ಪ್ರತ್ಯೇಕ ಅಪಘಾತ: ಮೂವರ ಸಾವು

7
ಇಡ್ಲಿ ತಿನ್ನಲು ಬಿಡದಿಗೆ ಹೊರಟಿದ್ದ ವಿದ್ಯಾರ್ಥಿ ದುರ್ಮರಣ

ಪ್ರತ್ಯೇಕ ಅಪಘಾತ: ಮೂವರ ಸಾವು

Published:
Updated:
Deccan Herald

ಬೆಂಗಳೂರು:‌ ಕೆಂಗೇರಿ, ಕೆ.ಆರ್.ಪುರ, ದೇವನಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಪಿಯುಸಿ ವಿದ್ಯಾರ್ಥಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಅತ್ತಿಬೆಲೆ ಕಾಲೇಜಿನ ವಿದ್ಯಾರ್ಥಿ ಪೂರ್ಣಚಂದ್ರ (18), ‘ಬಿಡದಿಯ ಹೋಟೆಲ್‌ವೊಂದರಲ್ಲಿ ತಟ್ಟೆ ಇಡ್ಲಿ ಚೆನ್ನಾಗಿ ಮಾಡುತ್ತಾರೆ. ಸ್ನೇಹಿತರ ಜತೆ ಅಲ್ಲಿಗೆ ಹೋಗಿ ಇಡ್ಲಿ ತಿಂದು ಬರುತ್ತೇನೆ’ ಎಂದು ತಾಯಿಗೆ ಹೇಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದ.

‘ಸ್ನೇಹಿತರು ಮೂರು ಬೈಕ್‌ಗಳಲ್ಲಿ ನೈಸ್ ರಸ್ತೆ ಮೇಲ್ಸೇತುವೆ ಬಳಿ ಸಾಗುತ್ತಿದ್ದಾಗ ನಗರದಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪೂರ್ಣಚಂದ್ರನ ಬೈಕ್‌ಗೆ ಡಿಕ್ಕಿ ಹೊಡೆಯಿತು. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಆತ ಸ್ಥಳದಲ್ಲೇ ಕೊನೆಯುಸಿರೆಳೆದ. ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಕೆಂಗೇರಿ ಪೊಲೀಸರು ಹೇಳಿದರು.

ಟೆಕಿ ಸಾವು: ಪಾರ್ಟಿ ಮುಗಿಸಿ ಮರಳುತ್ತಿದ್ದ ವೇಳೆ ಫುಟ್‌ಪಾತ್‌ಗೆ ಬೈಕ್ ಅಪ್ಪಳಿಸಿ ಸಾಫ್ಟ್‌ವೇರ್ ಉದ್ಯೋಗಿ ಸೂರ್ಯತೇಜ (27) ಮೃತಪಟ್ಟಿದ್ದಾರೆ.

ಅವರು ಆಂಧ್ರಪ್ರದೇಶವರಾಗಿದ್ದು, ರಾಮಮೂರ್ತಿನಗರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ನೆಲೆಸಿದ್ದರು. ಬುಧವಾರ ಕೆಲಸ ಮುಗಿಸಿಕೊಂಡು ಕಲ್ಕೆರೆಯ ಗೆಳೆಯನ ಮನೆಗೆ ತೆರಳಿದ್ದ ಸೂರ್ಯತೇಜ, ನಸುಕಿನವರೆಗೂ ಪಾರ್ಟಿ ಮಾಡಿದ್ದರು. ಅಲ್ಲಿಂದ 4 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಪಿ.ಜಿ.ಕಟ್ಟಡಕ್ಕೆ ವಾಪಸಾಗುತ್ತಿದ್ದಾಗ ಆಲದಮರ ಜಂಕ್ಷನ್‌ನಲ್ಲಿ ದುರಂತ ಸಂಭವಿಸಿದೆ.

ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿರುವ ಅವರು, ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಬೈಕ್, ಪಾದಚಾರಿ ಮಾರ್ಗದ ತಡೆಗೋಡೆಗೆ ಗುದ್ದಿದೆ. ಆಗ ಸೂರ್ಯತೇಜ ಎಗರಿ ಮುಂದೆ ಬಿದ್ದಿದ್ದು, ಬಟ್ಟೆ ಮಳಿಗೆಯ ಗೋಡೆಗೆ ತಲೆ ಬಡಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಮಾಹಿತಿ ನೀಡಿದರು. 

ಕಾರ್ಮಿಕ ದುರ್ಮರಣ: ಬಚ್ಚಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ಕಾರ್ಮಿಕ ಮಹತಾಪ್ ನಾಯಕ್ (25) ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ಒಡಿಶಾದ ನಾಯಕ್, ಒಂದೂವರೆ ವರ್ಷದಿಂದ ದೇವನಹಳ್ಳಿಯ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುತ್ತಿದ್ದರು.

ಬುಧವಾರ ರಾತ್ರಿ 8.30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಗಾಯಾಳುವನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದೆವು. ಚಿಕಿತ್ಸೆಗೆ ಸ್ಪಂದಿಸದ ಅವರು, ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರೆಳೆದರು. ಕಾರು ಚಾಲಕನಿಗಾಗಿ ಶೋಧ ನಡೆಯುತ್ತಿದೆ ಎಂದು ದೇವನಹಳ್ಳಿ ಸಂಚಾರ ಪೊಲೀಸರು
ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !