ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಿ

7
ಸರ್ಕಾರಿ ಪುರಸ್ಕೃತ ಯೋಜನೆಗಳ ಪ್ರಗತಿ ಸಾಧಿಸಿ: ವಿಜಯಾ ಬ್ಯಾಂಕ್ ಎಜಿಎಂ ಬ್ಯಾಪ್ಟಿಸ್ಟ್ ಲೋಬೊ

ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಿ

Published:
Updated:

ಹುಬ್ಬಳ್ಳಿ: ಸರ್ಕಾರಿ ಪುರಸ್ಕೃತ ಯೋಜನೆಗಳ ಸಾಧನೆ ಸಮಾಧಾನಕರವಾಗಿಲ್ಲ, ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡುವ ಮೂಲಕ ಇನ್ನಷ್ಟು ಪ್ರಗತಿ ಸಾಧಿಸಿ ಎಂದು ವಿಜಯಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಬ್ಯಾಪ್ಟಿಸ್ಟ್ ಲೋಬೊ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬ್ಯಾಂಕ್‌ಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಗುರಿ ಸಾಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಲೀಡ್ ಬ್ಯಾಂಕ್‌ ಸಭೆಗಳಲ್ಲಿ ಭಾಗವಹಿಸುವ ಮೂಲಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸಾಲ ಯೋಜನೆಗಳಲ್ಲಿ ಬಂದ ಅರ್ಜಿಗಳನ್ನು ಸಹ ಕಾಲ ಮಿತಿಯಲ್ಲಿಯೇ ವಿಲೇವಾರಿಗೊಳಿಸಿ ಎಂದು ಅವರು ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಉತ್ತಮ ಸಾಧನೆಯಾಗಿದ್ದು, ಬ್ಯಾಂಕ್‌ಗಳ ಕಾರ್ಯ ಶ್ಲಾಘನೀಯ. ಈ ಯೋಜನೆಯಲ್ಲಿ ಒಟ್ಟು 33,161 ಫಲಾನುಭವಿಗಳಿಗೆ ₹405 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಸಾಲಮನ್ನಾ ಯೋಜನೆಗೆ ಸಂಬಂಧಿಸಿದಂತೆ ರೈತರ ಸ್ವಯಂ ಘೋಷಣಾ ಪತ್ರ ಹಾಗೂ ದಾಖಲೆಗಳ ನೋಂದಣಿ ವಿಷಯದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ ಮೊತ್ತ ₹17,516 ಕೋಟಿ ಇದ್ದರೆ, ಮುಂಗಡದ ಮೊತ್ತ ₹10,651 ಕೋಟಿ ಇದೆ. ನಗದು ಮತ್ತು ಠೇವಣಿ ಅನುಪಾತ ಶೇ60.81 ಇದೆ. ಆದರೆ 16 ಬ್ಯಾಂಕ್‌ಗಳ ನಗದು ಠೇವಣಿ ಅನುಪಾತ ಶೇ60ಕ್ಕಿಂತ ಕಡಿಮೆ ಇದೆ. ಆದ್ಯತಾ ವಲಯಕ್ಕೆ ₹3,335 ಕೋಟಿ ಸಾಲ ನೀಡುವ ಗುರಿ ಹೊಂದಲಾಗಿತ್ತು, ಆದರೆ ಸೆಪ್ಟೆಂಬರ್ ವರೆಗೆ ₹1,352 ಕೋಟಿ ಸಾಲ ನೀಡಲಾಗಿದೆ. ಅಂದರೆ ಶೇ40.56ರಷ್ಟು ಮಾತ್ರ ಸಾಧನೆಯಾಗಿದೆ ಎಂದರು.

ಕೃಷಿ ಕ್ಷೇತ್ರಕ್ಕೆ ₹1,863 ಕೋಟಿ ಸಾಲ ನೀಡುವ ಗುರಿ ಹೊಂದಿದ್ದರೆ, ಕೇವಲ ₹528 ಕೋಟಿ ಮಾತ್ರ ಸಾಲ ನೀಡಲಾಗಿದೆ. ಅಂದರೆ ಕೇವಲ ಶೇ28.33ರಷ್ಟು ಸಾಧನೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಗ್ರಾಹಕರು ಹರಿದ ನೋಟುಗಳನ್ನು ತಂದಾಗ ಅದನ್ನು ಬದಲಾಯಿಸಿಕೊಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿ ಎನ್‌.ಬಿ. ದತ್ತಾತ್ರೇಯ ಸೂಚನೆ ನೀಡಿದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಕೆ. ಈಶ್ವರ, ನಬಾರ್ಡ್ ಉಪ ವ್ಯವಸ್ಥಾಪಕಿ ಶೀಲಾ ಭಂಡಾರ್ಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !