿ ಪರಿಪಾಲಕ ಪ್ರಸನ್ನ ಕುಮಾರ್‌. 

‘ಇಲ್ಲಿನ ಕಾಡುಗಳೂ ಆನೆ ಕಾರಿಡಾರ್‌ ವ್ಯಾಪ್ತಿಯಲ್ಲಿ ಬರುತ್ತವೆ. ಒಂದು ಕಾಲದಲ್ಲಿ ಬನ್ನೇರುಘಟ್ಟ, ಮಂಚಬೆಲೆ, ಸಾವನದುರ್ಗ ನಡುವೆ ಸಂಚರಿಸುತ್ತಿದ್ದ ಆನೆಗಳು ಈ ಭಾಗದಲ್ಲೂ ಅಡ್ಡಾಡುತ್ತಿದ್ದವು. ಆದರೆ, ಇಲ್ಲಿ ರಸ್ತೆಗಳು ಅಭಿವೃದ್ಧಿ ಆದ ಬಳಿಕ ವನ್ಯಜೀವಿಗಳ ಮುಕ್ತಸಂಚಾರಕ್ಕೆ ಸಂಚಕಾರ ಎದುರಾಗಿದೆ. ಇಲ್ಲಿನ ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

**

‘ವಾಹನಗಳ ವೇಗ ತಗ್ಗಿಸಲು ಕ್ರಮ’

ಕಾಡುಪ್ರಾಣಿಗಳು ರಸ್ತೆಗೆ ಬರದಂತೆ ತಡೆಯಲು ಸಾಧ್ಯವಿಲ್ಲ. ಅದರ ಬದಲು ನೈಸ್‌ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ವೇಗಮಿತಿ ಅಳವಡಿಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. 

‘ತುರಹಳ್ಳಿ ಅರಣ್ಯದೊಳಗೆ ಹಾದುಹೋಗುವ ಕೆಲವು ರಸ್ತೆಗಳಲ್ಲಿ ವೇಗನಿಯಂತ್ರಕಗಳನ್ನು ಅಳವಡಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಕಾಡು ಪ್ರದೇಶದಲ್ಲಿ ನೈಸ್‌ ರಸ್ತೆ ಹಾದು ಹೋಗುವ ಕಡೆ ವಾಹನಗಳ ವೇಗವನ್ನು ತಗ್ಗಿಸುವುದಕ್ಕೂ ಕ್ರಮಕೈಗೊಳ್ಳುತ್ತೇವೆ’ ಎಂದು ಬೆಂಗಳೂರು ನಗರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !