ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸ್ತೂಲ್ ಮಾರಾಟ: ನಟ ಸೆರೆ

Last Updated 4 ನವೆಂಬರ್ 2018, 20:47 IST
ಅಕ್ಷರ ಗಾತ್ರ

ಬೆಂಗಳೂರು: ಪಿಸ್ತೂಲ್ ಹಾಗೂ ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ‘ಸರ್ಕಾರ್’ ಕನ್ನಡ ಚಿತ್ರದ ನಾಯಕ ನಟ ಜಗದೀಶ್ ಎಸ್. ಹೊಸಮಠ (31) ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜಗದೀಶ್ ಹುಬ್ಬಳ್ಳಿಯವನು. ಬೆಂಗಳೂರಿನ ಇಸ್ಲಾಂಪುರದ ಮಹಮದ್ ನಿಜಾಮ್ (25), ಹೊಸತಿಪ್ಪಸಂದ್ರದ ಬಿ.ಜಿ.ಸತೀಶ್ ಕುಮಾರ್ (44) ಹಾಗೂ ಸೈಯದ್ ಸಮೀರ್ ಅಹಮದ್ (32) ಎಂಬುವರನ್ನೂ ವಶಕ್ಕೆ ಪಡೆಯಲಾಗಿದೆ. ಬಂಧಿತರ ಬಳಿ ಎರಡು ಪಿಸ್ತೂಲ್ ಹಾಗೂ 21 ಜೀವಂತ ಗುಂಡುಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದರು.

ಪಿಸ್ತೂಲ್ ಕೇಳಿದ್ದು ಸಮೀರ್: ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಸಮೀರ್, ಎ.ನಾರಾಯಣಪುರದ ‘ಗೋಲ್ಡನ್ಫಾಮ್ಸ್‌’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದ. ₹ 500 ಹಾಗೂ₹ 1,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಸರ್ಕಾರ ರದ್ದುಗೊಳಿಸಿದ ಬಳಿಕ ಈತ ನೋಟು ಬದಲಾವಣೆ ದಂಧೆಗೆ ಇಳಿದಿದ್ದ.

ಅನಿವಾಸಿ ಭಾರತೀಯರ ಮೂಲಕ ಹೊರರಾಜ್ಯಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದ. ಈ ಮಾಹಿತಿ ಆಧರಿಸಿ ಇದೇ ಫೆ.24ರ ರಾತ್ರಿ ಆತನ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದ್ದ ಕೊತ್ತನೂರು ಪೊಲೀಸರು,₹ 1.95 ಕೋಟಿ ಮೌಲ್ಯದ ನೋಟುಗಳನ್ನು ಜಪ್ತಿ ಮಾಡಿದ್ದರು. ಆದರೆ, ಸಮೀರ್ ಕೂದಲೆಳೆ ಅಂತರದಲ್ಲಿತಪ್ಪಿಸಿಕೊಂಡಿದ್ದ.

‘ಸಮೀರ್ ಬಳಿಯಿದ್ದ ತಮ್ಮ ಹಣವನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಂತೆಯೇ ದಂಗಾದ ಸಾರ್ವಜನಿಕರು, ಆತನ ವಿರುದ್ಧ ಕೊತ್ತನೂರು ಠಾಣೆಗೆ ದೂರುಗಳನ್ನು ಕೊಟ್ಟಿದ್ದರು. ಮತ್ತೆ ಕೆಲವರು ಮೊಬೈಲ್ ಮೂಲಕ ಆತನನ್ನು ಸಂಪರ್ಕಿಸಿ, ತಮ್ಮ ಹಣ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ್ದ ಸಮೀರ್, ಆತ್ಮರಕ್ಷಣೆಗಾಗಿ ಪಿಸ್ತೂಲ್ ಕೊಡಿಸುವಂತೆ ಗೆಳೆಯ ಸತೀಶ್‌ಗೆ ಕೇಳಿದ್ದ. ಆತ ಆ ವಿಚಾರವನ್ನು ನಿಜಾಮ್‌ಗೆ ತಿಳಿಸಿದ್ದ.

ಎಂಟ್ರಿ ಕೊಟ್ಟ ಹೀರೋ:‘ನಿಜಾಮ್‌ನ ಸ್ನೇಹಿತ ಮುನ್ನಾ ಎಂಬಾತ ಧಾರವಾಡದಲ್ಲಿ ಗನ್‌ ಡೀಲರ್ ಆಗಿದ್ದಾನೆ. ಆತ ವಾರಣಾಸಿಯಿಂದ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡು ರಾಜ್ಯದಲ್ಲಿ ಮಾರುತ್ತಾನೆ. ಸಮೀರ್‌ಗೆ ಪಿಸ್ತೂಲ್ ಕೊಡಿಸಲು ನಿಜಾಮ್ ಆ ಗೆಳೆಯನ ಮೊರೆ ಹೋಗಿದ್ದ. ಅದಕ್ಕೆ ಆತ, ಧಾರವಾಡಕ್ಕೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿನಿಮಾ ಸೆಟ್ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಪೂರೈಸುವ ನಿಜಾಮ್, ಜಗದೀಶ್‌ನ ‘ಸರ್ಕಾರ್’ ಚಿತ್ರದ ಸೆಟ್‌ಗೂ ಸಾಮಗ್ರಿಗಳನ್ನು ಒದಗಿಸಿದ್ದ. ಈ ಮೂಲಕ ಆತನಿಗೆ ನಟನ ಪರಿಚಯವಾಗಿತ್ತು. ಇದೇ ಗೆಳೆತನದಲ್ಲಿ ಜಗದೀಶ್ ಚಿತ್ರದ ಪ್ರೋಮೋ ಬಿಡುಗಡೆಗೆಂದು ನಿಜಾಮ್‌ನಿಂದ ₹ 5 ಲಕ್ಷ ಸಾಲ ಪಡೆದಿದ್ದ. ಸಕಾಲಕ್ಕೆ ಹಣ ಮರಳಿಸದ ಕಾರಣ ಪರಸ್ಪರರ ನಡುವೆ ವೈಮನಸ್ಸು ಉಂಟಾಗಿತ್ತು.’

‘ಸೆ.21ರಂದು ಜಗದೀಶ್ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದ. ಆಗ ಆತನಿಗೆ ಕರೆ ಮಾಡಿದ್ದ ನಿಜಾಮ್, ‘ನನ್ನ ಗೆಳೆಯ ಮುನ್ನ ಒಂದು ಪಾರ್ಸಲ್ ಕೊಡುತ್ತಾನೆ. ಬರುವಾಗ ಅದನ್ನು ತೆಗೆದುಕೊಂಡ ಬಾ’ ಎಂದಿದ್ದ. ಅಂತೆಯೇ ಆತ ಮುನ್ನಾನಿಂದ ಪಾರ್ಸಲ್ ತೆಗೆದುಕೊಂಡು ಬಂದು ನಿಜಾಮ್‌ಗೆ ತಲುಪಿಸಿದ್ದ’ ಎಂದು ಮಾಹಿತಿ ನೀಡಿದರು.

ಸಮೀರ್, ಜಗದೀಶ್, ಸತೀಶ್, ನಿಜಾಮ್
ಸಮೀರ್, ಜಗದೀಶ್, ಸತೀಶ್, ನಿಜಾಮ್

ಇಸ್ಲಾಂಪುರದಲ್ಲಿ ಸೆರೆ: ನಿಜಾಮ್ ಪಿಸ್ತೂಲ್ ಡೀಲ್‌ಗೆ ಕೈ ಹಾಕಿರುವ ಬಗ್ಗೆ ಭಾತ್ಮೀದಾರರಿಂದ ಮಾಹಿತಿ ಬಂತು. ಸೆ.23ರಂದು ಇಸ್ಲಾಂಪುರದಲ್ಲಿ ಕಾರ್ಯಾಚರಣೆ ನಡೆಸಿ, ನಿಜಾಮ್ ಹಾಗೂ ಜಗದೀಶ್ ಅವರನ್ನು ವಶಕ್ಕೆ ಪಡೆದೆವು. ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಆಧರಿಸಿ ನ.1ರಂದು ಇನ್ನಿಬ್ಬರನ್ನು ಬಂಧಿಸಿದೆವು.

**

ಪರಿಸ್ಥಿತಿಯ ದುರ್ಲಾಭ

‘₹ 1.30 ಕೋಟಿ ವ್ಯಯಿಸಿ ಸಿನಿಮಾ ಮಾಡಿದ್ದೆ. ಆದರೆ, ಕಲೆಕ್ಷನ್ ಆಗಿದ್ದು₹ 13 ಲಕ್ಷ ಮಾತ್ರ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೆಲವರ ಬಳಿ ಸಾಲಮಾಡಿದ್ದೆ. ಅಂತೆಯೇ ನಿಜಾಮ್‌ನ ಬಳಿಯೂ ಹಣ ಪಡೆದಿದ್ದೆ. ನನ್ನ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡ ಆತ, ಪಿಸ್ತೂಲ್ ತರಲು ನನ್ನನ್ನು ಬಳಸಿಕೊಂಡಿದ್ದಾನೆ. ಆ ಪಾರ್ಸಲ್‌ನಲ್ಲಿ ಪಿಸ್ತೂಲ್ ಇತ್ತೆಂದು ನನಗೆ ಗೊತ್ತಿರಲಿಲ್ಲ’ ಎಂದು ಜಗದೀಶ್ ಹೇಳಿಕೆ ಕೊಟ್ಟಿದ್ದಾನೆ.

ಆದರೆ, ಕಮಿಷನ್ ಆಸೆಯಿಂದ ನಟ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT